ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳು ವಿಧಾನಸೌಧದ ಪಶ್ಚಿಮ ದ್ವಾರದ ಪೋರ್ಟಿಕೋ ಅಥವಾ ಕೆಂಗಲ್‌ ದ್ವಾರದ ಬಳಿ ಮಾತ್ರ ಗಣ್ಯ ವ್ಯಕ್ತಿಗಳ ಸಂದರ್ಶನ ಮಾಡುವಂತೆ ಮಾಧ್ಯಮಗಳಿಗೆ ನಿರ್ದೇಶಿಸಬೇಕು ಎಂದು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ (ಡಿಪಿಎಆರ್‌)ಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸೂಚನೆ ನೀಡಿದೆ

- ಎಲ್ಲೆಂದರಲ್ಲಿ ಬೈಟ್‌, ಹೇಳಿಕೆಗಳ ಪಡೆಯುವಂತಿಲ್ಲ- ಪಶ್ಚಿಮ ದ್ವಾರದಲ್ಲೇ ಹೇಳಿಕೆ ಪಡೆಯಿರಿ: ಸೂಚನೆಪ್ರಜಾಪ್ರಭುತ್ವ ವಿರೋಧಿವಿಧಾನಸೌಧದ ಒಳಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಖಂಡನೀಯ. ರಾಜ್ಯ ಕಾಂಗ್ರೆಸ್‌ ಸರ್ಕಾರ ನಾಲಾಯಕ್‌ ಎಂದು ಜನ ಮಾತನಾಡುತ್ತಿದ್ದಾರೆ. ಇದಕ್ಕೆ ಪುಷ್ಟಿ ಕೊಡುವಂತೆ ಈಗ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವದ ವಿರೋಧಿ ನಡೆ.- ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

--

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳು ವಿಧಾನಸೌಧದ ಪಶ್ಚಿಮ ದ್ವಾರದ ಪೋರ್ಟಿಕೋ ಅಥವಾ ಕೆಂಗಲ್‌ ದ್ವಾರದ ಬಳಿ ಮಾತ್ರ ಗಣ್ಯ ವ್ಯಕ್ತಿಗಳ ಸಂದರ್ಶನ ಮಾಡುವಂತೆ ಮಾಧ್ಯಮಗಳಿಗೆ ನಿರ್ದೇಶಿಸಬೇಕು ಎಂದು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ (ಡಿಪಿಎಆರ್‌)ಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸೂಚನೆ ನೀಡಿದೆ.

ವಿಧಾನಸೌಧದ ಪಶ್ಚಿಮ ದ್ವಾರದ ಪೋರ್ಟಿಕೋ ಬಳಿ ಮಾಧ್ಯಮಗಳಿಗೆ ಗಣ್ಯರ ಬೈಟ್‌ ಅಥವಾ ಸಂದರ್ಶನ ಪಡೆಯಲು ಸ್ಥಳ ನಿಗದಿ ಮಾಡಲಾಗಿದೆ. ಆದಾಗ್ಯೂ ಮಾಧ್ಯಮ ಜನಪ್ರತಿನಿಧಿಗಳು/ ಗಣ್ಯ ವ್ಯಕ್ತಿಗಳು ವಿಧಾನಸೌಧ ಪ್ರವೇಶಿಸುವಾಗ ಮಾಧ್ಯಮ ಪ್ರತಿನಿಧಿಗಳು ಬೈಟ್‌ ಅಥವಾ ಹೇಳಿಕೆಗಳನ್ನು ಪಡೆಯಲು ಹಿಂಬಾಲಿಸುತ್ತಿದ್ದಾರೆ. ಇದರಿಂದ ಗಣ್ಯ ವ್ಯಕ್ತಿಗಳ ಭದ್ರತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಜತೆಗೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶಿಫಾರಸು ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ಗುರುತಿನ ಚೀಟಿ ವಿತರಿಸುತ್ತಿದ್ದಾರೆ. ಈ ಗುರುತಿನಚೀಟಿ ಹೊಂದಿರುವ ಮಾಧ್ಯಮ ಪ್ರತಿನಿಧಿಗಳು ಕೂಡ ಭದ್ರತಾ ಹಿತದೃಷ್ಟಿಯಿಂದ ವಿಧಾನಸೌಧ ಪಶ್ಚಿಮ ದ್ವಾರದ ಪೋರ್ಟಿಕೋ ಬಳಿ ನಿಗದಿಪಡಿಸಿದ ಸ್ಥಳದಲ್ಲೇ ಗಣ್ಯರ ಹೇಳಿಕೆಗಳನ್ನು ಪಡೆಯಬೇಕು ಎಂದು ತಿಳಿಸುವಂತೆ ಡಿಪಿಎಆರ್‌ ತನ್ನ ಪತ್ರದಲ್ಲಿ ಹೇಳಿದೆ.

ತೀವ್ರ ಆಕ್ಷೇಪ:

ಸರ್ಕಾರದ ಈ ನಡೆಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು, ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವುದು ತಪ್ಪು. ಮಾಧ್ಯಮಗಳ ಮೂಲಕ ನಮ್ಮ ಅನಿಸಿಕೆಯನ್ನು ಜನರಿಗೆ ತಲುಪಿಸುತ್ತೇವೆ. ಮಾಧ್ಯಮಗಳು ಜನರಿಗೆ ಸರ್ಕಾರದ ಮತ್ತು ನಮ್ಮ‌ ಅಹವಾಲುಗಳನ್ನು ತಲುಪಿಸುವ ಕೆಲಸ ಮಾಡುತ್ತಿವೆ. ಹಾಗಾಗಿ, ಮಾಧ್ಯಮಗಳಿಗೆ ಸ್ವಾತಂತ್ರ್ಯ ಇರಬೇಕು. ಇದೇ ನಮ್ಮ ಧ್ಯೇಯ, ಹತ್ತಿಕ್ಕಬಾರದು ಎಂದು ಒತ್ತಾಯಿಸಿದ್ದಾರೆ.

--