ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸೂರ್ಯ ಘರ್ ಯೋಜನೆ ಸೇರಿದಂತೆ ಕುಸುಮ್ ಬಿ, ಕುಸುಮ್ ಸಿ ಯೋಜನೆಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನವಾಗದ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಿಎಂ ಕುಸುಮ್ ಯೋಜನೆ, ಪಿಎಂ ಸೂರ್ಯಘರ್ ಯೋಜನೆ ಕುರಿತು ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಿಲ್ಲೆಯಲ್ಲಿ ನಿರ್ಲಕ್ಷ ಮಾಡುತ್ತಿರುವುದು ಸರಿಯಲ್ಲ ಎಂದರು.

ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಮೆಸ್ಕಾಂ ಎಸ್‌ಇ ಮಂಜುನಾಥ್, ಜಿಲ್ಲೆಯಲ್ಲಿ ಸೂರ್ಯಧರ್ ಯೋಜನೆ ಅಡಿ 1542 ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅದರಲ್ಲಿ 1461 ಅರ್ಜಿಗಳು ಕ್ರಮಬದ್ಧವಾಗಿದ್ದು, ಸ್ವೀಕೃತಗೊಂಡಿದ್ದವು. ಇದರಲ್ಲಿ 183 ಫಲಾನುಭವಿಗಳಿಗೆ ಯೋಜನೆ ತಲುಪಿಸಲಾಗಿದೆ. ಅದರಲ್ಲಿ 178 ಮಂದಿ ಫಲಾನುಭವಿಗಳ ಕಮಿಷನಿಂಗ್ ಮುಗಿದಿದೆ. 171 ಫಲಾನುಭವಿಗಳಿಗೆ ಸಬ್ಸಿಡಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸೂರ್ಯ ಘರ್ ಯೋಜನೆ ಬಗ್ಗೆ ಜಿಲ್ಲೆಯಲ್ಲಿ ಮಾಹಿತಿ ಶಿಬಿರ ಆಯೋಜಿಸೋಣ. ಈ ಕಾರ್ಯಕ್ರಮ ಉದ್ಘಾಟನೆಗೆ ಕೇಂದ್ರ ಸಚಿವರನ್ನೇ ಆಹ್ವಾನಿಸೋಣ. ಶಿಬಿರದಲ್ಲಿ ಸ್ಥಳೀಯ ಜನಪ್ರತಿ ನಿಧಿಗಳು ಹಾಗೂ ಜನರಿಗೆ ಯೋಜನೆ ಬಗ್ಗೆ ಸೂಕ್ತ ಅರಿವು ಮೂಡಿಸೋಣ. ಆಗ ಜನರೇ ಈ ಯೋಜನೆಯತ್ತ ಒಲವು ತೋರುತ್ತಾರೆ ಎಂದು ಹೇಳಿದರು.


ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುಸುಮ್ ಬಿ ಹಾಗೂ ಕುಸುಮ್ ಸಿ ಯೋಜನೆಯಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ ಎಂದು ಸಂಸದರು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿ ಕುಸುಮ್ ಸಿ ಯೋಜನೆಯಡಿ ಸೋಲಾರ್ ಪ್ಯಾನಲ್ ಅಳವಡಿಕೆಗೆ ಸ್ಥಳೀಯ ರಿಂದ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಸಮಸ್ಯೆಯಾಗಿದೆ ಎಂದು ಸಭೆ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಸ್ಥಳೀಯ ಶಾಸಕರು, ಡಿಸಿ, ಎಡಿಸಿ, ಎಸಿ, ತಹಸೀಲ್ದಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಸಭೆ ನನ್ನ ನೇತೃತ್ವದಲ್ಲೇ ಶೀಘ್ರ ಆಯೋಜಿಸಿ. ಜನರ ಗೊಂದಲ ಪರಿಹರಿಸಿ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳೋಣ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಭೆಯಲ್ಲಿ ಎಡಿಸಿ ನಂಜುಂಡೇಗೌಡ ಸೇರಿದಂತೆ ಮೆಸ್ಕಾಂ ಇಲಾಖೆ ಅಧಿಕಾರಿಗಳು ಉಪಸ್ಥಿತರರಿದ್ದರು.ಫೋಟೋ:

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಪಿಎಂ ಕುಸುಮ್ ಯೋಜನೆ, ಪಿಎಂ ಸೂರ್ಯಘರ್ ಯೋಜನೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಿತು. ನಂಜುಂಡೇಗೌಡ, ಮಂಜುನಾಥ್ ಮತ್ತಿತರರಿದ್ದರು.