ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಮನೆ ಬಾಗಿಲಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ(ಪಿಆರ್‌ಸಿ) ವಿತರಣೆಗೆ ಚಾಲನೆ ನೀಡಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ರಾಜ್ಯ ಸರ್ಕಾರ ಇದನ್ನು ಆಡಳಿತ ಸುಧಾರಣೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ನೀಡುತ್ತಿರುವ ಪಿಆರ್‌ಸಿ ಸಂವಿಧಾನ ಮತ್ತು ಕಾನೂನುಬಾಹಿರ ಕ್ರಮ ಎಂಬುದನ್ನು ರಾಜ್ಯದ ಜನತೆ ಅರಿಯಬೇಕು. ಇಷ್ಟಕ್ಕೂ ಈ ಪಿಆರ್‌ಸಿ ಪ್ರಮಾಣಪತ್ರ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದು ಯಾರು? ಭಾರತದ ಸಂವಿಧಾನ ಪ್ರಕಾರ ಪೌರತ್ವ, ವಿದೇಶಿಯರ ಗುರುತಿಸುವಿಕೆ ಹಾಗೂ ವಲಸೆ ಸಂಬಂಧಿತ ವಿಷಯಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿವೆ. ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನ ಅಧಿಕಾರದ ಮಿತಿ ಮೀರಿ ನಡೆದುಕೊಳ್ಳುತ್ತಿರುವುದು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಎಂದು ಆರೋಪಿಸಿದ್ದಾರೆ.
ರಾಷ್ಟ್ರೀಯ ಭದ್ರತೆಗೆ ಧಕ್ಕೆ:
ದೇಶಾದ್ಯಂತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಪ್ರಮಾಣಪತ್ರಗಳನ್ನು ಮನೆ ಮನೆಗೆ ವಿತರಿಸುವ ಆತುರ ಏಕೆ? ಇದರ ಹಿಂದೆ ಇರುವ ಉದ್ದೇಶವೇನು? ಅಕ್ರಮ ವಲಸಿಗರು ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ವ್ಯವಸ್ಥೆ ದುರುಪಯೋಗಪಡಿಸಿಕೊಳ್ಳಲು ಈ ಸರ್ಕಾರ ಬಾಗಿಲು ತೆರೆಯುತ್ತಿದೆಯೇ ಎಂಬ ಅನುಮಾನಗಳು ಸಹಜವಾಗಿ ಮೂಡುತ್ತಿವೆ. ರಾಷ್ಟ್ರೀಯ ಭದ್ರತೆ ಮತ್ತು ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ವೋಟ್ ಬ್ಯಾಂಕ್‌ಗಾಗಿ ಭವಿಷ್ಯ ಪಣಕ್ಕೆ:
ಕಂದಾಯ ಇಲಾಖೆ ಮೂಲಕ ಈ ಪ್ರಮಾಣಪತ್ರ ವಿತರಣೆಗೆ ಮುಂದಾಗಿರುವುದು ಭ್ರಷ್ಟಾಚಾರ, ನಕಲಿ ದಾಖಲೆಗಳ ಸೃಷ್ಟಿ ಹಾಗೂ ಅಧಿಕಾರ ದುರುಪಯೋಗಕ್ಕೆ ಅವಕಾಶ ಕಲ್ಪಿಸುವ ಅಪಾಯಕಾರಿ ನಿರ್ಧಾರ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ರಾಜ್ಯದ ಭವಿಷ್ಯ ಪಣಕ್ಕಿಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳೀಯ ಕನ್ನಡಿಗರ ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳ ಮೇಲೆ ಪರಿಣಾಮ ಬೀರುವ ಯಾವುದೇ ಕ್ರಮ ನಾವು ಒಪ್ಪುವುದಿಲ್ಲ. ಆಡಳಿತದ ಹೆಸರಿನಲ್ಲಿ ಸಂವಿಧಾನ ಉಲ್ಲಂಘಿಸಲು ಯಾರಿಗೂ ಅಧಿಕಾರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಆರ್‌ಸಿ ವಿರುದ್ಧ ಕಾನೂನಾತ್ಮಕ ಹೋರಾಟ:
ಈ ಸಂವಿಧಾನಬಾಹಿರ ಪಿಆರ್‌ಸಿ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ತಕ್ಷಣವೇ ಸ್ಥಗಿತಗೊಳಿಸಿ, ಸರ್ಕಾರ ಹೊರಡಿಸಿರುವ ಪ್ರಸ್ತಾವನೆ ಹಿಂಪಡೆಯಬೇಕು. ಸಂವಿಧಾನದ ಆಶಯಗಳು, ಕನ್ನಡಿಗರ ಹಕ್ಕುಗಳು ಮತ್ತು ದೇಶದ ಆಂತರಿಕ ಭದ್ರತೆ ವಿಚಾರದಲ್ಲಿ ಬಿಜೆಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಈ ಸಂವಿಧಾನ ಬಾಹಿರ ನಡೆ ವಿರುದ್ಧ ನಾವು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಹೋರಾಡುತ್ತೇವೆ. ರಾಷ್ಟ್ರೀಯ ಭದ್ರತೆಗೆ ಮಾರಕವಾಗಿರುವ ಇದರ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಜನಾಂದೋಲನ ಕಟ್ಟುತ್ತೇವೆ ಎಂದು ಅಶೋಕ್ ಅವರು ಸಾಮಾಜಿಕ ಜಾಲತಾಣ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
