ಕಾಂಗ್ರೆಸ್‌ನಲ್ಲಿ ಮತ್ತೆ ಸಿಎಂ ಚರ್ಚೆ ಬಿರುಸು - ಸಿದ್ದರಾಮಯ್ಯ 5 ವರ್ಷ ಸಿಎಂ, ಡೌಟೇಕೆ? : ಮಹದೇವಪ್ಪ

Published : Feb 15, 2025, 06:50 AM IST
HC Mahadevappa

ಸಾರಾಂಶ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಖಡಕ್‌ ಸೂಚನೆ ಹಿನ್ನೆಲೆಯಲ್ಲಿ ಕೆಲ ದಿನ ತಣ್ಣಗಾಗಿದ್ದ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

  ದಾವಣಗೆರೆ/ಹಳಿಯಾಳ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಖಡಕ್‌ ಸೂಚನೆ ಹಿನ್ನೆಲೆಯಲ್ಲಿ ಕೆಲ ದಿನ ತಣ್ಣಗಾಗಿದ್ದ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಂದು ಸಚಿವರಾದ ಡಾ.ಜಿ. ಪರಮೇಶ್ವರ್‌, ಎಂ.ಬಿ. ಪಾಟೀಲ್ ಅವರು ಹೇಳಿದ ಮರುದಿನವೇ ಶುಕ್ರವಾರ ಸಚಿವರಾದ ಎಚ್‌.ಸಿ. ಮಹಾದೇವಪ್ಪ, ಸತೀಶ್‌ ಜಾರಕಿಹೊಳಿ ಮತ್ತು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸೂರಗೊಂಡನಕೊಪ್ಪದಲ್ಲಿ ಸಂತ ಶ್ರೀ ಸೇವಾಲಾಲ್‌ರ ಜಯಂತ್ಯುತ್ಸವದ ವೇಳೆ ಮಾತನಾಡಿದ ಸಚಿವ ಎಚ್‌.ಸಿ. ಮಹಾದೇವಪ್ಪ ಅವರು, ಜನರ ಸೇವೆ, ರಾಜ್ಯದ ಅಭಿವೃದ್ಧಿ ಮಾಡುವ ಅವಕಾಶ ಸಿದ್ದರಾಮಯ್ಯಗೆ ಸಿಕ್ಕಿದ್ದು, ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಈ ಬಗ್ಗೆ ಅನುಮಾನ ಯಾಕೆ ಬರುತ್ತಿದೆ ಎಂದು ಪ್ರಶ್ನಿಸಿದರು.

ಇದೇ ವೇಳೆ ಸಚಿವ ಸತೀಶ ಜಾರಕಿಹೊಳಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರಿಯುವುದಾದರೆ ಆಗಲಿ. ಅದು ಒಳ್ಳೆಯದೇ ಎಂದರು. ಎಲ್ಲ ನಾಯಕರ ಅಭಿಮಾನಿಗಳು ತಮ್ಮ ನಾಯಕರು ಮುಖ್ಯಮಂತ್ರಿ ಆಗಬೇಕೆಂದು ಹೇಳುತ್ತಾರೆ. ಅದೇ ರೀತಿ ನಮ್ಮವರು ಸಹ ನಾನು ಮುಖ್ಯಮಂತ್ರಿ ಆಗಬೇಕೆಂದು ಹೇಳುತ್ತಾರೆ ಎಂದು ಪ್ರತಿಕ್ರಿಯಿಸಿದರು.

ಹಳಿಯಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌.ವಿ. ದೇಶಪಾಂಡೆ ಅವರು, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಎರಡು ವರ್ಷ ಅಥವಾ ಎರಡೂವರೆ ವರ್ಷ ಎಂದು ಯಾರೂ ಆಯ್ಕೆ ಮಾಡಿಲ್ಲ. ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷದ ಸಭೆ ಆಯ್ಕೆ ಮಾಡಿದೆ. ಶಾಸನಸಭೆ ಅವಧಿಯೇ ಐದು ವರ್ಷ ಇರುವಾಗ ಅವರೂ ಐದು ವರ್ಷ ಸಿಎಂ ಆಗಿ ಇರುತ್ತಾರೆ ಎಂದು ಹೇಳಿದರು.

ಪೂರ್ಣಾವಧಿ ಸಿಎಂ ಕುರಿತು ಸಚಿವರಾದ ಎಂ.ಬಿ. ಪಾಟೀಲ ಹಾಗೂ ಡಾ. ಜಿ. ಪರಮೇಶ್ವರ ನೀಡಿದ ಹೇಳಿಕೆ ಸರಿಯಾಗಿಯೇ ಇದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಸಮರ್ಥಿಸಿದ ಅವರು, ಮೇಲಿಂದ ಮೇಲೆ ಮುಖ್ಯಮಂತ್ರಿ ಬದಲಾವಣೆ ವಿಷಯ ಮಾಧ್ಯಮದಲ್ಲಿ ಚರ್ಚೆಯಾಗುತ್ತಿರುವುದು ಕೇಳಿ ಆಶ್ಚರ್ಯವಾಗಿದೆ. ಶಾಸಕಾಂಗ ಸಭೆಯಲ್ಲಿ ಸಿಎಂ ಅವಧಿ ಬಗ್ಗೆ ಚರ್ಚೆಯಾಗಿಲ್ಲ. ಮಾಧ್ಯಮದವರು ವಿನಾಕಾರಣ ಸುದ್ದಿ ಪ್ರಕಟಿಸಿ ಗೊಂದಲ ಸ್ಪಷ್ಟಿಸಬಾರದು. ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ಕೊಡುವಂಥ ಸ್ಥಿತಿಯೇನೂ ನಿರ್ಮಾಣವಾಗಿಲ್ಲ. ಮುಖ್ಯಮಂತ್ರಿಗೆ ಯಾರೂ ಪ್ರತಿಸ್ಪರ್ಧಿ ಇಲ್ಲ ಎಂದೂ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪ್ರಿಯಾಂಕಾ ಗಾಂಧಿಕೈ ಪ್ರಧಾನಿ ಅಭ್ಯರ್ಥಿ ಆಗಲು ಭಾರಿ ಒತ್ತಡ!
''ದ್ವೇಷ ಭಾಷಣ ಕಾಯ್ದೆ : ಜಾತಿ ನಿಂದನೆಯ ರೀತಿ ದುರ್ಬಳಕೆ ಆಗಬಹುದು''