;Resize=(412,232))
ಬೆಂಗಳೂರು : ಪ್ರಗತಿಪರ ಭಾರತ ನಿರ್ಮಿಸಲು, ಜಲ ನಿರ್ವಹಣೆಯಲ್ಲಿ ಸಹಕಾರ ನೀಡಲು ಕರ್ನಾಟಕ ಬದ್ಧವಾಗಿದೆ. ಜಲ ನಿರ್ವಹಣೆ ವಿಚಾರದಲ್ಲಿ ರಾಜಕೀಯ ಇರಬಾರದು, ಕೇವಲ ಸುರಕ್ಷತಾ ಮಾನದಂಡಗಳಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ರಾಜ್ಯ ಜಲಸಂಪನ್ಮೂಲ ಇಲಾಖೆ ಜಂಟಿಯಾಗಿ ಐಐಎಸ್ಸಿಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಆಯೋಜಿಸಲಾಗಿರುವ 2 ದಿನಗಳ ಅಣೆಕಟ್ಟು ಸುರಕ್ಷತೆ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಭಾರತದಲ್ಲೇ ಕರ್ನಾಟಕ ರಾಜ್ಯ ಅತಿಹೆಚ್ಚು ಅಣೆಕಟ್ಟುಗಳನ್ನು ಹೊಂದಿದೆ. ಹೀಗಾಗಿ ಅಣೆಕಟ್ಟುಗಳ ಸುರಕ್ಷತೆಯ ಅನುಭವ ಮತ್ತು ಜವಾಬ್ದಾರಿ ಕರ್ನಾಟಕಕ್ಕೆ ಹೆಚ್ಚಿದೆ. ದೇಶದಲ್ಲಿ 6,628 ಅಣೆಕಟ್ಟುಗಳಿದ್ದು, ಕರ್ನಾಟಕದಲ್ಲೇ 231 ಅಣೆಕಟ್ಟುಗಳಿವೆ. ಈ ಸಮ್ಮೇಳನದಲ್ಲಿ ಅಣೆಕಟ್ಟು ಸುರಕ್ಷತೆ ಮತ್ತು ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣೆಯ ಜವಾಬ್ದಾರಿ ಕುರಿತು ಚರ್ಚೆಯಾಗಲಿದೆ. ಇದು ರಾಜ್ಯದ ಅಣೆಕಟ್ಟುಗಳನ್ನು ಮತ್ತಷ್ಟು ಸದೃಢವಾಗಿಸಲು ಮತ್ತು ಮುನ್ನೆಚ್ಚರಿಕೆವಹಿಸಲು ಸಹಕಾರಿಯಾಗಲಿದೆ ಎಂದರು.
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು ಎಂದಿದ್ದರು. ನೆಹರು ಹೇಳಿದಂತೆ ಕೃಷಿ, ವಿದ್ಯುತ್, ಕೈಗಾರಿಕಾ ಅಭಿವೃದ್ಧಿಗೆ ಅಣೆಕಟ್ಟುಗಳು ಜೀವಾಳ. ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸು ಅವರ ದೂರದೃಷ್ಟಿ ಕಾರ್ಯಗಳು ರಾಜ್ಯವನ್ನು ಸಾಮಾಜಿಕ, ಆರ್ಥಿಕ ವಾಗಿ ಸದೃಢವಾಗುವಂತೆ ಮಾಡಿದೆ. ಕರ್ನಾಟಕದಲ್ಲಿನ ಜಲವಿದ್ಯುತ್ ಉತ್ಪಾದನಾ ಅಣೆಕಟ್ಟುಗಳು 4,800 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿವೆ. ಅದರ ಜತೆಗೆ ಕೃಷಿ ಭೂಮಿಗೆ ನೀರಾವರಿ ಒದಗಿಸುತ್ತಾ, ನಗರ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸುತ್ತಿವೆ ಎಂದರು.
ರಾಜ್ಯದಲ್ಲಿನ ಶೇ.70ರಷ್ಟು ಅಣೆಕಟ್ಟುಗಳು 25 ವರ್ಷ ಮೇಲ್ಪಟ್ಟವಾಗಿವೆ. ಅವುಗಳ ವ್ಯವಸ್ಥಿತ ಸುರಕ್ಷತಾ ಮೌಲ್ಯಮಾಪನ, ಆಧುನೀಕರಣ ಮತ್ತು ಅಪಾಯ ಮುನ್ಸೂಚನೆ ಪತ್ತೆಯಂಥ ಅಂಶಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ. ಹವಾಮಾನ ವೈಪರಿತ್ಯ, ಜಲಾಶಯಗಳಲ್ಲಿ ಹೂಳು ಶೇಖರಣೆ, ಹಳೇ ಜಲಾಶಯಗಳ ಮೇಲಿನ ಒತ್ತಡ ಅಪಾಯಗಳನ್ನು ಸೃಷ್ಟಿಸುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಜಲಶಕ್ತಿ ಡಾಟಾ ಮ್ಯಾನೇಜ್‌ಮೆಂಟ್ ವ್ಯವಸ್ಥೆ, ರಿವರ್ ಬೇಸಿನ್ ಪ್ಲ್ಯಾನ್ ವರದಿ, ಚಾಟ್‌ಬೂಟ್ ವ್ಯವಸ್ಥೆ ಅನಾವರಣಗೊಳಿಸಲಾಯಿತು.
ಅಣೆಕಟ್ಟು ಸುರಕ್ಷತೆ ಕುರಿತು 2 ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ದೇಶ ಮತ್ತು ವಿದೇಶದ 700ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಸಮ್ಮೇಳನದಲ್ಲಿ ಅಣೆಕಟ್ಟು ಸುರಕ್ಷತೆ ಕುರಿತು 46 ಸಂಶೋಧನಾ ವರದಿಗಳನ್ನು ಮಂಡಿಸಲಾಗುತ್ತಿದೆ. 10 ದೇಶಗಳ 25ಕ್ಕೂ ಹೆಚ್ಚಿನ ಅಂತಾರಾಷ್ಟ್ರೀಯ ತಜ್ಞರು ಭಾಗವಹಿಸಿದ್ದು, ತಾಂತ್ರಿಕ ವಿಚಾರ ಸಂಕಿರಣಗಳನ್ನು ನಡೆಸಿಕೊಡಲಿದ್ದಾರೆ. ಅಣೆಕಟ್ಟು ಸುರಕ್ಷತೆ ಬಗ್ಗೆ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.
ಅಣೆಕಟ್ಟುಗಳು ಪ್ರಸ್ತುತ ರಾಷ್ಟ್ರೀಯ ಭದ್ರತೆಯ ಅನಿವಾರ್ಯ ವಿಷಯವಾಗಿದೆ. ಅಣೆಕಟ್ಟು ಸುರಕ್ಷತೆ ಒಂದು ಇಲಾಖೆಯ ಜವಾಬ್ದಾರಿಯಲ್ಲ. ಅದು ರಾಷ್ಟ್ರೀಯ ಕರ್ತವ್ಯವಾಗಿದ್ದು, ಎಲ್ಲ ಇಲಾಖೆಗಳು ಸಂಘಟಿತವಾಗಿ ಕೆಲಸ ಮಾಡಬೇಕು. ಭಾರತದ ಪ್ರಗತಿಯಲ್ಲಿ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡುತ್ತಾ ಜಲ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ಕರ್ನಾಟಕ ಬದ್ಧವಾಗಿದೆ. ನೀರು ರಾಜಕೀಯ ವಿಷಯವಾಗದೇ, ಸುರಕ್ಷತಾ, ಅಭಿವೃದ್ಧಿಯ ಮಾನದಂಡವಾಗಬೇಕು ಎಂದರು.
ಕೇಂದ್ರ ಜಲಶಕ್ತಿ ರಾಜ್ಯ ಖಾತೆ ಸಚಿವ ರಾಜ್‌ಭೂಷಣ್ ಚೌಧರಿ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ವಿಶ್ವ ಬ್ಯಾಂಕ್ ಉಪಾಧ್ಯಕ್ಷ ಜೊಹಾನೆಸ್ ಕಾರ್ನೆಲ್ಸ್ ಮಾರಿಯಾ ಜಟ್, ಕೇಂದ್ರ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಸುಭೋದ್ ಯಾದವ್, ಕೇಂದ್ರ ಜಲ ಆಯೋಗದ ಮುಖ್ಯಸ್ಥ ಅನುಪಮ್ ಪ್ರಸಾದ್, ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಜಪಾನ್‌ನ ಐಸಿಎಚ್‌ಎಂಆರ್‌ಎಂನ ಕಾರ್ಯನಿರ್ವಹಾಕ ನಿರ್ದೇಶಕ ಪ್ರೊ. ತೊಶಿಯೋ ಕೊಯ್ಕೆ, ಬೃಹತ್ ಅಣೆಕಟ್ಟು ಅಂತಾರಾಷ್ಟ್ರೀಯ ಆಯೋಗದ ಅಧ್ಯಕ್ಷ ಡಿ.ಕೆ. ಶರ್ಮಾ ಇತರರಿದ್ದರು.