ಬೀದರ್ : ಬಡವರಿಗೆ, ಕೂಲಿ ಕಾರ್ಮಿಕರಿಗೆ ಇಂದಿರಾ ಕ್ಯಾಂಟಿನ್ ಅನುಕೂಲವಾಗಲಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ತಿಳಿಸಿದರು .
ಜಿಲ್ಲಾಡಳಿತ, ನಗರಾಭಿವೃದ್ಧಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಓಲ್ಡ್ ಸಿಟಿಯ ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ಆವರಣದಲ್ಲಿ ನೂತನ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ, ಉಪಹಾರ ಸೇವಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಆಶಯದಂತೆ ಹಾಗೂ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ನಗರ ಪ್ರದೇಶದ ಜನರಿಗೆ ಕೈಗೆಟುಕುವ ದರದಲ್ಲಿ ಆಹಾರ ನೀಡುವ ಉದ್ದೇಶದಿಂದ ಇಂದಿರಾ ಕ್ಯಾಂಟಿನ್ ಆರಂಭಿಸಲಾಗಿದೆ ಎಂದರು.ನಗರದ ಓಲ್ಡ್ ಸಿಟಿಯ ಜನರಿಗೆ ಮತ್ತು ಇಲ್ಲಿನ ಆಸ್ಪತ್ರೆಗೆ ಬರುವ ಜನರಿಗೆ ಈ ಕ್ಯಾಂಟಿನ್ ಉಪಯುಕ್ತವಾಗಲಿದೆ. ಬೀದರ್ ನಗರದಲ್ಲಿ 3 ಹೊಸ ಇಂದಿರಾ ಕ್ಯಾಂಟಿನ್ ಆರಂಭವಾಗಲಿವೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶಿವರಾಜ್ ರಾಥೋಡ್ ಸೇರಿದಂತೆ ನಗರಸಭೆಯ ಸದಸ್ಯರು ಮತ್ತು ಗಣ್ಯರು ಉಪಸ್ಥಿತರಿದ್ದರು.
ಬೀದರ್ ನಗರದ ಸಮಸ್ಯೆಗಳನ್ನು ಗುರುತಿಸಿ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕೈಗೊಳ್ಳಲಾಗುವುದು. ರಸ್ತೆ ಮತ್ತು ಚರಂಡಿಗಾಗಿ ₹100 ಕೋಟಿ ಹಾಗೂ 50 ಕೋಟಿ ರು., ವಿಶೇಷ ಅನುದಾನ ಮುಖ್ಯಮಂತ್ರಿಗಳು ನೀಡಿದ್ದಾರೆ. ನಗರೋತ್ಥಾನ ಯೋಜನೆಯಡಿ ₹50 ಕೋಟಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಬಿ-ಖಾತಾದ ಉಪಯೋಗ ಜನರು ಪಡೆದುಕೊಳ್ಳಬೇಕು ಎಂದು ಸಚಿವ ರಹೀಮ್ ಖಾನ್ ತಿಳಿಸಿದರು.