;Resize=(412,232))
ಬೆಂಗಳೂರು : ಸರ್ಕಾರದ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದರೆ ನಾನು ನೋಡುತ್ತಾ ಸುಮ್ಮನೆ ಕೂರುವುದಿಲ್ಲ. ಅಂಥ ಯಾವ ಪ್ರಯತ್ನವನ್ನೂ ನಾನು ಸಹಿಸಲ್ಲ. ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಬಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಹಲವು ಸಲಹೆ ಸೂಚನೆ ನೀಡಿರುವ ಮುಖ್ಯಮಂತ್ರಿ ಅವರು, ಸರ್ಕಾರದ ಘನತೆ ಹಾಳು ಮಾಡಿದರೆ ಅಬಕಾರಿ ಸಿಬ್ಬಂದಿ, ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡುವ ಕಾನೂನು ತರುವ ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಿಎಂ, ನೀವು ಘನತೆ ಉಳಿಸಿಕೊಂಡರೆ ಇಲಾಖೆಯ ಘನತೆ ಉಳಿಯುತ್ತದೆ. ಇಲಾಖೆ ಘನತೆ ಉಳಿದರೆ ಸರ್ಕಾರದ ಘನತೆ ಹೆಚ್ಚುತ್ತದೆ. ನೀವು ಸರ್ಕಾರದ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದರೆ ನಾವು ನೋಡುತ್ತಾ ಕೂರುವುದಿಲ್ಲ. ಅಬಕಾರಿ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲು ಆಗುವುದಿಲ್ಲ ಎಂದುಕೊಳ್ಳಬೇಡಿ. ಅಗತ್ಯಬಿದ್ದರೆ ವರ್ಗಾವಣೆ ಮಾಡಲು ಅಗತ್ಯವಾದ ಕಾನೂನು ಬದಲಾವಣೆಯನ್ನೂ ತರಲು ಅವಕಾಶಗಳಿವೆ. ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿ. ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ದರೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ತಾಕೀತು ಮಾಡಿದ್ದಾರೆ.
ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯಾರನ್ನೂ, ಯಾವ ಪ್ರಯತ್ನವನ್ನೂ ನಾನು ಸಹಿಸುವುದಿಲ್ಲ. ಇಲಾಖೆಯಲ್ಲಿ ಹೊಸದಾಗಿ ಆಲ್ಕೋಹಾಲ್ ಪ್ರಮಾಣ ಆಧಾರಿತ ದರ ನಿಗದಿ ವ್ಯವಸ್ಥೆ(ಎಐಬಿ) ಪದ್ಧತಿ ಜಾರಿಯಾದ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆ ಆಗಿದೆ. ಹೊಸದಾಗಿ 574 ಸನ್ನದುಗಳನ್ನು ಇ-ಹರಾಜು ಹಾಕಲು ನಿರ್ಧರಿಸಲಾಗಿದೆ. ಪರವಾನಗಿ ನವೀಕರಣ ಮೊತ್ತವನ್ನು ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಿ. ಅಕ್ಕ ಪಕ್ಕದ ರಾಜ್ಯಗಳಲ್ಲಿ ಇಲಾಖೆ ಹೇಗೆ ಕಾರ್ಯನಿರ್ವಹಿಸುತ್ತಿವೆ ಎನ್ನುವ ವರದಿ ನೋಡಿದ್ದೇನೆ. ಇಲಾಖೆಗೆ ಕೊಟ್ಟಿರುವ ಗುರಿ ತಲುಪಲು ಶ್ರಮಿಸಬೇಕು ಎಂದು ಸಿಎಂ ಸೂಚಿಸಿದರು.