ನವದೆಹಲಿ: ಈ ಬಾರಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖರಾಗಿರುವ ತೆಲುಗು ದೇಶಂ ಮತ್ತು ಜೆಡಿಯು ಪಕ್ಷಗಳು, ಸಾಮಾನ್ಯ ಕನಿಷ್ಠ ಕಾರ್ಯಕ್ರಮ, ಸಂಪುಟದಲ್ಲಿ ಹೆಚ್ಚಿನ ಪಾಲು ಮತ್ತು ಮಹತ್ವದ ಖಾತೆ, ಲೋಕಸಭೆ ಸ್ಪೀಕರ್ ಹುದ್ದೆಗೆ ಬೇಡಿಕೆ ಇಡುವ ಸಾಧ್ಯತೆ ಇದೆ ಎನ್ನಲಾಗಿದೆ.ಟಿಡಿಪಿ ಮತ್ತು ಜೆಡಿಯು ಹೊರತಾಗಿ ಸರ್ಕಾರ ರಚನೆ ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಕೂಡಾ ಇಂಥ ಬೇಡಿಕೆಯನ್ನು ತಿರಸ್ಕರಿಸುವ ಹಂತದಲ್ಲಿ ಇಲ್ಲ. ಹೀಗಾಗಿ ಇಂಥ ಪರಿಸ್ಥಿತಿಯನ್ನು ಇದೇ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ನಿರ್ವಹಿಸುವ ಹೊಣೆ ಹೊತ್ತುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಗೆ ಸಂಭಾಳಿಸುತ್ತಾರೆ ಎಂಬ ಕುತೂಹಲ ಮೂಡಿದೆ.ಟಿಡಿಪಿ ಬೇಡಿಕೆ ಏನು?:
ಆಂಧ್ರದಲ್ಲಿ 16 ಸೀಟು ಗೆದ್ದಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಸಂಪುಟದಲ್ಲಿ ತಮ್ಮ ಪಕ್ಷಕ್ಕೆ 6 ಸಂಪುಟ ಸಚಿವ ಹುದ್ದೆ ನೀಡಬೇಕು. ಜತೆಗೆ ಆಂಧ್ರಕ್ಕೆ ವಿಶೇಷ ಸ್ಥಾನಮಾನ, ಲೋಕಸಭೆ ಸ್ಪೀಕರ್ ಹುದ್ದೆ, ಮಾಹಿತಿ ತಂತ್ರಜ್ಞಾನ, ರೈಲ್ವೆ, ಗ್ರಾಮೀಣಾಭಿವೃದ್ಧಿಯಂಥ ಖಾತೆಗಳು ಬೇಕು ಎಂಬ ಪಟ್ಟಿ ಸಿದ್ಧಮಾಡಿಟ್ಟಿದ್ದಾರೆ ಎನ್ನಲಾಗಿದೆ. ಈ ಹಿಂದೆ ಎನ್‌ಡಿಎದ ಭಾಗವಾಗಿದ್ದ ವೇಳೆ ಟಿಡಿಪಿಗೆ ಒಂದು ಸಂಪುಟ ಮತ್ತು ಒಂದು ರಾಜ್ಯ ಖಾತೆ ಸ್ಥಾನ ನೀಡಲಾಗಿತ್ತು. ಆದರೆ ಈ ಬಾರಿ ಅದಕ್ಕೆ ನಾಯ್ಡು ಒಪ್ಪುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ ಟಿಡಿಪಿಯ ಜೆಎಂಸಿ ಬಾಲಯೋಗಿ ಸ್ಪೀಕರ್ ಆಗಿದ್ದರು. ಈಗ ಸ್ಪೀಕರ್ ಹುದ್ದೆ ಬೇಡಿಕೆ ಹಿಂದೆ ನಾಯ್ಡು ರಾಜಕೀಯ ದೂರಾಲೋಚನೆ ಹೊಂದಿದ್ದಾರೆ. ತಮ್ಮ ಸಂಸದರು ಅಥವಾ ಎನ್‌ಡಿಎ ಸಂಸದರು ಪಕ್ಷಾಂತರಕ್ಕೆ ಯತ್ನಿಸಿದರೆ ಸ್ಪೀಕರ್ ಮೂಲಕ ಲಗಾಮಿನಲ್ಲಿ ಇಡುವ ಯೋಚನೆ ನಾಯ್ಡು ಅವರದ್ದಾಗಿದೆ ಎಂದು ಮೂಲಗಳು ಹೇಳಿವೆ.ಜೆಡಿಯು:
ಬಿಹಾರದಲ್ಲಿ 12 ಸ್ಥಾನ ಗೆದ್ದಿರುವ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್, ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಪಟ್ಟುಹಿಡಿಯಲಿದ್ದಾರೆ ಎನ್ನಲಾಗಿದೆ. ಹೀಗಾದಲ್ಲಿ ಏಕರೂಪ ನಾಗರಿಕ ಸಂಹಿತೆ, ಎನ್‌ಆರ್‌ಸಿಯಂಥ ಮಹತ್ವಕಾಂಕ್ಷೆಯ ಯೋಜನೆ ಜಾರಿ ಬಿಜೆಪಿಗೆ ಕಷ್ಟವಾಗಲಿದೆ. ಇದರ ಜೊತೆಗೆ ರೈಲ್ವೆ, ಗ್ರಾಮೀಣಾಭಿವೃದ್ಧಿ, ಕೃಷಿ ಮೊದಲಾದ ಆಯಕಟ್ಟಿನ ಖಾತೆಗಳಿಗೂ ನಿತೀಶ್ ಬೇಡಿಕೆ ಇಡಬಹುದು. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿ ಎಂದೂ ಕೇಳಬಹುದು ಎನ್ನಲಾಗಿದೆ.ಇನ್ನು 5 ಸ್ಥಾನ ಗೆದ್ದಿರುವ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್, ರೈಲ್ವೆ ಸಚಿವ ಹುದ್ದೆ ನೀಡಿ ಎಂಬ ಷರತ್ತು ವಿಧಿಸಬಹುದು ಎಂದು ಮೂಲಗಳು ಹೇಳಿವೆ.ಪವನ್‌ಗೂ ಗಿಫ್ಟ್:
ಆಂಧ್ರ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರಿಗೂ ಉಡುಗೊರೆ ನೀಡಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. ಹೀಗಾಗಿ ಅವರ ಪಕ್ಷದ ಸಂಸದರಿಗೂ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಜನಸೇನಾ ಪಕ್ಷದ ಇಬ್ಬರು ಲೋಕಸಭೆಗೆ ಆಯ್ಕೆಯಾಗಿದ್ದಾರೆ.