ನಗರದ ರೈಲ್ವೆ ನಿಲ್ದಾಣದಲ್ಲಿ ಪುಸ್ತಕಪ್ರೇಮಿ ಪ್ರಯಾಣಿಕರಿಗಾಗಿ ವಿ.ಸೋಮಣ್ಣ ಅಭಿಮಾನಿ ಬಳಗದವರು ಸ್ಥಾಪಿಸಿರುವ ‘ಪುಸ್ತಕ ಗೂಡು’ ಮಿನಿ ಪುಸ್ತಕ ಮಳಿಗೆಯನ್ನು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶನಿವಾರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುನಗರದ ರೈಲ್ವೆ ನಿಲ್ದಾಣದಲ್ಲಿ ಪುಸ್ತಕಪ್ರೇಮಿ ಪ್ರಯಾಣಿಕರಿಗಾಗಿ ವಿ.ಸೋಮಣ್ಣ ಅಭಿಮಾನಿ ಬಳಗದವರು ಸ್ಥಾಪಿಸಿರುವ ‘ಪುಸ್ತಕ ಗೂಡು’ ಮಿನಿ ಪುಸ್ತಕ ಮಳಿಗೆಯನ್ನು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶನಿವಾರ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಸಚಿವರು, ಈಗ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಓದುವ ಆಸಕ್ತಿ ಬೆಳೆಸಲು ಇಂತಹ ಪುಸ್ತಕ ಗೂಡು ಪ್ರೇರಣೆಯಾಗುತ್ತದೆ. ಬಸ್ ನಿಲ್ದಾಣ, ಉದ್ಯಾನವನ ಮುಂತಾದ ಜನ ಸೇರುವ ಕಡೆ ಪುಸ್ತಕ ಗೂಡು ಸ್ಥಾಪನೆ ಮಾಡುವಂತೆ ಸಲಹೆ ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಇದೊಂದು ವಿನೂತನ ಪ್ರಯೋಗ. ಪುಸ್ತಕ ಗೂಡಿನಲ್ಲಿ ಉಚಿತವಾಗಿ ಪುಸ್ತಕ ಪಡೆದು ಓದಿ ಅಲ್ಲಿಯೇ ಇಡಬೇಕು, ಬೇಕಾದವರು ಮನೆಗೆ ತೆಗೆದುಕೊಂಡು ಹೋಗಿ ಓದಿದ ನಂತರ ತಂದಿಡಬಹುದು. ಓದುಗರು ತಮ್ಮ ಇಷ್ಟದ ಪುಸ್ತಕಗಳನ್ನು ಪುಸ್ತಕ ಗೂಡಿಗೆ ತಂದಿಟ್ಟು ಬೇರೆಯವರು ಓದಲು ಸಹಕರಿಸಬಹುದು ಎಂದರು. ನಗರಪಾಲಿಕೆ ಮಾಜಿ ಸದಸ್ಯೆ ಗಿರಿಜಾ ಧನಿಯಾಕುಮಾರ್ ಮಾತನಾಡಿ, ಪ್ರಯಾಣಿಕರು ರೈಲಿಗೆ ಕಾಯುವ ಸಮಯದಲ್ಲಿ ಮೊಬೈಲ್ ನೋಡುವ ಬದಲು ಪುಸ್ತಕ ಓದಿದರೆ ಜ್ಞಾನ ಬೆಳೆಯುತ್ತದೆ. ಕನ್ನಡ ಭಾಷೆಯ ಬೆಳವಣಿಗೆಯೂ ಆಗುತ್ತದೆ. ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವಂತೆ ಮನವಿ ಮಾಡಿದರು.ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಈಗ ಗ್ರಂಥಾಲಯಗಳಿಗೆ ಹೋಗಿ ಓದುವವರ ಸಂಖ್ಯೆ ಕಡಿಮೆಯಾಗಿದೆ. ಪುಸ್ತಕ ಪ್ರೀತಿ ಬೆಳೆಯಬೇಕು. ನಗರದ ಬಸ್ ನಿಲ್ದಾಣ, ಗಾಜಿನ ಮನೆಯಲ್ಲಿ ಪುಸ್ತಕ ಗೂಡು ಸ್ಥಾಪಿಸಲು ಸಲಹೆ ಮಾಡಿದ ಅವರು, ಈ ಮೂಲಕ ಕತ್ತಲೆಯಲ್ಲಿರುವ ಪುಸ್ತಕಗಳಿಗೆ ಬೆಳಕು ತೋರಿದಂತಾಗುತ್ತದೆ ಎಂದರು.ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್ ಮಾತನಾಡಿ, ಓದುಗಳ ಪ್ರತಿಕ್ರಿಯೆ ನೋಡಿಕೊಂಡು ಪುಸ್ತಕ ಗೂಡನ್ನು ವಿಸ್ತರಿಸುವ ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪನೆ ಮಾಡಿ ಕನ್ನಡ ಪುಸ್ತಕ ಓದುವ ಹವ್ಯಾಸವನ್ನು ಅಭಿಯಾನವಾಗಿ ಮಾಡುವುದಾಗಿ ಹೇಳಿದರು.ಗಂಗಾ ಆಸ್ಪತ್ರೆಯ ಡಾ.ಎಚ್.ಬಿ.ಎಂ.ಹಿರೇಮಠ, ಸಿದ್ಧಗಂಗಾ ಕಾಲೇಜು ಗ್ರಂಥಪಾಲಕಿ ಪರಿಮಳಾ ಸತೀಶ್, ಲೇಖಕಿ ಶಾಲಿನಿ ದೇವಪ್ರಕಾಶ್, ಮುಖಂಡರಾದ ಗುರುರಾಘವೇಂದ್ರ, ಜೆ.ವಿಠಲ್, ರಾಮಚಂದ್ರರಾವ್, ಶಬ್ಬೀರ್ ಅಹ್ಮದ್, ಸಿದ್ಧಲಿಂಗಸ್ವಾಮಿ, ಸತೀಶ್ ಮೊದಲಾದವರು ಭಾಗವಹಿಸಿದ್ದರು.