ಹಲವು ತಿಂಗಳ ವಿಳಂಬದ ಬಳಿಕ ದೇಶದ ಮೊದಲ ವಂದೇ ಭಾರತ ಸ್ಲೀಪರ್ ರೈಲಿಗೆ ನ.17ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಗುವಾಹಟಿ ಮತ್ತು ಕೋಲ್ಕತಾ ನಡುವೆ ಇದು ಸಂಚರಿಸಲಿದ್ದು, ಸಾಮಾನ್ಯ ಪ್ರಯಾಣಿಕರಿಗಷ್ಟೇ ಮೀಸಲಿರಲಿದೆ
ಕೋಲ್ಕತಾ: ಹಲವು ತಿಂಗಳ ವಿಳಂಬದ ಬಳಿಕ ದೇಶದ ಮೊದಲ ವಂದೇ ಭಾರತ ಸ್ಲೀಪರ್ ರೈಲಿಗೆ ನ.17ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಗುವಾಹಟಿ ಮತ್ತು ಕೋಲ್ಕತಾ ನಡುವೆ ಇದು ಸಂಚರಿಸಲಿದ್ದು, ಸಾಮಾನ್ಯ ಪ್ರಯಾಣಿಕರಿಗಷ್ಟೇ ಮೀಸಲಿರಲಿದೆ. ಯಾವುದೇ ವಿಐಪಿ ಕೋಟಾ ಇಲ್ಲ ಎಂಬುದು ವಿಶೇಷ.
ದೇಶ ಪೂರ್ವ ಮತ್ತು ಈಶಾನ್ಯ ರಾಜ್ಯಗಳೊಂದಿಗಿನ ಸಂಪರ್ಕ ಬೆಸೆಯಲು ಸಹಕಾರಿಯಾಗಲಿರುವ ಈ ಸ್ಲೀಪರ್ ರೈಲಿನಲ್ಲಿ ವಿಐಪಿ ಅಥವಾ ತುರ್ತು ಕೋಟಾ ವ್ಯವಸ್ಥೆ ಇರುವುದಿಲ್ಲ. ಹಿರಿಯ ರೈಲ್ವೆ ಅಧಿಕಾರಿಗಳು ಸಹ ಪಾಸ್ ಬಳಸಿಕೊಂಡು ಪ್ರಯಾಣ ಮಾಡುವಂತಿಲ್ಲ. ಬದಲಿಗೆ ಕೇವಲ ದೃಢೀಕರಣಗೊಂಡ ಟಿಕೆಟ್ ಇರುವವರಷ್ಟೇ ಈ ರೈಲನ್ನೇರಬಹುದು. ಕಾಯುವಿಕೆಯನ್ನು ತಪ್ಪಿಸುವ ಸಲುವಾಗಿ ಆರ್‌ಎಸಿ (ಅನ್ಯರ ಟಿಕೆಟ್ ರದ್ದಾದರಷ್ಟೇ ಸೀಟು ಸಿಗುವ ವ್ಯವಸ್ಥೆ) ಕೂಡ ಇದರಲ್ಲಿರುವುದಿಲ್ಲ.
ರೈಲು ಹೇಗಿದೆ?:
ರೈಲಿನಲ್ಲಿ 16 ಕೋಚ್ ಇರಲಿವೆ. ಎಲ್ಲ ಹವಾನಿಯಂತ್ರಿತ. 3ಎಸಿಯ 11, 2ಎಸಿಯ 4 ಹಾಗೂ 1 ಎಸಿಯ 1 ಬೋಗಿ ಇರುತ್ತವೆ. ಒಟ್ಟು 823 ಬರ್ತ್‌ಗಳಿರಲಿದ್ದು, ಇದರಲ್ಲಿ 611 3ಎಸಿ, 188 2 ಎಸಿ ಮತ್ತು 24 1 ಎಸಿ ಇರುತ್ತವೆ. ಎಲ್ಲಾ ಬೋಗಿಗಳಲ್ಲಿ ಆರಾಮದಾಯಕ ಆಸನಗಳಿರಲಿದ್ದು, ಸ್ವಯಂಚಾಲಿತ ಬಾಗಿಲುಗಳಿರುತ್ತವೆ. ರೈಲಿನ ಚಲನೆಯಿಂದ ಉಂಟಾಗುವ ಆಘಾತ ತಪ್ಪಿಸಲು ಹಾಗೂ ಹೊರಗಿನ ಸದ್ದು ಒಳಗಿರುವವರಿಗೆ ತೊಂದರೆಯುಂಟುಮಾಡದಂತೆ ತಡೆಯಲು ವ್ಯವಸ್ಥೆಗಳಿವೆ. ಕವಚ್ ರಕ್ಷಣೆ, ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸೋಂಕುನಿವಾರಕ ತಂತ್ರಜ್ಞಾನವೂ ಇರಲಿದೆ.
ಒಳಗೆ ಏನೇನು ಸಿಗುತ್ತದೆ?:
ವಂದೇ ಭಾರತ್ ಸ್ಲೀಪರ್‌ನಲ್ಲಿ ಆಧುನಿಕ ಸೌಲಭ್ಯಗಳು ಲಭ್ಯವಿರಲಿದ್ದು, ಎಲ್ಲಾ ಪ್ರಯಾಣಿಕರಿಗೆ ಒಂದೇ ನಿಯಮವಿರಲಿದೆ. ಎಲ್ಲರಿಗೂ ಉತ್ತಮ ಗುಣಮಟ್ಟದ ಹಾಸಿಗೆ ಮತ್ತು ಬ್ಲ್ಯಾಂಕೆಟ್ ನೀಡಲಾಗುವುದು. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ರೈಲಲ್ಲಿ ಸ್ಥಳೀಯ ತಿನಿಸುಗಳಷ್ಟೇ ಸಿಗಲಿವೆ. ಇಲ್ಲಿನ ಎಲ್ಲಾ ಸಿಬ್ಬಂದಿ ಸಮವಸ್ತ್ರ ಧರಿಸಿರುತ್ತಾರೆ.
ದರ ಏನು?:
400 ಕಿ.ಮೀ. ಪ್ರಯಾಣ ಇದಾಗಲಿದ್ದು, ಪ್ರಯಾಣಕ್ಕೆ ₹960 (3ಎಸಿ), ₹1,240 (2ಎಸಿ) ಮತ್ತು ₹1,520 (1ಎಸಿ) ದರ ಇರಲಿದೆ.
