ಬಿಜೆಪಿ ಕಾಲದ ಅಕ್ರಮ: ಸಿದ್ದು ‘ಬೇಟೆ’ ಆರಂಭ!

KannadaprabhaNewsNetwork |  
Published : Jul 25, 2024, 01:24 AM IST
ವಿಧಾನಸೌಧ | Kannada Prabha

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಮತ್ತಿತರ ಹಗರಣಗಳನ್ನು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ತನಿಖೆ ತೀವ್ರಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಡುಗಿದ ಬೆನ್ನಲ್ಲೇ ರಾಜ್ಯ ಭೋವಿ ನಿಗಮದ ಕೋಟ್ಯಂತರ ರು. ಅವ್ಯವಹಾರ ಪ್ರಕರಣ ಸಂಬಂಧ ನಿಗಮದ ಕಚೇರಿ ಅಧೀಕ್ಷಕ ಪಿ.ಡಿ.ಸುಬ್ಬಪ್ಪ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಏನಿದು ಹಗರಣ?

- 2021-22ನೇ ಸಾಲಿನಲ್ಲಿ ಭೋವಿ ನಿಗಮದಿಂದ ಉದ್ಯಮಿಗಳಿಗೆ ಸಾಲ ನೀಡುವ ಯೋಜನೆಯಲ್ಲಿ ಅವ್ಯವಹಾರ

- ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕಲಬುರಗಿ ಜಿಲ್ಲೆಯಲ್ಲಿ ದೂರು ದಾಖಲು

- ಕೆಲ ದಿನಗಳ ಹಿಂದೆಯಷ್ಟೇ ಸಿಐಡಿ ತನಿಖೆಗೆ ಆದೇಶಿಸಿದ್ದ ರಾಜ್ಯ ಸರ್ಕಾರ

- ತನಿಖೆಗಿಳಿದ ಸಿಐಡಿಯಿಂದ ಭೋವಿ ನಿಗಮದ ಅಧೀಕ್ಷಕ ಸುಬ್ಬಪ್ಪ ಬಂಧನ

------ಕನ್ನಡಪ್ರಭ ವಾರ್ತೆ ಬೆಂಗಳೂರು

ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಮತ್ತಿತರ ಹಗರಣಗಳನ್ನು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ತನಿಖೆ ತೀವ್ರಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಡುಗಿದ ಬೆನ್ನಲ್ಲೇ ರಾಜ್ಯ ಭೋವಿ ನಿಗಮದ ಕೋಟ್ಯಂತರ ರು. ಅವ್ಯವಹಾರ ಪ್ರಕರಣ ಸಂಬಂಧ ನಿಗಮದ ಕಚೇರಿ ಅಧೀಕ್ಷಕ ಪಿ.ಡಿ.ಸುಬ್ಬಪ್ಪ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

2021-22ನೇ ಸಾಲಿನಲ್ಲಿ ಭೋವಿ ಸಮುದಾಯದ ಉದ್ಯಮಿಗಳಿಗೆ ನಿಗಮವು ನೀಡುವ ಆರ್ಥಿಕ ಸಾಲ ಯೋಜನೆಯಲ್ಲಿ ಕೋಟ್ಯಂತರ ರು. ಮೊತ್ತದ ಅಕ್ರಮ ನಡೆದಿದೆ ಎಂದು ಆರೋಪಿಸಿ ಬೆಂಗಳೂರು ನಗರದ ಸಿದ್ದಾಪುರ, ಕಲಬುರಗಿ ಜಿಲ್ಲೆಯ ಕಾಳಗಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರವು, ಕೆಲ ದಿನಗಳ ಹಿಂದೆ ಸಿಐಡಿ ತನಿಖೆಗೆ ಆದೇಶಿಸಿತ್ತು. ಅಂತೆಯೇ ತನಿಖೆಗಿಳಿದ ಸಿಐಡಿ, ನಿಗಮದ ಅಧೀಕ್ಷಕ ಸುಬ್ಬಪ್ಪ ಅವರನ್ನು ಬಂಧಿಸಿತು. ಬಳಿಕ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಿ ವಿಚಾರಣೆ ಸಲುವಾಗಿ ಆರೋಪಿಯನ್ನು ನಾಲ್ಕು ದಿನಗಳ ಕಾಲ ಐಡಿ ವಶಕ್ಕೆ ಪಡೆದಿದೆ.

ಈ ಅವ್ಯವಹಾರ ಆರೋಪ ಕೇಳಿ ಬಂದ ಕೂಡಲೇ ಸುಬ್ಬಪ್ಪ ಅವರು, ಸುಮಾರು 200ಕ್ಕೂ ಹೆಚ್ಚಿನ ಕಡತಗಳನ್ನು ಕಳವು ಮಾಡಿ ಬಚ್ಚಿಟ್ಟಿದ್ದರು. ಈಗ ಆ ಕಡತಗಳನ್ನು ಮರಳಿ ಪಡೆಯಲಾಗುತ್ತಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.ಕಡತ ನಾಪತ್ತೆ ಮಾಡಿದ್ದ ಸುಬ್ಬಪ್ಪ?:

2021-23ವರೆಗೆ ರಾಜ್ಯ ಭೋವಿ ನಿಗಮದ ಕೇಂದ್ರ ಕಚೇರಿಯ ಅಧೀಕ್ಷಕರಾಗಿ ಸುಬ್ಬಪ್ಪ ಕಾರ್ಯನಿರ್ವಹಿಸಿದ್ದರು. ಭೋವಿ ನಿಗಮದಿಂದ ಆ ಸಮುದಾಯದ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ಸಾಲ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಅಂತೆಯೇ ನಿಗಮದ ಉದ್ಯಮಶೀಲತೆ ಹಾಗೂ ನೇರ ಸಾಲ ಯೋಜನೆಗಳಲ್ಲಿ ಆರ್ಥಿಕ ನೆರವು ಕೊಡಿಸುವುದಾಗಿ ಕೆಲವರಿಂದ ಮಧ್ಯವರ್ತಿಗಳು ಲಕ್ಷಾಂತರ ರು. ಹಣ ಪಡೆದು ವಂಚಿಸಿದ್ದರು. ಅಲ್ಲದೆ ಸಾಲ ಮಂಜೂರಾತಿ ಮಾಡಿರುವ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ನಿಗಮದ ಕೋಟ್ಯಂತರ ಹಣವನ್ನು ಅಧಿಕಾರಿಗಳು ನುಂಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಅಕ್ರಮದ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂತ್ರಿ ಶಿವರಾಜ ತಂಗಡಗಿ ಅ‍ವರಿಗೆ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಸಹ ದೂರು ಕೊಟ್ಟಿದ್ದರು. ಅಕ್ರಮದ ಕುರಿತು ಮುಖ್ಯಮಂತ್ರಿಗಳಿಗೆ ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದ್ದರು. ಕೊನೆಗೆ ಭೋವಿ ನಿಗಮದ ಅವ್ಯವಹಾರ ಪ್ರಕರಣದ ಕುರಿತು ಸಿಐಡಿ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಯಯ್ಯ ಸೂಚನೆ ಮೇರೆಗೆ ಡಿಜಿಪಿ ಆದೇಶಿಸಿದ್ದರು. ಈ ಬಗ್ಗೆ ತನಿಖೆಗಿಳಿದ ಸಿಐಡಿ, ಈಗ ಮೊದಲ ಬೇಟೆಯಾಗಿ ಸುಬ್ಬಪ್ಪ ಅವರನ್ನು ಬಂಧಿಸಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಗೃಹಲಕ್ಷ್ಮಿ ಸ್ಕೀಂ ₹5000 ಕೋಟಿ ಹಗರಣ: ಬಿಜೆಪಿ
ಬೆಳಗಾವಿ ಸದನದಲ್ಲೂ ಸಿಎಂ ಕುರ್ಚಿಯ ಕದನ!