ಸಿಎಂ ರಾಜೀನಾಮೆ ನೀಡಲಿ, ಸಿಬಿಐ ತನಿಖೆ ಆಗಲಿ: ಬಿಜೆಪಿ ಆಗ್ರಹ

KannadaprabhaNewsNetwork |  
Published : Jul 04, 2024, 01:02 AM ISTUpdated : Jul 04, 2024, 04:15 AM IST
ಬಿಜೆಪಿ ಪ್ರತಿಭಟನೆ | Kannada Prabha

ಸಾರಾಂಶ

ಮೈಸೂರಿನ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಬಲವಾಗಿ ಒತ್ತಾಯಿಸಿದೆ.

 ಬೆಂಗಳೂರು :  ಮೈಸೂರಿನ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಬಲವಾಗಿ ಒತ್ತಾಯಿಸಿದೆ.

ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುತ್ತೇವೆಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರದಲ್ಲಿ ದಿನಕ್ಕೊಂದು ಹಗರಣ ಬೆಳಕಿಗೆ ಬರುತ್ತಿದ್ದು, ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಕೂಡಲೇ ಈ ಮುಡಾ ನಿವೇಶನ ಯೋಜನೆಯನ್ನು ರದ್ದು ಮಾಡಿ ತನಿಖೆಯನ್ನು ಸಿಬಿಐಗೆ ವಹಿಸಿದರೆ ಸತ್ಯ ಹೊರ ಬರಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಹೇಳಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಮತ್ತು ಮುಡಾ ಹಗರಣ ಖಂಡಿಸಿ ಬುಧವಾರ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದ ವೇಳೆ ಉಭಯ ನಾಯಕರು ಸುದ್ದಿಗಾರರ ಜತೆ ಮಾತನಾಡಿದರು.

ಸಿಎಂ ಗಮನಕ್ಕೆ ಬರದೆ ಹೇಗೆ ಸಾಧ್ಯ?:

ವಿಜಯೇಂದ್ರ ಮಾತನಾಡಿ, ಭಂಡ ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಿದೆ. ದಿನಕ್ಕೊಂದು ಹಗರಣ ಬಯಲಿಗೆ ಬರುತ್ತಿದೆ. ವಾಲ್ಮೀಕಿ ನಿಗಮದ್ದು ನೂರಾರು ಕೋಟಿಯ ಹಗರಣವಾದರೆ, ಮುಡಾದಲ್ಲಿ ಅವರ ಗಮನಕ್ಕೆ ಬಾರದೆ ಹಗರಣ ನಡೆದಿದೆಯಂತೆ. ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ನಡೆಯಲು ಹೇಗೆ ಸಾಧ್ಯ ಎಂದು ಹರಿಹಾಯ್ದರು.ಮುಖ್ಯಮಂತ್ರಿಗಳ ಧರ್ಮಪತ್ನಿಗೆ 15 ನಿವೇಶನಗಳನ್ನು ಕೊಟ್ಟಿದ್ದಾರೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮೈಸೂರಿಗೆ ಹೋಗಿ ಅಧಿಕಾರಿಗಳ ವರ್ಗಾವಣೆ ಮಾಡಿ, ಹಗರಣಕ್ಕೆ ಸಂಬಂಧಿಸಿದ ಕಡತಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಬಂದಿದ್ದಾರೆ. ಸಾವಿರಾರು ಕೋಟಿ ರು. ಹಗರಣದ ಕುರಿತು ಜಿಲ್ಲಾಧಿಕಾರಿಗಳು 6-7 ತಿಂಗಳ ಹಿಂದೆ ವರದಿ ನೀಡಿದ್ದರು. ಹಗರಣದ ವಿಚಾರ ಗೊತ್ತಿದ್ದರೂ ಸಹ ಇದನ್ನು ಮುಚ್ಚಿಟ್ಟಿದ್ದರು. ತಾಕತ್ತಿದ್ದರೆ ಅಧಿಕಾರಿಗಳನ್ನು ಅಮಾನತು ಮಾಡಬೇಕಿತ್ತು. ಆದರೆ, ವರ್ಗಾವಣೆ ಮಾಡಲಾಗಿದೆ. ಈ ಹಗರಣ ಮುಚ್ಚಿಹಾಕುವ ಸಂಪೂರ್ಣ ಪ್ರಯತ್ನ ನಡೆದಿದೆ. ತನಿಖೆ ಪೂರ್ಣವಾಗುವವರೆಗೆ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.

ಲೂಟಿ ಹೊಡೆಯಲು ಸುರಂಗ:  ವಿಧಾನಸಭೆ ಪ್ರತಿಪಕ್ಷ ನಾಯಕ ಅಶೋಕ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷದ ಬಳಿಕ ಒಂದೊಂದಾಗಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗುತ್ತಿದ್ದು, ಲೂಟಿ ಹೊಡೆಯಲು ಸುರಂಗ ಕೊರೆಯುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮುಡಾದಲ್ಲಿ 50:50ರ ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿದ್ದಾರೆ. 3-4 ಸಾವಿರ ಕೋಟಿ ರು. ಹಗರಣ ನಡೆದಿದೆ. ಕಳೆದ 20 ವರ್ಷಗಳಿಂದ ಹಗರಣ ನಡೆದಿದೆ ಎನ್ನಲಾಗುತ್ತಿದೆ. ಇದನ್ನು ಯಾರೇ ಮಾಡಿದರೂ, ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಬದಲಿ ನಿವೇಶನದ ಗೋಲ್ಮಾಲ್ ನಡೆದಿದೆ. ಬಡವರು 86 ಸಾವಿರ ಅರ್ಜಿಗಳನ್ನು ಹಾಕಿದ್ದಾರೆ. ಅವರಿಗೆ ನಿವೇಶನ ಇಲ್ಲ. ಆದರೆ ಮುಖ್ಯಮಂತ್ರಿಗಳು ಎಂಬ ಕಾರಣಕ್ಕೆ ನಿವೇಶನಗಳನ್ನು ಮಂಜೂರು ಮಾಡಲಾಗಿದೆ. ಮಂಜೂರಾಗಿರುವ ನಿವೇಶನಗಳ ಸಂಖ್ಯೆಗಿಂತಲೂ ಹೆಚ್ಚಿನ ನಿವೇಶನಗಳನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹರಣದ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಸರ್ಕಾರ ಕೂಡಲೇ ಈ ನಿವೇಶನ ಯೋಜನೆಯನ್ನು ರದ್ದು ಮಾಡಬೇಕು. ತನಿಖೆಯನ್ನು ಸಿಬಿಐಗೆ ವಹಿಸಿದರೆ ಸತ್ಯ ಹೊರ ಬರಲಿದೆ. ಈ ವಿಚಾರವನ್ನು ಸದನದಲ್ಲಿ ಮಾತನಾಡಿ ಸತ್ಯ ಬಯಲಿಗೆ ತರುತ್ತೇವೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ದ್ವೇಷ ಭಾಷಣ ಕಾಯ್ದೆ : ಜಾತಿ ನಿಂದನೆಯ ರೀತಿ ದುರ್ಬಳಕೆ ಆಗಬಹುದು''
ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!