;Resize=(412,232))
ಮೈಸೂರು : ‘2028ರವರೆಗೂ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಹೈಕಮಾಂಡ್ ಬಿಟ್ಟು ಬೇರೆ ಯಾರ ಕೈಯಲ್ಲೂ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಸಾಧ್ಯವಿಲ್ಲ. ಹೈಕಮಾಂಡ್ ಮಾತ್ರ ಆ ತೀರ್ಮಾನ ಮಾಡಬಹುದು’ ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿದ್ದಾರೆ. ಅವರು ಕುರ್ಚಿಯಲ್ಲಿ ಭದ್ರವಾಗಿದ್ದಾರೆ. ಸಿದ್ದರಾಮಯ್ಯ ಅವರೇ ಅದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು ತೀರ್ಮಾನ ಏನಿದ್ದರೂ ಹೈಕಮಾಂಡ್‌ನದ್ದು. ಮತ್ತೆ, ಮತ್ತೆ ಯಾಕೆ ಆ ಮಾತು? ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿ ಪ್ರವಾಸದಲ್ಲಿದ್ದಾರೆ. ತಮ್ಮ ಇಲಾಖೆಯ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ. ಅವರು ಹೈಕಮಾಂಡ್ ಭೇಟಿಯಾಗಿಲ್ಲ. ಸಿಎಂ ಬದಲಾವಣೆ ವಿಷಯದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಸಿದ್ದರಾಮಯ್ಯ ಈಗ ಸಿಎಂ ಕುರ್ಚಿ ಮೇಲೆ ಕೂತಿದ್ದಾರೆ. 2028ರವರೆಗೂ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ, ಇದು ನನ್ನ ಅಭಿಪ್ರಾಯ ಎಂದರು.
ಅಂತಿಮವಾಗಿ ನಮ್ಮದು ಹೈಕಮಾಂಡ್ ಪಕ್ಷ. ಸಿಎಂ ಬದಲಾವಣೆ ಮಾಡಬೇಕಿರುವುದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತ್ರ. ಸದ್ಯ ಸಿಎಂ ಬದಲಾವಣೆಯಂತಹ ಸನ್ನಿವೇಶಗಳು ಇಲ್ಲ ಎಂದರು.
ಆಪ್ತ ಸಹಾಯಕ ಸರ್ಫರಾಜ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಸರ್ಫರಾಜ್, ಅವರ ತಂದೆ ಕಾಲದಿಂದಲೂ ಶ್ರೀಮಂತರು. ಯಾಕೆ ದಾಳಿ ಆಗಿದೆ ಎಂಬುದು ಗೊತ್ತಿಲ್ಲ. ಏನಾಗುತ್ತೆ ಅನ್ನೋದನ್ನು ನೋಡೋಣ.
- ಜಮೀರ್ ಅಹಮದ್, ವಕ್ಫ್ ಸಚಿವ
ಮೈಸೂರು: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಜ.25ರಂದು ನಗರದ ವಸ್ತುಪ್ರದರ್ಶನ ಆವರಣದಲ್ಲಿ ಬೃಹತ್ ಅಹಿಂದ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಹಾಗೂ ಅಹಿಂದ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.