ಪಶ್ಚಿಮಘಟ್ಟದ ಕಡಿದಾದ ಬೆಟ್ಟ ಶ್ರೇಣಿಯ ಸುಬ್ರಹ್ಮಣ್ಯ ಹಾಗೂ ಸಕಲೇಶಪುರ ನಡುವಿನ ೫೫ ಕಿ. ಮೀ. ಉದ್ದದ ರೈಲ್ವೆ ಮಾರ್ಗಕ್ಕೆ ೨೦೨೩ರ ಡಿಸೆಂಬರ್ ತಿಂಗಳಿನಲ್ಲಿ ೯೩.೫೫ ಕೋಟಿ ರುಪಾಯಿ ವೆಚ್ಚದಲ್ಲಿ ವಿದ್ಯುದ್ದೀಕರಣ ಕಾಮಗಾರಿಗೆ ಚಾಲನೆ ದೊರೆತು ೨೦೨೫ರ ಡಿಸೆಂಬರ್‌ ಅಂತ್ಯಕ್ಕೆ ಕಾಮಗಾರಿ ಮುಕ್ತಾಯಗೊಂಡಿದೆ. ತೀವ್ರ ಕಡಿದಾದ ಬೆಟ್ಟದ ಸಾಲಿನಲ್ಲಿ ವಿದ್ಯುದ್ದೀಕರಣ ಕಾರ್ಯ ರೈಲ್ವೆ ಇಲಾಖೆಗೆ ಸವಾಲಿನ ಕೆಲಸವಾಗಿತ್ತು. ಆದರೆ, ಕೇವಲ ಎರಡು ವರ್ಷದಲ್ಲೆ ಸರಾಗವಾಗಿ ಕಾಮಗಾರಿ ಮುಕ್ತಾಯಗೊಳಿಸುವ ಮೂಲಕ ಸಾಧನೆ ಮಾಡಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ರೈಲ್ವೆ ವಿದ್ಯುದ್ದೀಕರಣ ಕಾರ್ಯವನ್ನು ರೈಲ್ವೆ ಇಲಾಖೆ ಕೇವಲ ಎರಡು ವರ್ಷದಲ್ಲಿ ಪೂರ್ಣಗೊಳಿಸಿದೆ.ಪಶ್ಚಿಮಘಟ್ಟದ ಕಡಿದಾದ ಬೆಟ್ಟ ಶ್ರೇಣಿಯ ಸುಬ್ರಹ್ಮಣ್ಯ ಹಾಗೂ ಸಕಲೇಶಪುರ ನಡುವಿನ ೫೫ ಕಿ. ಮೀ. ಉದ್ದದ ರೈಲ್ವೆ ಮಾರ್ಗಕ್ಕೆ ೨೦೨೩ರ ಡಿಸೆಂಬರ್ ತಿಂಗಳಿನಲ್ಲಿ ೯೩.೫೫ ಕೋಟಿ ರುಪಾಯಿ ವೆಚ್ಚದಲ್ಲಿ ವಿದ್ಯುದ್ದೀಕರಣ ಕಾಮಗಾರಿಗೆ ಚಾಲನೆ ದೊರೆತು ೨೦೨೫ರ ಡಿಸೆಂಬರ್‌ ಅಂತ್ಯಕ್ಕೆ ಕಾಮಗಾರಿ ಮುಕ್ತಾಯಗೊಂಡಿದೆ. ತೀವ್ರ ಕಡಿದಾದ ಬೆಟ್ಟದ ಸಾಲಿನಲ್ಲಿ ವಿದ್ಯುದ್ದೀಕರಣ ಕಾರ್ಯ ರೈಲ್ವೆ ಇಲಾಖೆಗೆ ಸವಾಲಿನ ಕೆಲಸವಾಗಿತ್ತು. ಆದರೆ, ಕೇವಲ ಎರಡು ವರ್ಷದಲ್ಲೆ ಸರಾಗವಾಗಿ ಕಾಮಗಾರಿ ಮುಕ್ತಾಯಗೊಳಿಸುವ ಮೂಲಕ ಸಾಧನೆ ಮಾಡಿದೆ. ಈ ರೈಲ್ವೆ ಮಾರ್ಗದಲ್ಲಿ ಐದು ಸ್ವಿಚಿಂಗ್ ಸ್ಟೇಷನ್‌ಗಳ ನಿರ್ಮಾಣ ಮಾಡಲಾಗಿದ್ದರೆ, ಸುರಂಗ ಮಾರ್ಗದಲ್ಲಿ ಮೇಲ್ಮೈ ವಿದ್ಯುತ್ ಸಾಧನಗಳ ಆಳವಡಿಸಲಾಗಿದೆ. ೪೧೯ ಮುಖ್ಯ ಬ್ರಾಕೆಟ್ ಹಾಗೂ ಅಷ್ಟೇ ಸಂಖ್ಯೆಯ ಹೆಚ್ಚುವರಿ ಬ್ರಾಕೆಟ್‌ಗಳನ್ನು ಒದಗಿಸುವ ಮೂಲಕ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ವಿದ್ಯುತ್ ಸ್ಟೇಷನ್ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಡೀಸೆಲ್‌ಗೆ ಗುಡ್‌ಬೈ ಹೇಳಿ ವಿದ್ಯುತ್‌ ಮೂಲಕ ರೈಲುಗಳು ಸಂಚರಿಸಲಿವೆ. ರೈಲುಗಳ ಸಂಖ್ಯೆ ಹೆಚ್ಚಳ:ರೈಲ್ವೆ ವಿದ್ಯುದ್ದೀಕರಣ ಪೂರ್ಣಗೊಂಡಿರುವುದರಿಂದ ಸದ್ಯ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ೧೦ ಪ್ರಯಾಣಿಕರ ರೈಲಿಗೆ ಬದಲಾಗಿ ಮತ್ತಷ್ಟು ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಯೋಜನೆ ರೂಪಿಸುತ್ತಿದೆ. ಇದಲ್ಲದೆ ನಾಲ್ಕು ಸರಕು ರೈಲುಗಳ ಬದಲಾಗಿ ಮತ್ತಷ್ಟು ಸರಕು ರೈಲು ಸಂಚಾರ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ಪ್ರವಾಸೋದ್ಯಮಕ್ಕೆ ಒತ್ತು:

ಸುಬ್ರಹ್ಮಣ್ಯ ಹಾಗೂ ಸಕಲೇಶಪುರ ನಡುವಿನ ರೈಲ್ವೆ ಮಾರ್ಗ ನಿರ್ಮಾಣವೇ ವಿಸ್ಮಯ ಹುಟ್ಟಿಸುವಂತಿದ್ದು ಬ್ರೀಟಿಷರ ಕಾಲದಲ್ಲಿ ನಿರ್ಮಿಸಲಾದ ಈ ಮಾರ್ಗದಲ್ಲಿ ೨೦ ಮೀಟರ್‌ನಿಂದ ೨ ಕಿ.ಮೀ. ದೂರದ ೫೭ ಸುರಂಗಗಳಿದ್ದರೆ, ೨೫೮ ಸೇತುವೆಗಳನ್ನು ನಿರ್ಮಿಸಲಾಗಿದೆ. ತೀವ್ರ ಕಡಿದಾದ ಪಶ್ಚಿಮಘಟ್ಟದ ಪರ್ವತ ಶ್ರೇಣಿಗಳಲ್ಲಿ ಹಾದು ಹೋಗಿರುವ ಈ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಸುವುದೆ ಒಂದು ಅದ್ಭುತ ಅನುಭವ ಹುಟ್ಟಿಸುತ್ತಿದ್ದು, ಪಶ್ಚಿಮಘಟ್ಟದ ರಮಣೀಯ ಸೌಂದರ್ಯವನ್ನು ರೈಲು ಪ್ರಯಾಣದ ಮೂಲಕ ಕಣ್ತುಂಬಿಕೊಳ್ಳಬಹುದಾಗಿದೆ. ಪಶ್ಚಿಮಘಟ್ಟದಲ್ಲಿ ರೈಲಿನ ವೇಗ ೩೦ ಕಿ.ಮೀ. ಮಿತಿಗೊಳಿಸಲಾಗಿದ್ದು ೫೫ ಕಿ.ಮೀ. ಪ್ರಯಾಣಕ್ಕೆ ೩ ಗಂಟೆಗಳ ಸಮಯ ತೆಗೆದುಕೊಳ್ಳಲಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲೆಂದೇ ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳ ಹಿಂದೆ ವಿಸ್ಡಮ್ ರೈಲನ್ನು ಪರಿಚಯಿಸಿದ್ದು. ಪ್ರತಿದಿನ ವಿಸ್ಡಮ್ ರೈಲು(ಗಾಜಿನ ಕಿಟಕಿಗಳನ್ನು ಅಳವಡಿಸಿರುವ ರೈಲು) ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುತ್ತಿದೆ. ಈ ರೈಲಿನಲ್ಲಿ ಸಂಚರಿಸಲು ಬಯಸುವ ಜನರು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಬೇಕಿದೆ. ರೈಲ್ವೆ ವಿದ್ಯುದ್ದೀಕರಣ ಪೂರ್ಣಗೊಂಡಿರುವುದರಿಂದ ಮತ್ತಷ್ಟು ವಿಸ್ಡಮ್ ರೈಲುಗಳ ಸಂಚಾರ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎಂಬುದು ಹೆಸರು ಹೇಳಲಿಚ್ಚಿಸದ ರೈಲ್ವೆ ಅಧಿಕಾರಿಗಳ ಮಾತು.ಹೆದ್ದಾರಿಯಲ್ಲಿ ಒತ್ತಡ ಕಡಿಮೆ:

ವಿದ್ಯುದ್ದೀಕರಣ ನಂತರ ಮತ್ತಷ್ಟು ರೈಲುಗಳ ಸಂಚಾರ ಆರಂಭವಾಗುವುದರಿಂದ ಬೆಂಗಳೂರು-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿನ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ ಎನ್ನಲಾಗುತ್ತಿದೆ. ಸದ್ಯ ಬೆರಳೆಣಿಕೆ ಸರಕು ರೈಲುಗಳು ಸಂಚರಿಸುತ್ತಿದ್ದರಿಂದ ಹೆದ್ದಾರಿಯಲ್ಲಿ ಸರಕು ಲಾರಿಗಳ ಸಂಚಾರ ಹೆಚ್ಚಿದ್ದು, ರೈಲುಗಳ ಸಂಚಾರ ಹೆಚ್ಚಾಗುವುದರಿಂದ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ ಎನ್ನಲಾಗುತ್ತಿದೆ. ತಾಲೂಕು ಪ್ರವಾಸೋಧ್ಯಮ್ಯಕ್ಕೆ ಇಂಬು:

ಸುಬ್ರಹ್ಮಣ್ಯ-ಸಕಲೇಶಪುರ ನಡುವಿನ ೫೫ ಕಿ.ಮೀ. ರೈಲ್ವೆ ಮಾರ್ಗದಲ್ಲಿ ದೋಣಿಗಾಲ್ ಹಾಗೂ ಎಡಕುಮೆರಿ ಪ್ರದೇಶದಲ್ಲಿ ರೈಲ್ವೆ ನಿಲ್ದಾಣಗಳಿದ್ದು ಈ ಎರಡು ರೈಲ್ವೆ ನಿಲ್ದಾಣಗಳು ಅಭಿವೃದ್ದಿ ಹಂತದಲ್ಲಿದ್ದು ಇದಾದ ನಂತರ ಪ್ರವಾಸೋದ್ಯಮಕ್ಕೆ ಮೆರುಗು ಬರಲಿದೆ. ಎಡಕುಮೆರಿ ರೈಲ್ವೆ ನಿಲ್ದಾಣದಿಂದ ತಾಲೂಕಿನ ಹೆತ್ತೂರು ಹೋಬಳಿಗೆ ಸಂಪರ್ಕ ದೊರೆಯುವುದರಿಂದ ಈ ಹೋಬಳಿಯಲ್ಲಿರುವ ಕಾಗೆನಹರೆ, ಪಟ್ಲಬೆಟ್ಟ, ಗವಿಬೆಟ್ಟ, ಮೂಕನಮನೆ ಜಲಪಾತ, ಬಿಸಿಲೆಘಾಟ್‌ನಂತಹ ಹಲವು ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮಿಸುವ ಸಂಖ್ಯೆ ಹೆಚ್ಚಳವಾಗಲಿದೆ. ಈ ಮೊದಲು ಇಲ್ಲಿನ ಪ್ರವಾಸಿತಾಣಗಳಿಗೆ ವಾಹನಗಳ ಮೂಲಕವೇ ತೆರಳ ಬೇಕಿತ್ತು. ಟ್ರೆಕ್ಕಿಂಗ್ ಮಾಡುವವರ ಸಂಖ್ಯೆ ಹೆಚ್ಚಳ: ಸದ್ಯ ಈ ರೈಲು ಮಾರ್ಗದ ಹಲವೆಡೆ ಟ್ರೆಕ್ಕಿಂಗ್‌ಗೆ ಉತ್ತಮ ಸ್ಥಳಗಳಿದ್ದು ಸದ್ಯ ಎಡಕುಮೇರಿ ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಒದಗಿಸಿದಲ್ಲಿ ಟ್ರೆಕ್ಕಿಂಗ್‌ ಮಾಡುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ.ಪಟ್ಟಣದಲ್ಲಿ ಸ್ಟೇಷನ್:

ಸದ್ಯ ೫೫ ಕಿ.ಮೀ. ಉದ್ದದ ರೈಲ್ವೆ ಟ್ರ್ಯಾಕ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮುಖ್ಯ ಕೇಂದ್ರ ಪಟ್ಟಣದಲ್ಲಿ ನಿರ್ಮಾಣವಾಗುತ್ತಿದ್ದು ಪಟ್ಟಣದ ಚಂಪಕನಗರ ಸಮೀಪ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಪವರ್‌ ಸ್ಟೇಷನ್ ನಿರ್ಮಾಣ ಕಾರ್ಯ ಕಳೆದ ಎರಡು ವರ್ಷದಿಂದ ಭರದಿಂದ ನಡೆಯುತ್ತಿದೆ.

-------- * ಹೇಳಿಕೆ1

ಘಟ್ಟ ಪ್ರದೇಶದಲ್ಲಿ ವಿದ್ಯುದ್ದೀಕರಣ ಕಾರ್ಯ ಮುಕ್ತಾಯಗೊಂಡಿದ್ದು, ಈ ಸೂಕ್ಷ್ಮ ಪ್ರದೇಶದಲ್ಲಿ ಇದುವರಗೆ ಸಂಭವಿಸುತ್ತಿದ್ದ ಪರಿಸರ ಹಾನಿ ಮುಂದಿನ ದಿನಗಳಲ್ಲಿ ತಪ್ಪಲಿದೆ.

- ಗಿರೀಶ್‌ ಕಲಗೊಂಡ್, ಐಆರ್‌ಟಿಎಸ್, ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ

* ಹೇಳಿಕೆ2 ವಿದ್ಯುದ್ದೀಕರಣದಿಂದ ರೈಲುಗಳ ಸಂಖ್ಯೆ ಹೆಚ್ಚಳವಾಗುವುದರಿಂದ ಪ್ರಯಾಣಿಕರಿಗೆ ಇದುವರಗೆ ಅನುಭವಿಸುತ್ತಿದ್ದ ಸಮಸ್ಯೆ ತಪ್ಪಲಿದೆ.

- ನಾರಾಯಣ ಆಳ್ವ, ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ