ಕೇಂದ್ರ ಸರ್ಕಾರವು ಮನರೇಗಾ ಯೋಜನೆ ಮರುಜಾರಿ ಮಾಡುವವರೆಗೆ ಹಾಗೂ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಹಿಂಪಡೆಯುವವರೆಗೆ ನಮ್ಮ ಹೋರಾಟ ಮುಂದುವರಿಸಬೇಕು. ಮನರೇಗಾ ಪರವಾದ ಹೋರಾಟ ಜನಾಂದೋಲವಾಗಿ ಪರಿವರ್ತನೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಬೆಂಗಳೂರು : ಕೇಂದ್ರ ಸರ್ಕಾರವು ಮನರೇಗಾ ಯೋಜನೆ ಮರುಜಾರಿ ಮಾಡುವವರೆಗೆ ಹಾಗೂ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಹಿಂಪಡೆಯುವವರೆಗೆ ನಮ್ಮ ಹೋರಾಟ ಮುಂದುವರಿಸಬೇಕು. ಮನರೇಗಾ ಪರವಾದ ಹೋರಾಟ ಜನಾಂದೋಲವಾಗಿ ಪರಿವರ್ತನೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಅರಮನೆ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಮನರೇಗಾ ಬಚಾವ್ ಸಂಗ್ರಾಮ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಮನರೇಗಾ ಯೋಜನೆ ಪರವಾಗಿ ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಆಂದೋಲನ ನಡೆಸಬೇಕಿದೆ. ಈ ಹೋರಾಟ ರೈತರು, ಜನರ ಆಂದೋಲನವಾಗಿ ಮಾಡಬೇಕು. ಅದರಲ್ಲೂ ಉತ್ತರ ಭಾರತದಲ್ಲಿ ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ರೈತರು ಹೋರಾಟ ಮಾಡಬೇಕು ಎಂದು ಹೇಳಿದರು.
ಮನರೇಗಾ ರದ್ದತಿ ಕುರಿತಾಗಿ ಚರ್ಚೆ
ಕಳೆದ ತಿಂಗಳು ನಡೆದ ಎಐಸಿಸಿ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮನರೇಗಾ ರದ್ದತಿ ಕುರಿತಾಗಿ ಚರ್ಚೆ ನಡೆಸಲಾಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ಕ್ರಮವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಮನರೇಗಾ ಮರು ಸ್ಥಾಪನೆಗಾಗಿ ಹೋರಾಟ ಆರಂಭಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಮನರೇಗಾ ಯೋಜನೆ ಮರುಜಾರಿ ಮಾಡುವವರೆಗೆ ಹಾಗೂ ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆಯುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಜತೆಗೆ ಕಾಂಗ್ರೆಸ್ ಆರಂಭಿಸುತ್ತಿರುವ ಮನರೇಗಾ ಪರವಾದ ಹೋರಾಟವು ಜನಾಂದೋಲವಾಗಿ ಪರಿವರ್ತನೆಯಾಗಬೇಕು ಎಂದು ಹೇಳಿದರು.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ಸೋನಿಯಾ ಗಾಂಧಿ ನೇತೃತ್ವದಲ್ಲಿ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಹಕ್ಕು ನೀಡುವ ಉದ್ದೇಶದೊಂದಿಗೆ ಮನರೇಗಾ ಯೋಜನೆ ಜಾರಿಗೊಳಿಸಲಾಯಿತು. 20 ವರ್ಷಗಳ ಹಿಂದೆ ಜಾರಿ ಮಾಡಲಾದ ಕಾಯ್ದೆ ಸದ್ಯ ದೇಶದ 12.16 ಕೋಟಿ ಕಾರ್ಮಿಕರಿಗೆ ಉದ್ಯೋಗ ಒದಗಿಸುತ್ತಿದೆ. ಅದರಲ್ಲಿ 6.21 ಕೋಟಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅಂಥ ಕಾಯ್ದೆಯನ್ನು ಈಗ ಕೇಂದ್ರ ಸರ್ಕಾರ ರದ್ದು ಮಾಡುವ ಮೂಲಕ ಉದ್ಯೋಗ ಹಕ್ಕು ಕಸಿಯಲಾಗಿದೆ ಎಂದರು.
ನಾಥೂರಾಮನ ಹೆಸರು ಯೋಜನೆಗೆ:
ಮನರೇಗಾ ಯೋಜನೆಯಂತೆ ಗ್ರಾಮೀಣ ಭಾಗದ ಕಾರ್ಮಿಕರು 365 ದಿನಗಳಲ್ಲಿ ಯಾವಾಗ ಬೇಕಾದರೂ ಕೆಲಸ ಕೇಳಬಹುದಿತ್ತು. ಕಾರ್ಮಿಕರು ತಮ್ಮ ಊರಿನಲ್ಲಿ, ತಮ್ಮ ಜಮೀನಿನಲ್ಲೇ ಕೆಲಸ ಮಾಡುವ ಅವಕಾಶವಿತ್ತು. ಅದನ್ನೆಲ್ಲ ಬದಲಿಸಿ ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆತಂದಿದೆ. ಈ ಯೋಜನೆ ಹೆಸರು ದಶರಥ ರಾಮ, ಸೀತಾ ರಾಮ ಅಥವಾ ಕೌಶಲ್ಯ ರಾಮನ ಹೆಸರಲ್ಲ. ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥೂರಾಮನ ಹೆಸರನ್ನು ಯೋಜನೆಗಿಡಲಾಗಿದೆ. ಗಾಂಧೀಜಿ ಅವರ ಹೆಸರನ್ನು ತೆಗೆಯುವ ಮೂಲಕ ಕೇಂದ್ರ ಸರ್ಕಾರ ಗಾಂಧಿ ಅವರನ್ನು ಮತ್ತೊಮ್ಮೆ ಕೊಲ್ಲುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರಾದ ಕೆ.ಜೆ.ಜಾರ್ಜ್, ಕೆ.ಎಚ್. ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ಎನ್. ಚಲುವರಾಯಸ್ವಾಮಿ, ಶಿವರಾಜ ತಂಗಡಗಿ, ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ, ಸಂಸದ ಕುಮಾರ್‌ನಾಯಕ್, ಶಾಸಕರಾದ ಲಕ್ಷ್ಮಣ ಸವದಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಇತರರಿದ್ದರು.

