ಕನ್ನಡಪ್ರಭ ವಾರ್ತೆ ಬೆಂಗಳೂರು
ಇದೇ ಮೊದಲ ಬಾರಿಗೆ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದ ಇತಿಹಾಸದಲ್ಲೇ ಒಂದೇ ದಿನಕ್ಕೆ ಎರಡು ದಾಖಲೆ ನಿರ್ಮಾಣವಾಗಿದ್ದು, ಸ್ವಾತಂತ್ರ್ಯ ದಿನದಂದು 2.01 ಲಕ್ಷಕ್ಕೂ ಅಧಿಕ ಜನರು ಪ್ರದರ್ಶನ ವೀಕ್ಷಣೆಗೆ ಬಂದಿದ್ದರಿಂದ ₹1.05 ಕೋಟಿ ಸಂಗ್ರಹವಾಗಿದೆ.ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ‘ಗಂಗರ ಸಾಮ್ರಾಜ್ಯ ವೈಭವ’ ವಿಷಯದ ಕುರಿತು ಪ್ರದರ್ಶನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಪ್ರದರ್ಶನ ಇನ್ನೂ ಮೂರು ದಿನ ನಡೆಯಲಿದ್ದು, ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ. ಭಾನುವಾರವೂ ಹೆಚ್ಚಿನ ಜನರು ಆಗಮಿಸಬಹುದೆಂಬ ನಿರೀಕ್ಷೆಯಿದ್ದು ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಗಾಜಿನ ಮನೆಯಲ್ಲಿ ನಿರ್ಮಿಸಿದ್ದ ಗಂಗರ ಕಾಲದ ಬೆಂಗಳೂರಿನ ಬೇಗೂರು ದೇವಾಲಯದ ಪುಷ್ಪಮಾದರಿ ನೋಡಿ ಜನ ಖುಷಿಪಟ್ಟರು. ಗಂಗ ದೊರೆಗಳ ಬಲಿಷ್ಠ ಗಜಸೇನೆ ಮತ್ತು ಯುದ್ಧದ ಕಥಾನಕಗಳು, ಶ್ರವಣಬೆಳಗೊಳದ ಬಾಹುಬಲಿ ಸ್ವಾಮಿಯ ಭವ್ಯ ಪ್ರತಿಮೆಯ ಹೂವಿನ ಪ್ರತಿಕೃತಿ, ತಲಕಾಡಿನ ಐತಿಹಾಸಿಕ ದೇವಾಲಯಗಳ ವಾಸ್ತುಶಿಲ್ಪದ ಮಾದರಿಗಳು ಗಮನ ಸೆಳೆಯುತ್ತಿವೆ.ಉದ್ಯಾನದಲ್ಲಿನಿರ್ಮಿಸಿದ್ದ ಗಂಗರಸರ ಸೆಲಿಧಿ ಪಾಯಿಂಟ್‌ಗಳು ಮತ್ತು ಫೋಟೊ ಫ್ರೇಮ್‌ಗಳಲ್ಲಿನಿಂತು ಫೋಟೊಗಳನ್ನು ಕ್ಲಿಕ್ಕಿಸಿಕೊಂಡರು. ಬಂಡೆಯ ಪಕ್ಕದಲ್ಲಿನಿರ್ಮಿಸಿರುವ ಹಳ್ಳಿ ಚಿತ್ರಣದ ಥೀಮ್ ಕಂಡು ಸಂಭ್ರಮ ಪಟ್ಟರು.
₹1.05 ಕೋಟಿ ಸಂಗ್ರಹ ಹೊಸ ದಾಖಲೆ:
ಪುಷ್ಪ ಪ್ರದರ್ಶನ ವೀಕ್ಷಣೆಗೆ ವಯಸ್ಕರು 1.4 ಲಕ್ಷ, ಮಕ್ಕಳು 27500, ವಿದ್ಯಾರ್ಥಿಗಳು 34500 ಹೀಗೆ ಒಟ್ಟು 2.01 ಲಕ್ಷ ಜನರು ಆಗಮಿಸಿದ್ದರು. ಇದರಿಂದ 1.05 ಕೋಟಿ ರು.ಸಂಗ್ರಹವಾಗಿರುವುದು ಹೊಸ ದಾಖಲೆ. ಸ್ವಾತಂತ್ರ್ಯೋತ್ಸವದ ಹಿನ್ನೆಯಲ್ಲೆಯಲ್ಲಿ ರಜಾದಿನವಾಗಿದ್ದರಿಂದ ನಿರೀಕ್ಷೆಗೂ ಮೀರಿ ಜನರು ಪ್ರದರ್ಶನ ವೀಕ್ಷಣೆಗೆ ಆಗಮಿಸಿದ್ದರು. ಹೆಚ್ಚಿನ ಜನದಟ್ಟಣೆಯಿಂದ 20ರಿಂದ 25 ಸಾವಿರಕ್ಕೂ ಜನರು ಟಿಕೆಟ್ ಪಡೆಯದೇ ಒಳಪ್ರವೇಶಿಸಿದ್ದಾರೆ. ಭಾನುವಾರ ಇನ್ನೂ ಹೆಚ್ಚಿನ ಭದ್ರತೆ ಮಾಡುವುದಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗಣ್ಯರಿಂದ ವೀಕ್ಷಣೆಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾ.ಸಂತೋಷ್ ಹೆಗ್ಡೆ, ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ, ಸಂಸದ ಡಾ.ಸಿ.ಎನ್.ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಶನಿವಾರ ಪುಷ್ಪ ಪ್ರದರ್ಶನ ವೀಕ್ಷಿಸಿದರು.
ಸಂಪೂರ್ಣ ಸ್ವಚ್ಛತೆಲಾಲ್ಬಾಗ್ ಪುಷ್ಪ ವೀಕ್ಷಣೆಗೆ ಒಂದೇ ದಿನ 2.01 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರೂ ಎಲ್ಲಿಯೂ ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯಗಳು ಬೀಳದಂತೆ 1500 ಕ್ಕೂ ಹೆಚ್ಚು ಸ್ವಯಂ ಸೇವಕರು ಉದ್ಯಾನದ ಸ್ವಚ್ಛತೆ ಕೈಗೊಂಡು ಗಮನ ಸೆಳೆದಿದ್ದು ವಿಶೇಷ. ಸಾರ್ವಜನಿಕರು ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳನ್ನು ಎಲ್ಲಿಯೂ ಬಿಸಾಡದೆ ಸ್ವಚ್ಛತೆ ಕಾಪಾಡುವಂತೆ ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಡಾ.ಎಂ.ಜಗದೀಶ್ ಮನವಿ ಮಾಡಿದ್ದಾರೆ.