ಸಾರಾಂಶ
ಕೊಪ್ಪಳ: ಯುವನಿಧಿ ಸೌಲಭ್ಯ ಕುರಿತು ಇಲಾಖಾ ವತಿಯಿಂದ ವ್ಯಾಪಕ ಪ್ರಚಾರ ಕೈಗೊಂಡು ನಿರುದ್ಯೋಗಿ ಯುವಕರು ಯುವನಿಧಿ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವಂತೆ ಕ್ರಮವಹಿಸಿ ಎಂದು ಕೊಪ್ಪಳ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್. ಬಾಲಚಂದ್ರನ್ ಅವರು ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿಯ ತಾಪಂ ಸಭಾಂಗಣದಲ್ಲಿ ಸೋಮವಾರ ಜರುಗಿದ ಕೊಪ್ಪಳ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ಯಾಸ್ ಏಜೆನ್ಸಿಗಳು ಗ್ರಾಹಕರಿಂದ ಪ್ರತಿ ಸಿಲಿಂಡರಿಗೆ ₹920ರಂತೆ ಮಾರಾಟ ಮಾಡುತ್ತಿವೆ. ಆದರೆ ಸಾಗಾಣಿಕೆ ವೆಚ್ಚ ಸೇರಿದಂತೆ ಒಟ್ಟು ₹890 ಇರುತ್ತದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಇದರ ಕುರಿತು ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಹಾಗೂ ಪೆಟ್ರೋಲ್ ಬಂಕ್‌ನಲ್ಲಿ ಗಾಳಿ ತುಂಬುವ ಯಂತ್ರ ಹಾಗೂ ಶೌಚಾಲಯ ವ್ಯವಸ್ಥೆ ನಿರ್ವಹಿಸಲು ನಿರ್ದೇಶನ ನೀಡಿ ಎಂದು ಅಧಿಕಾರಿಗಳಿಗೆ ಹೇಳಿದರು.ಕೊಪ್ಪಳ ತಹಸೀಲ್ದಾರ್ ವಿಠ್ಠಲ್ ಚೌಗಲಾ ಮಾತನಾಡಿ, ಗ್ಯಾಸ್ ಏಜೆನ್ಸಿಯವರನ್ನು ವಿಚಾರಿಸಿದ್ದು, 5 ಕಿಮೀ ವ್ಯಾಪ್ತಿಯೊಳಗೆ ಉಚಿತವಾಗಿ ಸಾಗಾಣಿಕೆ ಮಾಡಲಾಗುತ್ತದೆ. ಹೆಚ್ಚುವರಿಯಾಗಿ ಪ್ರತಿ ಕಿಮೀಗೆ ₹1.60 ಪೈಸೆ ಸಾಗಾಣಿಕೆ ವೆಚ್ಚ ಪಡೆಯಲು ಅವಕಾಶವಿರುವ ಕುರಿತು ಮಾಹಿತಿ ನೀಡಿದರು. ಗ್ಯಾಸ್ ಏಜೆನ್ಸಿಯವರು ತಮ್ಮ ಅಂಗಡಿಯಲ್ಲಿ ಸಂದರ್ಶನ ಪುಸಕ್ತವನ್ನು ಕಡ್ಡಾಯವಾಗಿ ನಿರ್ವಹಿಸುವಂತೆ ತಿಳಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ರಾಮಣ್ಣ ಚೌಡ್ಕಿ ಅವರು ಮಾತನಾಡಿ, ಇರಕಲ್ಲಗಡಾ ಮಾರ್ಗವಾಗಿ ಸಂಚರಿಸುವ ಬಸ್‌ಗಳನ್ನು ಟಣಕನಕಲ್‌ನ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಪದವಿಪೂರ್ವ ಕಾಲೇಜು ಹತ್ತಿರ ಕೋರಿಕೆಯ ಬಸ್ ನಿಲುಗಡೆ ಮಾಡುವಂತೆ ಇಲಾಖಾಧಿಕಾರಿಗಳಿಗೆ ತಿಳಿಸಿದರು.ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಐದು ಗ್ಯಾರಂಟಿ ಯೋಜನೆಗಳ ಪ್ರಗತಿ ವರದಿಯ ಕುರಿತು ಸಭೆಗೆ ಮಾಹಿತಿ ನೀಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಅನುಷ್ಠಾನ ಸಮಿತಿ ಸದಸ್ಯರಾದ ದೇವರಾಜ ನಡುವಿನಮನಿ, ರಮೇಶ ಹ್ಯಾಟಿ, ಜ್ಯೋತಿ ಗೊಂಡಬಾಳ, ಸವಿತಾ ಗೋರಂಟ್ಲಿ, ಅನ್ನದಾನಯ್ಯಸ್ವಾಮಿ, ಪರಶುರಾಮ ಕೊರವರ, ಮೆಹಬೂಬಪಾಷಾ ಮಾನ್ವಿ, ಲಕ್ಷ್ಮಣ ಡೊಳ್ಳಿನ, ಅನ್ವರ ಹುಸೇನ ಗಡಾದ, ಪಂಚ ಗ್ಯಾರಂಟಿ ಯೋಜನೆಗಳ ಇಲಾಖಾಧಿಕಾರಿಗಳು, ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))