ಅಮೃತಸರ: ಭಾರತದಲ್ಲೂ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ವ್ಲಾಡಿಮಿರ್ ಪುಟಿನ್ ರೀತಿಯಲ್ಲಿ ವಿಪಕ್ಷ ನಾಯಕರನ್ನು ಜೈಲಿಗಟ್ಟಿ ಚುನಾವಣೆ ಗೆಲ್ಲುವ ತಂತ್ರ ರೂಪಿಸಿದ್ದಾರೆ ಎಂದು ಆಪ್ ನೇತಾರ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಈ ಕುರಿತು ಅಮೃತಸರದಲ್ಲಿ ಮಾತನಾಡುತ್ತಾ, ‘ಪ್ರಧಾನಿ ಮೋದಿ ನನ್ನನ್ನೂ ಸೇರಿದಂತೆ ಹಲವು ವಿಪಕ್ಷ ನಾಯಕರನ್ನು ಜೈಲಿಗಟ್ಟಿ ಜನರಿಗೆ ಆಯ್ಕೆಯನ್ನೇ ನೀಡದೆ ಚುನಾವಣೆಯಲ್ಲಿ ಗೆದ್ದು ಸರ್ವಾಧಿಕಾರ ರೂಪಿಸಲು ಹೊರಟಿದ್ದಾರೆ. ವ್ಲಾಡಿಮಿರ್ ಪುಟಿನ್ ಸಹ ಇದೇ ರೀತಿಯಲ್ಲಿ ತಮ್ಮ ವಿಪಕ್ಷ ನಾಯಕರನ್ನು ಜೈಲಿಗಟ್ಟಿ ಇಲ್ಲವೇ ಕೊಂದು ದಾಖಲೆಯ ಶೇ.87 ಮತಗಳನ್ನು ಪಡೆದಿದ್ದರು. ಆದರೆ ಭಾರತದಲ್ಲಿ ಆ ರೀತಿ ಆಗಲು ಬಿಡಬಾರದು. ಪಂಜಾಬ್‌ನಲ್ಲಿ ಎಲ್ಲ 13 ಕ್ಷೇತ್ರಗಳಲ್ಲೂ ಆಪ್ ಪಕ್ಷವನ್ನು ಗೆಲ್ಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು’ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಜೈಲಿನಲ್ಲಿ ಸಿಸಿಟಿವಿ ನಿಗಾ:
ಇದೇ ವೇಳೆ ತಮ್ಮ ಜೈಲುವಾಸದ ಅನುಭವ ವಿವರಿಸುತ್ತಾ, ‘ಜೈಲಿನಲ್ಲಿ ನನ್ನ ಮೇಲೆ ನಿಗಾ ಇಡಲು ನನ್ನ ಕೋಣೆಯಲ್ಲಿ ಸಿಸಿಟಿವಿ ನಿಗಾ ಇಡಲಾಗಿತ್ತು. ಅದರ ಪರಿವೀಕ್ಷಣೆಗೆ 13 ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ ಅದರ ನೇರ ದೃಶ್ಯಾವಳಿಗಳು ಪ್ರಧಾನಿ ಕಚೇರಿಗೂ ರವಾನೆಯಾಗಿವೆ. ಜೊತೆಗೆ ಜೈಲಿನ ಅಧೀಕ್ಷಕರಿಗೆ ಕಾರಾಗೃಹ ಕೋಣೆಯಲ್ಲೇ ಸಭೆಗೆ ಅವಕಾಶ ಕೊಡಲು ಅಧಿಕಾರವಿದ್ದರೂ ಪಂಜಾಬ್ ಮುಖ್ಯಮಂತ್ರಿ ಬಂದಾಗ ಅವಕಾಶ ನೀಡಲಿಲ್ಲ. ಇಷ್ಟೇ ಅಲ್ಲದೆ ನಾನು ಧ್ಯಾನ ಮಾಡಲೂ ನನಗೆ ಅಡ್ಡಿ ಮಾಡಲು ಯತ್ನಿಸಿದರು. ಆದರೆ ಸಫಲವಾಗಲಿಲ್ಲ’ ಎಂದು ತಿಳಿಸಿದರು.
ಆಪ್ ಕುಟುಂಬವಿದ್ದಂತೆ:
ಬಿಜೆಪಿ ಸಂಚಿನ ಕುರಿತು ತಿಳಿಸುತ್ತಾ, ‘ಬಿಜೆಪಿಯು ನನ್ನ (ಕೇಜ್ರಿವಾಲ್) ಬಂಧನದ ಬಳಿಕ ಆಪ್ ಪಕ್ಷ ಹೋಳಾಗಲಿದೆ. ಆಗ ದೆಹಲಿಯಲ್ಲಿ ಸರ್ಕಾರ ಬಿದ್ದು ಹೋಗಲಿದೆ ಎಂದು ಭಾವಿಸಿತ್ತು. ಆದರೆ ಅದಕ್ಕೆ ತದ್ವಿರುದ್ಧ ರೀತಿಯ ಸನ್ನಿವೇಶ ಉಂಟಾಗಿದ್ದು, ಪಕ್ಷಕ್ಕೆ ಸಂಕಷ್ಟ ಉಂಟಾದ ಸನ್ನಿವೇಶದಲ್ಲಿ ಎಲ್ಲ ಕಾರ್ಯಕರ್ತರು ಕುಟುಂಬದಂತೆ ಒಟ್ಟಾಗಿ ನಿಂತಿದ್ದಾರೆ’ ಎಂದು ಶ್ಲಾಘಿಸಿದರು.