;Resize=(412,232))
ಮುಂಬೈ: 20 ವರ್ಷಗಳ ಮುನಿಸಿಗೆ ವಿದಾಯ ಹೇಳಿರುವ ಶಿವಸೇನೆ (ಉದ್ಧವ್‌ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಎಂಎನ್‌ಎಸ್ ನಾಯಕ ರಾಜ್‌ಠಾಕ್ರೆ, ಮುಂಬರುವ ಮುಂಬೈ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿಯ ಘೋಷಣೆ ಮಾಡಿದ್ದಾರೆ.
ಉದ್ಧವ್ ಮತ್ತು ರಾಜ್ ಒಂದಾಗಿರುವುದು ಮಹಾ ರಾಜಕೀಯದಲ್ಲಿ ಭಾರೀ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಇದೆ. ಕಾರಣ ಉದ್ಧವ್ ಅಘಾಡಿ ಕೂಟದ ಭಾಗವಾಗಿದ್ದಾರೆ. ಒಂದು ವೇಳೆ ಉದ್ಧವ್, ರಾಜ್ ಜೊತೆ ಕೈಜೋಡಿಸಿದರೆ ನಾವು ಪ್ರತ್ಯೇಕವಾಗಿ ಸ್ಪರ್ಧಿಸುತ್ತೇವೆ ಎಂದು ಕಾಂಗ್ರೆಸ್ ಮತ್ತು ಶರದ್ ಬಣದ ಎನ್‌ಸಿಪಿ ಹೇಳಿದೆ. ಹೀಗಾಗಿ ಇದು ಅಘಾಡಿ ಕೂಟದ ಮೈತ್ರಿಗೆ ಪೆಟ್ಟು ನೀಡಲಿದೆ. ಮತ್ತೊಂದೆಡೆ ಎನ್‌ಡಿಎ ಕೂಟಕ್ಕೆ ಹತ್ತಿರವಾಗಿದ್ದ ರಾಜ್, ಇದೀಗ ಮರಳಿ ಉದ್ಧವ್ ಜೊತೆ ಕೈಜೋಡಿಸಿರುವುದು ಮಹಾಯುತಿ ಕೂಟದ ಮತಗಳ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗಿದೆ.
‘ಭಿನ್ನಾಭಿಪ್ರಾಯ, ವಿವಾದಗಳಿಗಿಂತ ಮಹಾರಾಷ್ಟ್ರ ಮುಖ್ಯ. ಹಾಗಾಗಿ ನಾವಿಬ್ಬರೂ ಭಿನ್ನಮತ ಮರೆತು ಒಂದಾಗಿದ್ದೇವೆ’ ಎಂದು ಉಭಯನಾಯಕರು ಬುಧವಾರ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜತೆಗೆ, ಸೀಟು ಹಂಚಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸದೆ, ನಾಮಪತ್ರ ಸಲ್ಲಿಕೆ ದಿನವೇ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ ಎಂದಿದ್ದಾರೆ.
ಮಹಾರಾಷ್ಟ್ರದಿಂದ ಮುಂಬೈಯನ್ನು ಬೇರ್ಪಡಿಸುವ ಕನಸು ಕಾಣುತ್ತಿರುವವರನ್ನು ರಾಜಕೀಯವಾಗಿ ನಿರ್ಮೂಲನೆ ಮಾಡುವವರೆಗೂ ನಾವು ವಿಶ್ರಮಿಸುವುದಿಲ್ಲ. ಮುಂದಿನ ಮುಂಬೈ ಮೇಯರ್ ಮರಾಠಿಗರೇ ಆಗಲಿದ್ದು, ಅವರು ನಮ್ಮ ಮೈತ್ರಿಕೂಟದಿಂದಲೇ ಆರಿಸಿ ಬರಲಿದ್ದಾರೆ.
ರಾಜ್ ಠಾಕ್ರೆ, ಎಂಎನ್‌ಎಸ್ ನಾಯಕ
ಮರಾಠಿಗರು ಚುನಾವಣೆಯಲ್ಲಿ ತಪ್ಪು ಮಾಡಿದರೆ ಮುಂದೆ ಪಶ್ಚಾತ್ತಾಪ ಪಡಲಿದ್ದೀರಿ. ಈಗ ಒಡೆದು ಹಂಚಿಹೋದರೆ ಸಂಪೂರ್ಣವಾಗಿ ನಿರ್ನಾಮ ಆಗಲಿದ್ದೀರಿ. ಮರಾಠಿಗರು ಯಾವತ್ತಿಗೂ ಇನ್ನೊಬ್ಬರ ದಾರಿ ಅನುಸರಿಸಲ್ಲ, ಬೇರೆ ಯಾರಾದರೂ ದಾರಿಗೆ ಅಡ್ಡಬಂದರೆ ಸುಮ್ಮನೆ ಇರುವುದಿಲ್ಲ.
ಉದ್ಧವ್ ಠಾಕ್ರೆ, ಶಿವಸೇನೆ ನಾಯಕ
ಠಾಕ್ರೆ ಸೋದರರು ಒಂದಾಗುತ್ತಿರುವುದಕ್ಕೆ ಖುಷಿ ಇದೆ. ಅವರಿಬ್ಬರೂ ತಮ್ಮ ರಾಜಕೀಯ ಅಸ್ತಿತ್ವ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ಇದು ಆತಂಕದಿಂದ ಸೃಷ್ಟಿಯಾದ ಮೈತ್ರಿಯೇ ಹೊರತು ಪ್ರೀತಿಯಿಂದಲ್ಲ. ಈ ಸುದ್ದಿಗೆ, ರಷ್ಯಾ-ಉಕ್ರೇನ್ ಯುದ್ಧ ನಿಂತು, ಪುಟಿನ್ ಮತ್ತು ಜೆಲೆನ್ಸ್ಕಿ ಒಂದಾದಷ್ಟು ಮಹತ್ವ ಕೊಡಲಾಗುತ್ತಿದೆ.
ದೇವೇಂದ್ರ ಫಡ್ನವೀಸ್, ಮಹಾ ಸಿಎಂ