ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿಗಳನ್ನು ನೀಡಿದ ನೆಪದಲ್ಲಿ ರಾಜ್ಯದಲ್ಲಿ ತೆರಿಗೆ ಭಯೋತ್ಪಾದನೆ ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೆರಿಗೆ ಭಯೋತ್ಪಾದಕ ಸರ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ರಾಜ್ಯ ಸರ್ಕಾರದ ಭೂತದಹಿಸಿ ಕಿಡಿಕಾರಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ರಾಜ್ಯದಲ್ಲಿ ಸುಳ್ಳು ಮತ್ತು ಅಭಿವೃದ್ಧಿ ಮಾರಕ ಪಂಚ ಗ್ಯಾರಂಟಿಗಳ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಜನ ವಿರೋಧಿ ಕೃತ್ಯಗಳಲ್ಲಿ ನಿರಂತರವಾಗಿ ತೊಡಗಿದೆ. ಗ್ಯಾರಂಟಿಗಳಿಗೆ ವಾರ್ಷಿಕ ಕೇವಲ 52 ಸಾವಿರ ಕೋಟಿ ರು. ಅನುದಾನ ನೀಡುತ್ತಿದ್ದರೂ4.09 ಲಕ್ಷ ಕೋಟಿ ರು. ಮೊತ್ತದ ಆಯವ್ಯಯದ ಹಣವೆಲ್ಲವೂ ಗ್ಯಾರಂಟಿಗಳಿಗೆ ಹೋಗುತ್ತಿದೆ ಎಂದು ಜನರನ್ನು ನಂಬಿಸಿ ಮೋಸ ಮಾಡುತ್ತಿದೆ. ಗ್ಯಾರಂಟಿಗಳ ನೆಪದಲ್ಲಿ ಅಭಿವೃದ್ಧಿಗೆ ತಿಲಾಂಜಲಿ ಇಟ್ಟು ದರ ಏರಿಕೆ, ಬೆಲೆ ಹೆಚ್ಚಳದ ಮೂಲಕ ಲಕ್ಷಾಂತರ ಕೋಟಿ ರು. ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪಿಸಿದರು.
ಗ್ರೇಟರ್ ಬೆಂಗಳೂರು ನಗರವನ್ನು ದುಡ್ಡು ಕೊಳ್ಳೆ ಹೊಡೆಯಲು ಎಟಿಎಂ ಮಾಡಿಕೊಂಡಿರುವ ಈ ಕಾಂಗ್ರೆಸ್ ಸರ್ಕಾರವು, ನಾಗರಿಕರ ಆಸ್ತಿಗಳ ಮೇಲೆ ಅಧಿಕವಾಗಿ ತೆರಿಗೆಯನ್ನು ವಿಧಿಸಿ ನಾಗರೀಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಮೂಲಕ ತೆರಿಗೆ ಭಯೋತ್ಪಾದನೆ ಸೃಷ್ಟಿಸಿದೆ. ತೆರಿಗೆ ಪಿಪಾಸು ಸರ್ಕಾರವಾಗಿ ಜನರನ್ನು ತೆರಿಗೆ ಬೆಂಕಿಯಲ್ಲಿ ಬೇಯಿಸುತ್ತಿದೆ ಎಂದು ರಮೇಶ್ ಗೌಡ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಪಿಕ್ ಪಾಕೆಟ್ ಸರ್ಕಾರ: ಶರವಣ
ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು ಜನ ಕಂಗೆಟ್ಟು ಹೋಗಿದ್ದಾರೆ. ಇದೊಂದು ಪಿಕ್ ಪಾಕೆಟ್ ಸರ್ಕಾರ ಹಾಗೂ ಸುಲಿಗೆ ಸರ್ಕಾರ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ತೀವ್ರವಾಗಿ ಟೀಕಿಸಿದರು.
ಈ ಸರ್ಕಾರ ಬಡವರ ಬದುಕಿನ ಮೇಲೆ ಬಂಡೆ ಉರುಳಿಸುತ್ತಿದೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ, ಕರುಣೆ, ಅಂತಃಕರಣ ಏನೇನೂ ಇಲ್ಲ. ಗ್ರೇಟರ್ ಬೆಂಗಳೂರಿನ ನಾಗರಿಕರ ಆಸ್ತಿಗಳ ಮೇಲೆ ಅಧಿಕವಾಗಿ ತೆರಿಗೆಯನ್ನು ವಿಧಿಸಿ ಸಂಕಷ್ಟಕ್ಕೆ ಸಿಲುಕಿಸಿರುವ ತೆರಿಗೆ ಭಯೋತ್ಪಾದಕ ಸರ್ಕಾರ ಇದು ಎಂದು ತೀವ್ರವಾಗಿ ಖಂಡಿಸಿದರು.
ಜೆಡಿಎಸ್ ಪಕ್ಷದ ಮುಖಂಡರಾದ ತಿಮ್ಮೇಗೌಡ, ಶೈಲಜಾ ರಾವ್ ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
---