ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಯಾವುದೇ ಪರಿಹಾರ ವಿತರಣೆಗೆ ಮುಂದಾಗಿಲ್ಲ. ತಜ್ಞರ ತಂಡ ಕಳುಹಿಸಿ ಪರಿಶೀಲನೆಯನ್ನೂ ನಡೆಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಯಾವುದೇ ಪರಿಹಾರ ವಿತರಣೆಗೆ ಮುಂದಾಗಿಲ್ಲ. ತಜ್ಞರ ತಂಡ ಕಳುಹಿಸಿ ಪರಿಶೀಲನೆಯನ್ನೂ ನಡೆಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅಸಮಾಧಾನ ವ್ಯಕ್ತಪಡಿಸಿದರು. ಶನಿವಾರ ಪ್ರಜಾಸೇವಾ ಆಂದೋಲನದಲ್ಲಿ ಭಾಗಿಯಾಗಲು ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. 2022-23ರಲ್ಲಿ ಬರ ಪರಿಹಾರಕ್ಕೆ ಕೇಂದ್ರ ಅನುದಾನ ನೀಡಲಿಲ್ಲ. ಈ ಬಾರಿಯೂ ಇದುವರೆಗೆ ಅನುದಾನ ಬಿಡುಗಡೆಗೊಳಿಸಿಲ್ಲ. ರಾಜ್ಯ ಸರ್ಕಾರದಿಂದ ಸಹಾಯ ಕೇಳಿದ್ದರೂ ಕೇಂದ್ರದಿಂದ ತೃಪ್ತಿಕರ ಉತ್ತರ ದೊರೆತಿಲ್ಲ. ರಾಜ್ಯ ಸರ್ಕಾರ 50 ಲಕ್ಷ ರೈತರಿಗೆ ಮೊದಲ ಹಂತವಾಗಿ ಪ್ರತಿ ಖಾತೆಗೆ ₹2500 ಬರ ಪರಿಹಾರ ಘೋಷಿಸಿದೆ. ಕೇಂದ್ರದಿಂದ ಅನುದಾನ ಬಂದ ಕೂಡಲೇ ರೈತರಿಗೆ ಹೆಚ್ಚಿನ ಪರಿಹಾರ ನೀಡುತ್ತೇವೆ ಎಂದು ತಿಳಿಸಿದರು.ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಕೇಂದ್ರ ಸರ್ಕಾರ ಹೆಚ್ಚಿಸಬೇಕು. ಇದರಿಂದ ರೈತರ ಕಬ್ಬಿಗೆ ಹೆಚ್ಚಿನ ಬೆಲೆ ದೊರಕುತ್ತದೆ. ರಾಜ್ಯ ಸರ್ಕಾರ ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಉಳಿಸಿಕೊಂಡಿರುವ ಬಾಕಿ ಹಣವನ್ನು ಕೂಡಲೇ ಬಿಡುಗಡೆಗೊಳಿಸಲು ಸೂಚನೆ ನೀಡಿದೆ. ಬೆಂಬಲ ಬೆಲೆ ₹50 ಸರ್ಕಾರ ಬಿಡುಗಡೆಗೊಳಿಸಿದೆ ಎಂದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ₹30 ಸಾವಿರ ಕೋಟಿ ಮೀಸಲಿದ್ದು, ರೈತರ ಜಮೀನುಗಳಿಗೆ ಪರಿಹಾರ ನೀಡುವ ಕೆಲಸ ನಡೆದಿದೆ. ಇನ್ನೂ ₹50 ಸಾವಿರ ಕೋಟಿ ಬಿಡುಗಡೆಗೊಳಿಸಿ 2ನೇ ಹಂತದ ಪರಿಹಾರ ವಿತರಣೆಗೆ ಸೂಕ್ತ ಕ್ರಮ ಜರುಗಿಸಲಾಗುವುದು. ಮೂರನೇ ಹಂತಕ್ಕೆ ಹೆಚ್ಚು ಅನುದಾನ ಬೇಕಿರುವುದರಿಂದ ಅದನ್ನು ಹಂತ-ಹಂತವಾಗಿ ಪೂರ್ಣಗೊಳಿಸಲಾಗುವ ದೆಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ, ಸಮೀರ ಕಂಗನೊಳ್ಳಿ, ವರ್ಧಮಾನ ನ್ಯಾಮಗೌಡ, ಬಸವರಾಜ ಸಿಂಧೂರ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರಿದ್ದರು.