ಮಡಿಕೇರಿ: ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡುವುದರ ಬದಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿರೋಧ ಪಕ್ಷದ ಶಾಸಕ ಆರ್. ಅಶೋಕ್ ರ ಬ್ರೈನ್ ಮ್ಯಾಪಿಂಗ್ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಅಡ್ಡ ಮತದಾನ ಮಾಡಿರುವುದಕ್ಕೆ ವಿಜಯೇಂದ್ರ ಮತ್ತು ಅಶೋಕ್ ನೇರ ಕಾರಣ ಎಂದು ಅಭಿಪ್ರಾಯಪಟ್ಟರು.ಅವರಿಬ್ಬರಿಗೆ ಅಡ್ಡ ಮತದಾನ ನಡೆಯುವ ಬಗ್ಗೆ ಎಲ್ಲವೂ ಗೊತ್ತಿತ್ತು. ಹಲವು ಎಂಎಲ್ಎಗಳು ಹೊಟೇಲ್‌ನಲ್ಲಿ ಸಭೆ ಮಾಡಿರುವ ವಿಚಾರ ಮಾಜಿ ಸಿಎಂ ಸದಾನಂದಗೌಡ ಅವರಿಗೆ ಗೊತ್ತಾಗಿ, ವಿಜಯೇಂದ್ರ, ಅಶೋಕ್ ಅವರಿಗೆ ವಿಚಾರ ತಿಳಿಸಲು ಗೌಡರು ಕರೆಮಾಡಿದರೂ ಅಶೋಕ್‌, ವಿಜಯೇಂದ್ರ ಕರೆ ಸ್ವೀಕರಿಸಿಲಿಲ್ಲ ಎಂದು ಮಾಜಿ ಸಿಎಂ ಸದಾನಂದ ಗೌಡ ಹೇಳಿದ್ದಾರೆ. ಇದರ ಅರ್ಥ ಕ್ರಾಸ್ ಓಟಿಂಗ್ ವಿಷಯ ಇವರಿಗೆ ಗೊತ್ತಿತ್ತು. ಆದರೆ ಈಗ ವಿಜಯೇಂದ್ರ, ಸಿ ಟಿ ರವಿ ಮತ್ತು ಆರ್ ಅಶೋಕ್ ಸುಮ್ಮನೆ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಲಕ್ಷ್ಮಣ್‌ ಹೇಳಿದರು.

ಆಪರೇಷನ್ ಮಾಡಿಲ್ಲ: ನಮಗೆ 138 ಜತೆಗೆ 3 ಸೇರಿ 142 ಶಾಸಕರು ಇದ್ದಾರೆ. ನಾವು ಸುಲಭವಾಗಿ ನಾಲ್ಕು ಸ್ಥಾನ ಗೆಲ್ಲುತ್ತಿದ್ದೆವು. ಹೀಗಾಗಿ ನಾವು ಯಾರಿಗೂ ಹಣ ಕೊಟ್ಟಿಲ್ಲ. ಡಿ.ಕೆ. ಶಿವಕುಮಾರ್ ಅವರನ್ನು ಒಪ್ಪಿಕೊಂಡು 13 ಶಾಸಕರು ನಮಗೆ ಓಟ್ ಹಾಕಿದ್ದಾರೆ‌. ವಿಜಯೇಂದ್ರ, ಆರ್. ಅಶೋಕ್ ಇವರಿಬ್ಬರಿಗೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಎಂದು ದೂರಿದರು. ಕ್ರಾಸ್ ಓಟಿಂಗ್, ಆಪರೇಷನ್ ಕಮಲ ಇವೆಲ್ಲದರ ಬೀಜ ಬಿತ್ತಿದ್ದೇ ಬಿಜೆಪಿಯವರು. ಎಂಪಿಗಳನ್ನೂ ಬಿಡದೆ ಇವರು ಆಪರೇಷನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.