ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಮತ್ತಷ್ಟು ವೇಗ ನೀಡಲು ಹಾಗೂ ನಗರದ ಮೂಲಸೌಕರ್ಯಕ್ಕೆ ಜಾಗತಿಕ ಸ್ಪರ್ಶ ನೀಡಲು ಮುಂದಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ‘ಬೆಂಗಳೂರು ಸ್ಕೈಡೆಕ್’ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಮತ್ತಷ್ಟು ವೇಗ ನೀಡಲು ಹಾಗೂ ನಗರದ ಮೂಲಸೌಕರ್ಯಕ್ಕೆ ಜಾಗತಿಕ ಸ್ಪರ್ಶ ನೀಡಲು ಮುಂದಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ‘ಬೆಂಗಳೂರು ಸ್ಕೈಡೆಕ್’ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ.ಸುಮಾರು 600 ಕೋಟಿ ರು.ವೆಚ್ಚದಲ್ಲಿ 250 ಮೀಟರ್ ಎತ್ತರದ ಬೃಹತ್ ಸ್ಕೈಡೆಕ್ (ವೀಕ್ಷಣಾ ಗೋಪುರ) ಯೋಜನೆಗೆ ಸ್ಥಳ ಅಂತಿಮಗೊಂಡಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಈ ಮಹತ್ವಾಕಾಂಕ್ಷಿ ಯೋಜನೆಗೆ ಆಸಕ್ತ ದೇಶ-ವಿದೇಶಗಳ ಖಾಸಗಿ ಹೂಡಿಕೆದಾರರಿಂದ ಹೂಡಿಕೆಗೆ ಮುಕ್ತ ಆಹ್ವಾನ (ಎಕ್ಸ್‌ಪ್ರೆಶನ್ ಆಫ್ ಇಂಟ್ರೆಸ್ಟ್) ನೀಡಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯ (ಎನ್‌ಪಿಕೆಎಲ್) 6ನೇ ಬ್ಲಾಕ್‌ನಲ್ಲಿ ಈ ಯೋಜನೆ ರೂಪುಗೊಳ್ಳಲಿದೆ. ಭೀಮನಕುಪ್ಪೆ ಗ್ರಾಮದ ಸರ್ವೆ ನಂ. 75, 104 ಹಾಗೂ ಚಲ್ಲಘಟ್ಟ ಗ್ರಾಮದ ಸರ್ವೆ ನಂ. 13, 49 ವ್ಯಾಪ್ತಿಯಲ್ಲಿ ಸುಮಾರು 57.4 ಎಕರೆ ವಿಸ್ತೀರ್ಣದ ವಿಶಾಲ ಭೂಮಿಯನ್ನು ಇದಕ್ಕಾಗಿ ಗುರುತಿಸಲಾಗಿದೆ. ದೇಶ ವಿದೇಶಗಳ ಪ್ರತಿಷ್ಠಿತ ಮೂಲಸೌಕರ್ಯ ನಿರ್ಮಾಣ ಸಂಸ್ಥೆಗಳು, ರಿಯಲ್ ಎಸ್ಟೇಟ್ ಡೆವಲಪರ್‌ಗಳು, ಆತಿಥ್ಯ ಮತ್ತು ಪ್ರವಾಸೋದ್ಯಮ ವಲಯದ ಅನುಭವಿ ಸಂಸ್ಥೆಗಳು ಯೋಜನೆಯಲ್ಲಿ ಭಾಗವಹಿಸಲು ಮುಂದೆ ಬರಬಹುದು. ಯೋಜನೆಯ ಪರಿಕಲ್ಪನೆ, ಹಣಕಾಸು ಹೂಡಿಕೆ ಸಾಮರ್ಥ್ಯ ಹಾಗೂ ಅನುಷ್ಠಾನ ಮಾದರಿಗಳ ಕುರಿತು ಹೂಡಿಕೆದಾರರಿಂದ ಪ್ರಾಥಮಿಕ ಸಲಹೆ ಮತ್ತು ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದು ಎಂದು ಬಿಡಿಎ ಆಹ್ವಾನಿಸಿದೆ.ಇಲ್ಲಿ ಕೇವಲ ವೀಕ್ಷಣಾ ಗೋಪುರ ಮಾತ್ರವಲ್ಲದೆ, ವಾಣಿಜ್ಯ ಮಳಿಗೆಗಳು, ಮನರಂಜನಾ ತಾಣಗಳು, ಆತಿಥ್ಯೋದ್ಯಮ (ಹೋಟೆಲ್/ರೆಸಾರ್ಟ್), ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಸಾರ್ವಜನಿಕ ಆಕರ್ಷಣೆಯ ತಾಣಗಳನ್ನು ಒಳಗೊಂಡ ಸಮಗ್ರ ‘ಮಿಶ್ರ ಬಳಕೆಯ ನಗರ ತಾಣ’ವಾಗಿ ಇದನ್ನು ಅಭಿವೃದ್ಧಿಪಡಿಸಲು ಬಿಡಿಎ ಯೋಜನೆ ರೂಪಿಸಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಥಳ ಬದಲಾವಣೆ:ಈ ಹಿಂದೆ ಹೆಮ್ಮಿಗೆಪುರ, ಬೆಂಗಳೂರು ವಿಶ್ವವಿದ್ಯಾನಿಲಯ ಆವರಣ ಹಾಗೂ ಬೈಯಪ್ಪನಹಳ್ಳಿಯಲ್ಲಿ ಸ್ಕೈಡೆಕ್ ನಿರ್ಮಿಸಲು ಸ್ಥಳ ಪರಿಶೀಲಿಸಲಾಗಿತ್ತು. ಆದರೆ, ನಾಗರಿಕ ವಿಮಾನಯಾನ ಇಲಾಖೆಯ ಎತ್ತರ ನಿರ್ಬಂಧ ನಿಯಮಗಳಿಂದಾಗಿ ಆ ಸ್ಥಳಗಳನ್ನು ಕೈಬಿಡಲಾಗಿತ್ತು. ಇದೀಗ ಆಯ್ಕೆಯಾಗಿರುವ ಸ್ಥಳದಲ್ಲಿ ಮಣ್ಣು ಪರೀಕ್ಷೆ ಸೇರಿದಂತೆ ಪ್ರಾಥಮಿಕ ಪರೀಕ್ಷೆಗಳು ಯಶಸ್ವಿಯಾಗಿದ್ದು, ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದೆ ಎನ್ನಲಾಗಿದೆ.
ಭೂ ವಿವಾದ ಇತ್ಯರ್ಥ?ಚಲ್ಲಘಟ್ಟ ಗ್ರಾಮದ ಸರ್ವೇ ನಂ.13ರ 5 ಎಕರೆ ಜಮೀನನ್ನು 2010ರಲ್ಲಿ ಅಂದಿನ ಬೆಂಗಳೂರು ನಗರ ಜಿಲ್ಲಾ ವಿಶೇಷ ಜಿಲ್ಲಾಧಿಕಾರಿಗಳು ಶ್ರೀ ಮಾರುತಿ ವಿಕಲಚೇತನರ ಕಲ್ಯಾಣ ಸಂಘಕ್ಕೆ ಮಂಜೂರು ಮಾಡಿದ್ದರು. ಸಂಘವು ತಾಲೂಕು ಪಂಚಾಯಿತಿ ಅನುಮೋದನೆ ಪಡೆದು, ಅರ್ಹ 230 ವಿಕಲಚೇತನ ಫಲಾನುಭವಿಗಳಿಗೆ ತಲಾ 20*30 ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಈಗ ಬಿಡಿಎ ಈ ಜಾಗ ವಶಪಡಿಸಿಕೊಳ್ಳಲು ಯತ್ನಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಈ ಕುರಿತು ಬಿಡಿಎ ವಿವಾದ ಇತ್ಯರ್ಥಕ್ಕೆ ಮುಂದಾಗಿದ್ದು, ಸಂಘದ ಮುಖಂಡರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಸಂಘಕ್ಕೆ ಬದಲಿಯಾಗಿ 5 ಎಕರೆ ಜಮೀನು ನೀಡಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದೆ. ಇದರಿಂದ ಕಾನೂನು ತೊಡಕುಗಳು ಕೂಡ ಇತ್ಯರ್ಥವಾಗಲಿವೆ ಎಂದು ಬಿಡಿಎ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.ಯೋಜನೆ ಬಗ್ಗೆ ಪ್ರಶ್ನೆಗಳು ಅಥವಾ ಸ್ಪಷ್ಟೀಕರಣ ಸಲ್ಲಿಕೆಗೆ ನ.29 ಕೊನೆ ದಿನ. ಪ್ರಸ್ತಾವನಾ ಪೂರ್ವ ಸಮಾಲೋಚನೆಗೆ ನ.30, ತಿದ್ದುಪಡಿ ಅಥವಾ ಹೆಚ್ಚುವರಿ ಮಾಹಿತಿ ಪ್ರಕಟಣೆಗೆ ಡಿ.7 ಹಾಗೂ ಇಒಐ ಸಲ್ಲಿಕೆಗೆ ಡಿ.16 ಮತ್ತು ಪ್ರಸ್ತಾವನೆಗಳ ಪರಿಶೀಲನೆಗೆ ಡಿ.17 ಕಡೆಯ ದಿನ. ಹೆಚ್ಚಿನ ಮಾಹಿತಿಗೆ ಬಿಡಿಎ ಕೇಂದ್ರ ಕಚೇರಿಯ ಎಂಜಿನಿಯರ್ ಸದಸ್ಯರ ಕಚೇರಿಯ ಸಹಾಯಕ ಎಂಜಿನಿಯರ್ ಕೇಶವ ಪಾಟೀಲ್ (9741463649 ) ಸಂಪರ್ಕಿಸಬಹುದು ಅಥವಾ ಬಿಡಿಎ ಅಧಿಕೃತ ಜಾಲತಾಣ (bdakarnataka.in) ವೀಕ್ಷಿಸಬಹುದು.
