ಗ್ರಾಮೀಣ ಪತ್ರಕರ್ತರಿಗೆ ರಾಜ್ಯ ಸರ್ಕಾರ ನೀಡಿರುವ ಬಸ್‌ಪಾಸ್ ಸದ್ಬಳಕೆ ಮಾಡಿಕೊಂಡು, ಗ್ರಾಮೀಣ ಭಾಗದಲ್ಲಿರುವ ಸಮಸ್ಯೆಗಳನ್ನು ಬೆಳಕಿಗೆ ತರುವ ಮೂಲಕ ಸರ್ಕಾರದ ಕಣ್ತೆರೆಸುವ ಕೆಲಸವನ್ನು ಗ್ರಾಮೀಣ ಪತ್ರಕರ್ತರು ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ವಿವಿಧ ತಾಲೂಕುಗಳ 40 ಗ್ರಾಮೀಣ ಪತ್ರಕರ್ತರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೊಡಮಾಡಿದ ಗ್ರಾಮೀಣ ಬಸ್ ಪಾಸ್‌ಗಳನ್ನು ನಗರದ ಗಾಂಧಿ ಭವನದಲ್ಲಿ ಶನಿವಾರ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಗ್ರಾಮೀಣ ಪತ್ರಕರ್ತರು ಭವ್ಯ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು. ಗ್ರಾಮೀಣ ಪತ್ರಕರ್ತರು ತಮ್ಮ ಹೋಬಳಿ ಇಲ್ಲವೇ ತಾಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಸಂಚರಿಸಲು ಅನುಕೂಲ ಆಗಬೇಕು ಎಂಬ ಸದುದ್ದೇಶದಿಂದ ಹಿಂದಿನ ಮುಖ್ಯಮಂತ್ರಿಗಳು ಈ ಬಸ್ ಪಾಸ್ ವ್ಯವಸ್ಥೆಗೆ ಅಸ್ತು ನೀಡಿದ್ದರು. ಈಗ ಮಾನದಂಡಗಳನ್ನು ಸರಳೀಕರಣಗೊಳಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ 40 ಜನ ಪತ್ರಕರ್ತರಿಗೆ ಬಸ್‌ಪಾಸ್ ಗಳನ್ನು ರಾಜ್ಯ ಸರ್ಕಾರ ವಿತರಿಸುತ್ತಿರುವುದು ಸಂತಸದ ಸಂಗತಿ ಎಂದರು.ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಮಾಸಾಶನ, ಕುಟುಂಬ ಮಾಸಾಶನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ, ಬಸ್ ಪಾಸ್, ಮಾಧ್ಯಮ ಕಿಟ್, ತಂತ್ರಜ್ಞಾನ ತರಬೇತಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತಿರುವುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಯಡಳ್ಳಿ ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ನಿರೂಪಿಸಿದರು. ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದಪ್ರಕಾಶ ಮೀನಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ಉಪಾಧ್ಯಕ್ಷ ಶಶಿಕಾಂತ ಮೆಂಡೆಗಾರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಕಾಶ ಬೆಣ್ಣೂರ, ಪತ್ರಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.