ಬ್ರಾಹ್ಮಣ ಸಮುದಾಯಕ್ಕೆ ಸೌಲಭ್ಯ ನೀಡಲು ಬದ್ಧ : ಸಚಿವ ದಿನೇಶ್‌ ಗುಂಡೂರಾವ್‌

KannadaprabhaNewsNetwork |  
Published : Nov 08, 2025, 04:00 AM IST
Babburkamme Seva Samithi

ಸಾರಾಂಶ

ಬ್ರಾಹ್ಮಣ ಸಮುದಾಯ ಮುಂದುವರಿದಿದೆ ಎಂಬ ಪೂರ್ವಾಗ್ರಹದಿಂದಾಗಿ ಸರ್ಕಾರಗಳಿಂದ ಆ ಸಮುದಾಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಅನುದಾನ, ಸೌಲಭ್ಯಗಳು ಸಿಕ್ಕಿಲ್ಲ. ನಮ್ಮ ಸರ್ಕಾರದಲ್ಲಿ ಈ ರೀತಿಯ ಅನ್ಯಾಯ ಆಗದಂತೆ ನೋಡಿಕೊಳ್ಳಲು ಬದ್ಧ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

 ಬೆಂಗಳೂರು :  ಬ್ರಾಹ್ಮಣ ಸಮುದಾಯ ಮುಂದುವರಿದಿದೆ ಎಂಬ ಪೂರ್ವಾಗ್ರಹದಿಂದಾಗಿ ಸರ್ಕಾರಗಳಿಂದ ಆ ಸಮುದಾಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಅನುದಾನ, ಸೌಲಭ್ಯಗಳು ಸಿಕ್ಕಿಲ್ಲ. ನಮ್ಮ ಸರ್ಕಾರದಲ್ಲಿ ಈ ರೀತಿಯ ಅನ್ಯಾಯ ಆಗದಂತೆ ನೋಡಿಕೊಳ್ಳಲು ಬದ್ಧ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ನಗರದ ಬಬ್ಬೂರುಕಮ್ಮೆ ಸೇವಾ ಸಮಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಆಚಾರ್ಯತ್ರಯರ ಜಯಂತ್ಯುತ್ಸವ’ ಸಮಾರಂಭದಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯಕ್ಕೆ ಅತ್ಯಂತ ಪ್ರಭಾವಿ ಹಾಗೂ ಮುಂದುವರಿದ ಸಮಾಜ ಎಂಬ ಹಣೆಪಟ್ಟಿ ಇದ್ದರೂ ಅಲ್ಲಿಯೂ ಬಡವರಿದ್ದಾರೆ, ಕಷ್ಟದಿಂದ ಹೊರಬಂದು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವವರು ಸಾಕಷ್ಟು ಮಂದಿ ಇದ್ದಾರೆ. ಹತ್ತಾರು ಸಮಸ್ಯೆಗಳಿವೆ. ಆದರೆ, ಬ್ರಾಹ್ಮಣರು ಎಂದರೆ ಅವರಲ್ಲಿ ಬಡವರೇ ಇಲ್ಲ, ಅವರಿಗೆ ಸಮಸ್ಯೆಗಳೇ ಇಲ್ಲವೇನೊ ಎನ್ನುವಂತಹ ಪೂರ್ವಾಗ್ರಹ ಬೆಳೆದುಬಂದಿದೆ. ಇದರಿಂದ ಅವರು ಎಲ್ಲ ಸರ್ಕಾರಗಳ ಅವಧಿಯಲ್ಲೂ ಸೂಕ್ತ ಅನುದಾನ, ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ ಎಂದರು.

1 ಲಕ್ಷ ನೆರವು ಯೋಜನೆ:

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಅವರು, ಬ್ರಾಹ್ಮಣ ಯುವಕ-ಯುವತಿಯರಿಗೆ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರನ್ನು ಪ್ರೋತ್ಸಾಹಿಸಲು ಗರಿಷ್ಠ 1 ಲಕ್ಷ ರು. ಸಹಾಯಧನ ನೀಡುವ ‘ಚಾಣಕ್ಯ ಆಡಳಿತ ತರಬೇತಿ ಯೋಜನೆ’ಗೆ ಇದೇ ವೇಳೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಯುವಕರು ರಾಷ್ಟ್ರದ ಶಕ್ತಿ, ಅವರ ಕೈ ಖಾಲಿ ಇರಬಾರದು. ಆದರೆ, ಈ 21ನೇ ಶತಮಾನದಲ್ಲೂ ಬಹಳಷ್ಟು ಯುವಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಅಂತಹವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೆರವಾಗುವ ಮೂಲಕ ಅಗತ್ಯ ಸಲಹೆ ಮತ್ತು ಸಹಕಾರ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮುದಾಯದ ಉದ್ಯಮಶೀಲತೆ ವೃದ್ಧಿಸುವ ಉದ್ದೇಶದಿಂದ ವಿಪ್ರ ಸ್ವ-ಸಹಾಯ ನೇರ ಸಾಲ ಯೋಜನೆ ಪ್ರಾರಂಭಿಸುವ ಮೂಲಕ ಸಾಂಕೇತಿಕವಾಗಿ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಈ ವೇಳೆ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್, ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಶೇಲ್ವಪಿಳ್ಳೈ ಅಯ್ಯಂಗಾರ್‌ ಮತ್ತಿತರರು ಉಪಸ್ಥಿತರಿದ್ದರು.

12 ಮಂದಿ ಸಾಧಕರಿಗೆ ಸನ್ಮಾನ: 

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮುದಾಯದ ಬಿ.ವಿ. ಆಚಾರ್ಯ (ನ್ಯಾಯಾಂಗ), ಡಾ. ಎನ್. ಅನಂತರಾಮನ್ (ಆಯುರ್ವೇದ), ಡಾ. ಶ್ರೀನಾಥ (ವೈದ್ಯಕೀಯ), ಆರ್. ವಿ. ಜಾಗೀರ್ ದಾರ್ (ವೇದ ಸಾಹಿತ್ಯ), ಕ್ಯಾಪ್ಟನ್ ಗೋಪಿನಾಥ್ (ವಾಯುಯಾನದ ಉದ್ಯಮ), ವಿದ್ವಾನ್ ಬಿ.ಕೆ. ಅನಂತರಾವ್ (ಸಂಗೀತ), ರಘುತ್ತೋಮ್ ಕೊಪ್ಪರ್ (ಪತ್ರಿಕೋದ್ಯಮ), ಗಂಗಮ್ಮ ಕೇಶವಮೂರ್ತಿ (ಗಮಕ), ತ್ರಿವೇಣಿ ಬಾಯಿ ಎನ್. ಆಶ್ರೀತ್ ( ದಾಸ ಸಾಹಿತ್ಯ), ಜಿ.ಎನ್. ನರಸಿಂಹಮೂರ್ತಿನಾರಾಯಣ (ಗಣಕ ವಿಜ್ಞಾನಿ), ರಾಘವ ವಿಷ್ಣು ಬಾಳೇರಿ (ಸಹಕಾರ), ಬಿ.ಎಸ್. ಜಯಪ್ರಕಾಶ್ ನಾರಾಯಣ್ (ಅನುವಾದ) ಅವರನ್ನು ಸನ್ಮಾನಿಸಲಾಯಿತು.

PREV
Read more Articles on

Recommended Stories

ರಾಜ್ಯದಲ್ಲಿ ಪಂಚ ಗ್ಯಾರಂಟಿ ನೆಪದಲ್ಲಿ ಕಾಂಗ್ರೆಸ್‌ ತೆರಿಗೆ ಭಯೋತ್ಪಾದನೆ: ಜೆಡಿಎಸ್‌ ಆರೋಪ
ಮೋದಿಗಾಗಿ ಏಪೋರ್ಟ್‌ನಲ್ಲೇ ನನ್ನನ್ನು ನಿಲ್ಲಿಸಿದ ಸಿಬ್ಬಂದಿ : ಖರ್ಗೆ ಗರಂ