ಬೆಂಗಳೂರು : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಯೋಜನೆಗಳು ಹಾಗೂ ಅನುದಾನ ತರಲು ದೆಹಲಿ ಮಟ್ಟದಲ್ಲಿ ಪ್ರತ್ಯೇಕ ಅಧಿಕಾರಿಗಳ ತಂಡ ರಚನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರದೊಂದಿಗೆ ಸೌಹಾರ್ದಯುತ ಸಂಬಂಧ
ಕೇಂದ್ರ ಸರ್ಕಾರದೊಂದಿಗೆ ಸೌಹಾರ್ದಯುತ ಸಂಬಂಧ ಹೊಂದುವ ಸಿಎಂ ಡಿ.ಕೆ. ಶಿವಕುಮಾರ್ ಅವರ ಹೊಸ ರಾಜತಾಂತ್ರಿಕ ನಿಲುವಿಗೆ ಪೂರಕವಾಗಿ ರಾಜ್ಯ ಸರ್ಕಾರ ಈ ನಿಲುವು ತಳೆದಿದ್ದು, ಹಿರಿಯ ಐಎಎಸ್ ಅಧಿಕಾರಿಗಳು ಅಥವಾ ನಿವೃತ್ತ ಅಧಿಕಾರಿಗಳ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಇವರು ದೆಹಲಿ ಮಟ್ಟದಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ ಯೋಜನೆ ಹಾಗೂ ಅನುದಾನ ತರುವ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ತಂಡ ರಚನೆಗೆ ಸಿಎಂ ಮುಂದಾಗಿದ್ದಾರೆ
ಈವರೆಗೆ ದೆಹಲಿ ಮಟ್ಟದಲ್ಲಿರುವ ಅಧಿಕಾರಿಗಳು ರಾಜ್ಯದಿಂದ ತೆರಳುವ ಪ್ರತಿನಿಧಿಗಳ ಸ್ವಾಗತ ಹಾಗೂ ಉಪಚಾರ ಸಮಿತಿಯಂತೆ ಕೆಲಸ ಮಾಡುತ್ತಿದ್ದರು. ಆದರೆ ಕೇಂದ್ರ ಸಚಿವರು ರಾಜ್ಯದಿಂದ ಯಾವುದೇ ಪ್ರಸ್ತಾವನೆಗಳು ಬರುತ್ತಿಲ್ಲ. ಪ್ರಸ್ತಾವನೆಯೇ ಬಾರದೆ ಅನುದಾನ ನೀಡುವುದಾಗಿ ಹೇಗೆ? ಎಂಬ ಪ್ರಶ್ನೆಗಳು ಉದ್ಬವಿಸಿದ್ದವು. ಈ ಹಿನ್ನೆಲೆಯಲ್ಲಿ ತಂಡ ರಚನೆಗೆ ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.
ಎಚ್ಚೆತ್ತಿರುವ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಅನುದಾನ ಸೆಳೆಯುವ ಬಗ್ಗೆ ಕೆಲಸ ಮಾಡಲ ತಂಡ ರಚಿಸಲಿದೆ. ಪ್ರಸ್ತುತ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌ಗೆ ಯೋಜನೆ, ಅನುದಾನ ಹರಿಯುತ್ತಿದೆ. ಅದೇ ರೀತಿ ರಾಜ್ಯಕ್ಕೆ ಅವಕಾಶಗಳನ್ನು ಸೆಳೆಯಲು ತಂಡದ ಉಪಯೋಗ ಪಡೆಯಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಾಗಿದ್ದಾರೆ ಎನ್ನಲಾಗಿದೆ.
