ಬೆಂಗಳೂರು : ರಾಜ್ಯದಲ್ಲಿ 2022ರಲ್ಲಿ ಹೆಚ್ಚಳ ಮಾಡಿರುವ ಶೇ.56 ಬದಲು ಶೇ.50 ರಷ್ಟು ಮೀಸಲಾತಿ ಮಿತಿ ಹಾಗೂ ರೋಸ್ಟರ್‌ ಬಿಂದು ಅನ್ವಯ 56,432 ಹುದ್ದೆಗಳಿಗೆ 30 ದಿನಗಳೊಳಗಾಗಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಮೀಸಲಾತಿ ಪ್ರಮಾಣ ಹೆಚ್ಚಳ ಹಾಗೂ ಒಳ ಮೀಸಲಾತಿ ತಿಕ್ಕಾಟದ ಹಿನ್ನೆಲೆ ನೇಮಕಾತಿ ವಿಳಂಬವಾಗುತ್ತಿರುವ ಬಗ್ಗೆ ಉದ್ಯೋಗಾಕಾಂಕ್ಷಿಗಳು ಹೋರಾಟ ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ್ದು, 56,432 ಹುದ್ದೆಗಳಿಗೆ ಈ ಕೂಡಲೇ ನೇಮಕಾತಿ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್‌, ಆರ್ಥಿಕ ಇಲಾಖೆ ಸೇರಿ ಸಂಬಂಧಪಟ್ಟ ಇಲಾಖೆಗಳು ಒಂದು ತಿಂಗಳ ಒಳಗಾಗಿ ಪ್ರಕ್ರಿಯೆ ನಡೆಸಬೇಕು. 2022ಕ್ಕೆ ಮೊದಲು ಜಾರಿಯಲ್ಲಿದ್ದ ಶೇ.50 ರಷ್ಟು ಮೀಸಲಾತಿ ಮಿತಿ ಹಾಗೂ ರೋಸ್ಟರ್‌ ಬಿಂದು ಅನ್ವಯವೇ 56,432 ಹುದ್ದೆ ನೇಮಕ ಮಾಡಬೇಕು ಎಂದು ನಿರ್ಧರಿಸಿರುವುದಾಗಿ ತಿಳಿಸಿದರು.


ಮುಂದೆ ಶೇ.6 ಹುದ್ದೆ ಕಾಯ್ದಿರಿಸಲು ನಿರ್ಧಾರ:

ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ ಶೇ.56ಕ್ಕೆ ಹೆಚ್ಚಳ ಮಾಡಲು ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಇದರಿಂದ ಎಸ್ಸಿ ಮೀಸಲಾತಿಯನ್ನು ಶೇ.15 ರಿಂದ 17ಕ್ಕೆ ಹಾಗೂ ಎಸ್ಟಿ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಳ ಮಾಡಲು ಅವಕಾಶವಿಲ್ಲ. ಆದರೂ ಅಡ್ವೊಕೇಟ್‌ ಜನರಲ್‌ ಅಭಿಪ್ರಾಯದಂತೆ ಹೈಕೋರ್ಟ್‌ ಅಂತಿಮ ತೀರ್ಮಾನಕ್ಕೆ ಒಳಪಟ್ಟು ಮುಂದಿನ ನೇಮಕಾತಿ ಅಧಿಸೂಚನೆಗಳಲ್ಲಿ ಶೇ.6 ರಷ್ಟು ಹುದ್ದೆ ಕಾಯ್ದಿರಿಸಬೇಕು. ಕೋರ್ಟ್‌ ಶೇ.56 ರಷ್ಟು ಮೀಸಲಾತಿಗೆ ಅನುಮತಿ ನೀಡಿದರೆ ಎಸ್ಸಿಗೆ ಶೇ. 2 ಹಾಗೂ ಎಸ್ಟಿಗೆ ಶೇ.4 ರಷ್ಟು ಮೀಸಲಾತಿ ಹೆಚ್ಚಳ ಮಾಡಬಹುದು ಎಂದು ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದರು.

ತಕ್ಷಣ 56,432 ಹುದ್ದೆ ನೇಮಕ:

ಕೆಪಿಎಸ್ಸಿ, ಕೆಇಎ ಅಡಿ 4,409 ಹುದ್ದೆ ನೇಮಕ ಅಂತಿಮಗೊಂಡಿವೆ. ಉಳಿದಂತೆ 371 ಜೆ ಅಡಿ 32132 ಹುದ್ದೆ ಹಾಗೂ ಆರ್ಥಿಕ ಇಲಾಖೆ ಹೊಸದಾಗಿ ನೇಮಕ ಮಾಡಿಕೊಳ್ಳಲು ಅನುಮೋದನೆ ನೀಡಿರುವ 24,300 ಹುದ್ದೆ ಸೇರಿ 56,432 ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ.

ಸುದೀರ್ಘ ಚರ್ಚೆ:

ಪರಿಷ್ಕೃತ ಮೀಸಲಾತಿ ಹಾಗೂ ಒಳ ಮೀಸಲಾತಿ ಅನ್ವಯವೇ 56,432 ಹುದ್ದೆಯನ್ನೂ ನೇಮಿಸಬೇಕು ಎಂಬ ಆಗ್ರಹ ಇತ್ತು. ಈ ಹಿನ್ನೆಲೆಯಲ್ಲಿ ಸಚಿವರ ದಲಿತ ಸಚಿವರ ಮನವೊಲಿಸಲು ಸುದೀರ್ಘ ಚರ್ಚೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರವು 1995ರಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಶೇ.50 ರಷ್ಟು ಮೀಸಲಾತಿ ನಿಗದಿಪಡಿಸಿತ್ತು. ಇದರಡಿ ಹಿಂದುಳಿದ ವರ್ಗಗಳಿಗೆ ಶೇ.32, ಎಸ್ಸಿಗೆ ಶೇ.15, ಎಸ್‌ಟಿಗೆ ಶೇ.3 ಹಾಗೂ ಶೇ.50 ರಷ್ಟು ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಇತ್ತು.

2022ರಲ್ಲಿ ಶೈಕ್ಷಣಿಕ, ನೇಮಕಾತಿ ಹಾಗೂ ಹುದ್ದೆಗಳಲ್ಲಿ ಎಸ್ಸಿ, ಎಸ್ಟಿಗೆ ಮೀಸಲಾತಿ ಕಲ್ಪಿಸಲು ವಿಧೇಯಕ ಮಾಡಿ ಎಸ್ಸಿಗೆ ಶೇ.15ರ ಬದಲು ಶೇ.17 ಹಾಗೂ ಎಸ್ಟಿಗೆ ಶೇ.3ರ ಬದಲು ಶೇ.7ಕ್ಕೆ ಹೆಚ್ಚಳ ಮಾಡಲಾಯಿತು. ತನ್ಮೂಲಕ ಒಟ್ಟು ಮೀಸಲಾತಿ ಪ್ರಮಾಣ ಶೇ.56ಕ್ಕೆ ಹೆಚ್ಚಳ ಮಾಡಲಾಗಿತ್ತು. 2022ರಲ್ಲಿ ರೋಸ್ಟರ್‌ ಬಿಂದು ಸಹ ಪರಿಷ್ಕರಿಸಲಾಯಿತು. ಆದರೆ, ಶೇ.56 ರಷ್ಟು ಮೀಸಲಾತಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಒಳ ಮೀಸಲಾತಿ ಬಗ್ಗೆಯೂ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇದೆ. ಹೀಗಾಗಿ ಶೇ.50 ರಷ್ಟು ಮೀಸಲಾತಿ ಮಿತಿ ಅಡಿಯಲ್ಲೇ ನೇಮಕಾತಿ ಅನಿವಾರ್ಯ. ಮುಂದಿನ ಅಧಿಸೂಚನೆಗಳಲ್ಲಿ ಶೇ.6 ರಷ್ಟು ಹುದ್ದೆ ಕಾಯ್ದಿರಿಸಬಹುದು ಎಂದು ತೀರ್ಮಾನಿಸಿರುವುದಾಗಿ ಮೂಲಗಳು ತಿಳಿಸಿವೆ.

371 ಜೆ ಅಡಿ 32 ಸಾವಿರ ಹುದ್ದೆ ಭರ್ತಿ

ಕೆಪಿಎಸ್ಸಿ, ಕೆಇಎ ಅಡಿ 4,409 ಹುದ್ದೆ, 371 ಜೆ ಅಡಿ 32.132 ಹುದ್ದೆ, ಆರ್ಥಿಕ ಇಲಾಖೆ ಹೊಸದಾಗಿ ನೇಮಕ ಮಾಡಿಕೊಳ್ಳಲು ಅನುಮೋದನೆ ನೀಡಿರುವ 24,300 ಹುದ್ದೆ ಸೇರಿ 56,432 ಹುದ್ದೆಗಳಿಗೆ ಅನುಮೋದನೆ.