ಕನ್ನಡಪ್ರಭ ವಾರ್ತೆ ಬೆಂಗಳೂರು
ಬಣ್ಣ ಬಣ್ಣದ ಉಡುಪು, ಎಲ್ಲೆಲ್ಲೂ ಮಕ್ಕಳ ಕಲರವ, ಮಹಿಳಾ ಶಕ್ತಿ ಪ್ರದರ್ಶನ, ಮೈದಾನದ ತುಂಬಾ ಮೊಳಗಿದ ಸ್ವಾತಂತ್ರ್ಯ ಇತಿಹಾಸದ ಹಾಡು, 30 ತುಕಡಿಗಳ ಪಥ ಸಂಚಲನ, ಪೊಲೀಸರ ಕಟ್ಟುನಿಟ್ಟಿನ ತಪಾಸಣೆ. ಇವು ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಂಡು ಬಂದ ವಿಶೇಷಗಳು.ಬೆಳಿಗ್ಗೆ 8.58ಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಹಾತ್ಮ ಗಾಂಧಿ ಹಾಗೂ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ವಂದೇ ಮಾತರಂ ರಾಷ್ಟ್ರೀಯಗೀತೆ ಹಾಡಲಾಯಿತು. ನಂತರ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿದರು. ನಂತರ ರಾಷ್ಟ್ರಗೀತೆ ಜನಗಣ ಮನ ಹಾಡು ಪ್ರಸ್ತುತಪಡಿಸಿ ಸ್ವಾತಂತ್ರ್ಯ ದಿನಾಚರಣೆಗಾಗಿ ಮೈದಾನದಲ್ಲಿ ಸಜ್ಜಾಗಿ ನಿಂತಿದ್ದ 30 ತುಕಡಿಗಳ ಗೌರವ ವಂದನೆ ಸ್ವೀಕರಿಸಿದರು.
ತುಕಡಿಗಳನ್ನು ಸಿಎಆರ್ ವಿಭಾಗದ ಡಿಸಿಪಿ ಮಂಜುನಾಥ ಶುಕ್ಲ ಹಾಗೂ ಸಿಎಆರ್ ಎಸಿಪಿ ಕೇದಾರನಾಥ್ ಅವರು ಮುನ್ನಡೆಸಿದರು.ಪಥಸಂಚಲನದ ನಂತರ ಸುಮಾರು 1500ಕ್ಕೂ ಹೆಚ್ಚು ಮಕ್ಕಳು, 8 ಸಾವಿರಕ್ಕೂ ಹೆಚ್ಚು ಗಣ್ಯಾತಿ ಗಣ್ಯರು, ಸಾರ್ವಜನಿಕರು ನೆರೆದಿದ್ದ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಎಲ್ಲೆಲ್ಲೂ ಮಕ್ಕಳ ಕಲರವ ಕಾಣಿಸುತ್ತಿತ್ತು. ಸುಮಾರು 800 ಮಕ್ಕಳು ಒಂದಾಗಿ ವಂದೇ ಮಾತರಂ ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ, ಮಹಾತ್ಮಗಾಂಧಿ ನೇತೃತ್ವದಲ್ಲಿ ಅಂದು ಆರಂಭವಾದ ಸ್ವಾತಂತ್ರ್ಯ ಚಳವಳಿ ಕಣ್ಮುಂದೆ ಬರುವಂತೆ ಮಾಡಿತು. ಮೊದಲ ಸಾಲಿನಲ್ಲಿದ್ದ ವಿದ್ಯಾರ್ಥಿಗಳಂತೂ ಅತ್ಯಂತ ಉತ್ಸಾಹದಿಂದ ಹೆಜ್ಜೆ ಹಾಕುತ್ತಾ ನೋಡುಗರ ಗಮನ ಸೆಳೆದರು.
ಥಣಿಸಂದ್ರ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಸಾಗರ್ ಅವರ ಪರಿಕಲ್ಪನೆಯಲ್ಲಿ ಯಶವಂತ್ ಭೂಪತಿ ಅವರ ಸಂಗೀತ, ಹರಿಕೃಷ್ಣ, ವಿನೋದ್ ಕುಮಾರ್ ಅವರ ಸಾಹಿತ್ಯ, ಅನುಪ್ ರಾಮ್ ಅವರ ಹಾಡುಗಾರಿಕೆ ಸುಮಧುರವಾಗಿ ಮೂಡಿಬಂತು. ಶಾಲಾ ಶಿಕ್ಷಣ ಇಲಾಖೆಯ ನೆರವಿನಿಂದ ಶಾಲಾ ಶಿಕ್ಷಣ ಆಯುಕ್ತರ ಮೇಲ್ವಿಚಾರಣೆಯಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು.
ನಂತರ ಟಿ.ಎಸ್.ನಾಗಾಭರಣ ಅವರ ನಿರೂಪಣೆಯಲ್ಲಿ ಮೂಡಿ ಬಂದ ಸ್ವಾತಂತ್ರ್ಯದ ಹಾಡು ಪ್ರೇಕ್ಷಕರ ಗಮನ ಸೆಳೆಯಿತು. ಸುಮಾರು 750 ಮಕ್ಕಳು ಭಾಗವಹಿಸಿದ್ದ ನೃತ್ಯರೂಪಕದಲ್ಲಿ ಬೆಂಗಳೂರು ಉತ್ತರ ನಗರಪಾಲಿಕೆ ಪಿಳ್ಳಣ್ಣ ಗಾರ್ಡನ್ ಪಾಲಿಕೆಯ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ನೃತ್ಯರೂಪಕದಲ್ಲಿ ಭಾರತದ ಸ್ವಾತಂತ್ರ್ಯ ಪೂರ್ವದ ಘಟನಾವಳಿಗಳನ್ನು ನಿರೂಪಣೆ ಮೂಲಕ ಹೇಳುವುದಲ್ಲದೆ, ಮಕ್ಕಳು ಗಾಂಧಿ, ನೆಹರು, ಸುಭಾಷ್ ಚಂದ್ರ ಬೋಷ್ ಅವರಂತೆ ವೇಷತೊಟ್ಟು ಮೈದಾನದಲ್ಲಿ ನೃತ್ಯದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಅಂತಿಮವಾಗಿ ಮಹಿಳೆಯರ ರಕ್ಷಣೆಗಾಗಿ ರಚಿಸಲಾಗಿರುವ ಬೆಂಗಳೂರು ಹಾಗೂ ಬೀದರ್ ಜಿಲ್ಲೆಯಲ್ಲಿ ನೂತನ ಮಹಿಳಾ ಪಡೆ ಅಕ್ಕಪಡೆಯಿಂದ ಆಕರ್ಷಕ ಶಕ್ತಿ ಪ್ರದರ್ಶನ ಮೈನವಿರೇಳುವಂತಿತ್ತು. ಪುರುಷರಿಗಿಂತ ಸಾಹಸದಲ್ಲಿ ತಾವೇನೂ ಕಡಿಮೆ ಇಲ್ಲ ಎನ್ನುವಂತೆ ಶಕ್ತಿ ಪ್ರದರ್ಶನ ನೀಡಿದರು. ಮಹಿಳೆಯರು ಆಪತ್ತಿನಲ್ಲಿ ಸಿಲುಕಿಕೊಂಡಾಗ ಅಲ್ಲಿಂದ ತಪ್ಪಿಸಿಕೊಳ್ಳಲು ಯಾವ ಕೌಶಲ ಉಪಯೋಗಿಸಬೇಕು ಎಂಬುದನ್ನು ಕರಾಟೆ, ಬೆಂಕಿ ಹಾಗೂ ಹೆಂಚು ಮುರಿಯುವ ಮೂಲಕ ಪ್ರದರ್ಶಿಸಿದರು.ಅಂತಿಮವಾಗಿ ಭಾರತ್ ಜೋಡೋ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು. ಪಥಸಂಚಲನದಲ್ಲಿ ಬಿಎಸ್ಎಫ್, ಕೆಎಸ್ ಆರ್ ಪಿ ಮಹಿಳೆ, ಕೆಎಸ್ ಆರ್ ಪಿ ಪುರುಷ ಪಡೆ, ತೆಲಂಗಾಣ ರಾಜ್ಯಪೊಲೀಸ್ ಪಡೆ, ಬಂಧೀಖಾನೆ ಪಡೆ, ಸಮರ್ಥನಂ ಅಂಗವಿಕಲರ ಶಾಲೆಯ ವಿದ್ಯಾರ್ಥಿಗಳು, ರಮಣಮಹರ್ಷಿ ಅಂಧರ ಶಾಲೆಯ ವಿದ್ಯಾರ್ಥಿಗಳ ತುಕಡಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.