ಪಬ್ ಗಲಾಟೆ ಪ್ರಕರಣದ ಬೆನ್ನಲ್ಲೇ, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಯೂಟ್ಯೂಬರ್ ಅಮುಕು ಡುಮುಕು ಮಂಜ ಅಲಿಯಾಸ್ ಮಂಜುನಾಥ್ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪಬ್ ಗಲಾಟೆ ಪ್ರಕರಣದ ಬೆನ್ನಲ್ಲೇ, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಯೂಟ್ಯೂಬರ್ ಅಮುಕು ಡುಮುಕು ಮಂಜ ಅಲಿಯಾಸ್ ಮಂಜುನಾಥ್ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.ವಿಕ್ರಂ ಎಂಬುವರು ನೀಡಿದ ದೂರಿನನ್ವಯ ಅಮುಕು ಡುಮುಕು ಮಂಜುನಾಥ್, ಮಹೇಶ್, ಸಿದ್ದು, ನಿತೇಶ್, ಸುರೇಶ್, ರುಕ್ಮಿಣಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ:ನ.14ರ ರಾತ್ರಿ 9 ಗಂಟೆಯ ಸಮಯದಲ್ಲಿ ಮೋಹನ್ ಕುಮಾರ್ ನಗರದ ಮಸೀದಿ ರಸ್ತೆಯಲ್ಲಿ ವಿಕ್ರಂ ಸ್ನೇಹಿತನಾದ ಶ್ಯಾಮನ್ಸ್ ಎಂಬಾತನಿಗೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದರು. ಈ ವಿಷಯ ಗೊತ್ತಾಗಿ ನಾನು ನನ್ನ ಸ್ನೇಹಿತರು ಕುಟುಂಬ ಸದಸ್ಯರು ರಸ್ತೆಯಲ್ಲಿ ನಿಂತುಕೊಂಡು ಮಾತನಾಡುತ್ತಿದ್ದಾಗ ಸ್ಥಳಕ್ಕೆ ಬಂದ ಆರೋಪಿಗಳು ನಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ವಿಕ್ರಂ ದೂರಿನಲ್ಲಿ ಆರೋಪಿಸಿದ್ದಾರೆ.
ಶ್ಯಾಮನ್ಸ್ ಎಂಬಾತನ ಹಲ್ಲೆಯ ವಿಚಾರವಾಗಿ ಅಕ್ಕಪಕ್ಕದ ಮನೆಯವರಾದ ಮಂಜು ಮತ್ತು ವಿಕ್ರಂ ನಡುವೆ ವಾಗ್ವಾದವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಎರಡೂ ಕುಟುಂಬದವರು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಂಜುನಾಥ್ ಕೂಡ ವಿಕ್ರಂ ಮತ್ತು ಇತರರ ವಿರುದ್ಧ ದೂರು ನೀಡಿದ್ದು, ಯಶವಂತಪುರ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ. ಘಟನೆಯ ಸಂಬಂಧ ದೂರು-ಪ್ರತಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮ್ಯಾನೇಜರ್ ಮೇಲೆ ಹಲ್ಲೆಗೆ ಯತ್ನ:
ಮುದ್ದಿನಪಾಳ್ಯದಲ್ಲಿರುವ ಪಬ್‌ನಲ್ಲಿ ಮದ್ಯ ಸೇವಿಸಿ ನಂತರ ಬಿಲ್ ಕಟ್ಟಲು ನಿರಾಕರಿಸಿ, ಪಬ್ ಮ್ಯಾನೇಜರ್ ಮೇಲೆ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಮಂಜನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.