ಶುಭ ಕೋರಿದ ಮೋದಿಗೆ ಸಿಎಂ ಬೇಡಿಕೆ ಪಟ್ಟಿ

Published : Nov 06, 2026, 09:25 AM IST
DK Shivakumar,

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಹಾಗೂ ಮೇಕೆದಾಟು, ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳಿಗೆ ತಕ್ಷಣವೇ ಅನುಮೋದನೆ ಹಾಗೂ ಅನುದಾನ ನೀಡುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರು : ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿ ಪ್ರಧಾನಿ ಮೋದಿ ಅವರು ಬರೆದಿದ್ದ ಪತ್ರಕ್ಕೆ ಧನ್ಯವಾದ ಅರ್ಪಿಸಿ ಸುದೀರ್ಘವಾಗಿ ಪ್ರತಿಪತ್ರ ಬರೆದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಹಾಗೂ ಮೇಕೆದಾಟು, ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳಿಗೆ ತಕ್ಷಣವೇ ಅನುಮೋದನೆ ಹಾಗೂ ಅನುದಾನ ನೀಡುವಂತೆ ಒತ್ತಾಯಿಸಿದ್ದಾರೆ.

ರಾಜ್ಯಾದ್ಯಂತ ಬರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಜಲಾಶಯಗಳಲ್ಲಿ ನೀರಿನ ಕೊರತೆ ಇದೆ. ರಾಜ್ಯ ಸರ್ಕಾರ 240 ತಾಲೂಕುಗಳಲ್ಲಿ 226 ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಿದೆ. ಕೇಂದ್ರ ತಂಡ ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿ ಅದರ ಮೌಲ್ಯಮಾಪನ ಪೂರ್ಣಗೊಳಿಸಿದೆ. 84.10 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಗೆ ಕೇವಲ 72.13 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಆಗಿದೆ. ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಎದುರಾಗಿರುವ ಭೀಕರ ಬರ ಪರಿಸ್ಥಿತಿ ಎದುರಿಸಲು 22,400.58 ಕೋಟಿ ರು. ಮೊತ್ತದ ಬರ ಪರಿಹಾರದ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪರಿಷ್ಕೃತ ಬೇಡಿಕೆ ಸಲ್ಲಿಸಲಾಗಿದೆ.

ಸೂಕ್ತ ಪರಿಹಾರ ಬಿಡುಗಡೆ ಮಾಡಿ:

226 ತಾಲೂಕುಗಳಲ್ಲಿ 57.93 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸಂಭವಿಸಿರುವ 62,481 ಕೋಟಿ ರು. ಮೌಲ್ಯದ ಅಂದಾಜು ಬೆಳೆ ನಷ್ಟಕ್ಕೆ ಬರ ಪರಿಹಾರ ಕೋರಲಾಗಿದ್ದು, ಎಸ್‌ಡಿಆರ್‌ಎಫ್‌ ಎನ್‌ಡಿಆರ್‌ಎಫ್‌ ಮಾನದಂಡಗಳ ಅನುಸಾರ ರಾಜ್ಯಕ್ಕೆ ಕೂಡಲೇ ಸೂಕ್ತ ಪರಿಹಾರ ಬಿಡುಗಡೆಗೆ ಕೋರಿದ್ದಾರೆ.

ಬೆಳಗಾವಿ ಸುವರ್ಣ ಸೌಧದಲ್ಲಿ ಕಬ್ಬು ಬೆಳೆಗಾರರೊಂದಿಗೆ ನಡೆಸಿದ ಸಭೆ ಹಿನ್ನೆಲೆಯಲ್ಲಿ ಕಬ್ಬಿನ ಎಫ್‌ಆರ್‌ಪಿ ದರವನ್ನು ₹3,650ಕ್ಕೆ ಏರಿಸುವುದು, 2019 ರಿಂದ ₹31ರಷ್ಟೇ ಇರುವ ಸಕ್ಕರೆ ಎಂಎಸ್‌ಪಿ ಬೆಲೆಯನ್ನು ಮಾರುಕಟ್ಟೆ ದರಕ್ಕೆ (₹45 ಕ್ಕಿಂತ ಹೆಚ್ಚು) ತಕ್ಕಂತೆ ಹೆಚ್ಚಿಸುವುದು ಹಾಗೂ ಎಥನಾಲ್ ನೀತಿ ಮರುಪರಿಶೀಲಿಸುವಂತೆ ಪ್ರಧಾನಿ ಮೋದಿಯವರಿಗೆ ಪತ್ರದ ಮೂಲಕ ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ.

ನಮ್ಮ ಮೆಟ್ರೋದ ಪಿಂಕ್ ಲೈನ್ ಉದ್ಘಾಟಿಸಲು ನೀವು ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದು ನನಗೆ ಸಂತೋಷ ಹಾಗೂ ರಾಜ್ಯದ ಜನರ ಪರವಾಗಿ ಸ್ವಾಗತ. ಬೆಂಗಳೂರಿನ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಆರ್ಥಿಕ ಚಟುವಟಿಕೆ ಅದರ ರಸ್ತೆಗಳು, ಸಾರ್ವಜನಿಕ ಸಾರಿಗೆ ಮತ್ತು ನಾಗರಿಕ ಮೂಲಸೌಕರ್ಯದ ಮೇಲೆ ಅಗಾಧ ಒತ್ತಡವನ್ನುಂಟು ಮಾಡಿದೆ.

ಈ ಸವಾಲುಗಳನ್ನು ಪರಿಹರಿಸಲು ನಮ್ಮ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ, ಇಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಬೆಂಬಲ ಬೇಕು. ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಹಣಕಾಸು ಪ್ಯಾಕೇಜ್ ಮತ್ತು ಅಗತ್ಯ ಸಹಾಯ ವಿಸ್ತರಿಸಲು ನಾನು ವಿನಂತಿಸುತ್ತೇನೆ ಎಂದಿದ್ದಾರೆ.

ರಾಜ್ಯದ ಮೇಕೆದಾಟು ಯೋಜನೆ ಬಗ್ಗೆ ನಾನು ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಪರಸ್ಪರ ತಿಳಿವಳಿಕೆ ಮತ್ತು ಸಹಕಾರದ ಮೂಲಕ ಈ ಯೋಜನೆ ಮುಂದುವರಿಯಬಹುದು ಎಂದು ನಾವು ದೃಢವಾಗಿ ನಂಬುತ್ತೇವೆ. ಅದೇ ರೀತಿ, ಕಳಸಾ-ಬಂಡೂರಿ, ಅಪ್ಪರ್ ಭದ್ರಾ, ಅಪ್ಪರ್ ಕೃಷ್ಣ ಮತ್ತು ಎತ್ತಿನಹೊಳೆ ಯೋಜನೆಗಳು ಲಕ್ಷಾಂತರ ಜನರ, ವಿಶೇಷವಾಗಿ ಉತ್ತರ ಕರ್ನಾಟಕದ ಬಹುಕಾಲದ ಭರವಸೆಗಳನ್ನು ಪ್ರತಿನಿಧಿಸುತ್ತವೆ.

ಈ ಯೋಜನೆಗಳಿಗೆ ಅಗತ್ಯವಾದ ಅನುಮತಿಗಳು ಮತ್ತು ಅನುಮೋದನೆಗಳನ್ನು ತ್ವರಿತಗೊಳಿಸಬೇಕಾಗಿದೆ. ರಾಜ್ಯದಲ್ಲಿ ನೀರಾವರಿ ಕಾರ್ಯಗಳಿಗಾಗಿ ನಾವು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದ್ದೇವೆ ಮತ್ತು ಜಲಶಕ್ತಿ ಸಚಿವಾಲಯದೊಂದಿಗೆ ನಿಯಮಿತ ಸಂವಹನದಲ್ಲಿದ್ದೇವೆ. ಪಿಎಂಕೆಎಸ್‌ವೈ ಮತ್ತು ಎಐಬಿಪಿ ಅಡಿ ನಾವು ಕೇಂದ್ರಕ್ಕೆ ಹಲವಾರು ಪ್ರಸ್ತಾಪಗಳನ್ನು ಸಲ್ಲಿಸಿದ್ದೇವೆ ಮತ್ತು ಅನುಮೋದನೆಗಳಿಗಾಗಿ ಕಾಯುತ್ತಿದ್ದೇವೆ. ಈ ಯೋಜನೆಗಳು ಸಾಧ್ಯವಾದಷ್ಟು ಬೇಗ ಮುಂದುವರಿಯುವಂತೆ ನೋಡಿಕೊಳ್ಳಲು ತಾವು ವೈಯಕ್ತಿಕವಾಗಿ ಗಮನ ಹರಿಸಬೇಕೆಂದು ಕೋರಿದ್ದಾರೆ.

ಜಲಜೀವನ್‌ ಮಿಷನ್‌ ಬಾಕಿ ಮೊತ್ತ ಬಿಡುಗಡೆ ಮಾಡಿ:

ಕರ್ನಾಟಕವು ಒಟ್ಟು 101.10 ಲಕ್ಷ ಗ್ರಾಮೀಣ ಮನೆಗಳನ್ನು ಹೊಂದಿದೆ ಮತ್ತು ಜಲ ಜೀವನ್ ಮಿಷನ್ ಪ್ರಾರಂಭದಲ್ಲಿ, 24.51 ಲಕ್ಷ ಗ್ರಾಮೀಣ ಮನೆಗಳಿಗೆ ನಲ್ಲಿ ಸಂಪರ್ಕಗಳನ್ನು ಒದಗಿಸಲಾಗಿದೆ. ಸೆಪ್ಟೆಂಬರ್ 2026 ರ ಹೊತ್ತಿಗೆ, ರಾಜ್ಯವು 90.61 ಲಕ್ಷ ಕ್ರಿಯಾತ್ಮಕ ಮನೆಯ ನಲ್ಲಿ ಸಂಪರ್ಕಗಳನ್ನು ಸಾಧಿಸಿದೆ, ಇದು 89.52% ತಲುಪಿದೆ. ರಾಜ್ಯವು ಜಲ ಜೀವನ್ ಮಿಷನ್ ಅಡಿಯಲ್ಲಿ 160 ಹೊಸ ಬಹು ಗ್ರಾಮ ಯೋಜನೆಗಳನ್ನು ಯೋಜಿಸಿದೆ. ಆದ್ದರಿಂದ, ರಾಜ್ಯದಲ್ಲಿ ಬಾಕಿ ಇರುವ ಮೊತ್ತವನ್ನು ತ್ವರಿತವಾಗಿ ಬಿಡುಗಡೆ ಮಾಡಲು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಹೆಚ್ಚಿನ ಹಂಚಿಕೆಗಳನ್ನು ಖಚಿತಪಡಿಸಿಕೊಳ್ಳಲು ನಾವು ನಿಮ್ಮ ದಯೆ ಕೋರುತ್ತೇವೆ.

ಬೆಂಗಳೂರಿನಲ್ಲಿ ಭಾರತದ ಮತ್ತು ಬಹುಶಃ ವಿಶ್ವದ ಮೊದಲ ಎಎಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ನಾನು ಘೋಷಿಸಿದ್ದೇನೆ. ಅದರ ಸ್ಥಾಪನೆಗೆ ನಾವು ತ್ವರಿತವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಈ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಪಾಲುದಾರಿಕೆ ಮತ್ತು ಸಹ-ಹಣಕಾಸು ನೀಡುವಂತೆ ವಿನಂತಿಸುತ್ತೇನೆ. ತಾಂತ್ರಿಕ ಶಿಕ್ಷಣದಲ್ಲಿ ನಾವು ಅತಿದೊಡ್ಡ ಸಾಮರ್ಥ್ಯ ಮತ್ತು ಪಾಸ್ ಔಟ್‌ಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ, ರಾಜ್ಯದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉತ್ತಮ ವೈದ್ಯಕೀಯ ಆರೈಕೆ ಮತ್ತು ಶಿಕ್ಷಣ ಸಕ್ರಿಯಗೊಳಿಸಲು ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕೆಂಬ ನನ್ನ ಹಿಂದಿನ ವಿನಂತಿಯನ್ನು ಮುಖ್ಯಮಂತ್ರಿ ಅವರು ಪತ್ರದಲ್ಲಿ ನೆನಪಿಸಿದ್ದಾರೆ.

ನಮ್ಮಲ್ಲಿ ಮಾತ್ರ

ರಾಜ್ಯೋತ್ಸವಕ್ಕೆ ಶುಭಾಶಯ ಕೋರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದ ಬಗ್ಗೆ 5-11-2026ರಂದು ಕನ್ನಡಪ್ರಭ ಮಾತ್ರ ವರದಿ ಮಾಡಿತ್ತು.

ಮೋದಿ ಬಳಿ ಏನೇನು ಬೇಡಿಕೆ

- ರಾಜ್ಯವು ಬರಪೀಡಿತ ಆಗಿದ್ದು, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ನಿಯಮಗಳಡಿ ಸೂಕ್ತ ಪರಿಹಾರ ನೀಡಿ

- ಬೆಳೆಯುತ್ತಿರುವ ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಹಣಕಾಸು ಪ್ಯಾಕೇಜ್‌ ಬಿಡುಗಡೆ ಮಾಡಿ

- ಮೇಕೆದಾಟು, ಕಳಸಾ ಬಂಡೂರಿ, ಎತ್ತಿನಹೊಳೆ, ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಒಪ್ಪಿಗೆ, ಅನುದಾನ ನೀಡಿ

- ರಾಜ್ಯದಲ್ಲಿ ಜಾರಿಯಾಗಿರುವ ಜಲಜೀವನ್‌ ಮಿಷನ್‌ನಡಿಯ ಯೋಜನೆಗಳ ಬಾಕಿ ಮೊತ್ತ ಬಿಡುಗಡೆ ಮಾಡಿ

- ಬೆಂಗಳೂರಿನಲ್ಲಿ ದೇಶದ ಮೊದಲ ಕೃತಕಬುದ್ಧಿಮತ್ತೆ ಸ್ಥಾಪನೆಗೆ ಪಾಲುದಾರಿಕೆ, ಸಹ-ಹಣಕಾಸು ನೆರವ ನೀಡಿ

- ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕೆಂಬ ಹಿಂದಿನ ವಿನಂತಿಯನ್ನು ಪರಿಗಣಿಸುವಂತೆ ಮುಖ್ಯಮಂತ್ರಿ ಕೋರಿಕೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಅಧಿಕಾರ ಇದ್ದಾಗ ತಾಜ್‌ ವೆಸ್ಟೆಂಡ್‌, ಇಲ್ಲದಾಗ ಹಳ್ಳಿ ನೆನಪು: ಪ್ರಿಯಾಂಕ್‌
ನೂತನ ಕಾರ್ಖಾನೆಗೆ 39 ಸಕ್ಕರೆ ಕಾರ್ಖಾನೆ ಮಾಲೀಕರಿಂದ ಅರ್ಜಿ