ಈ ಸಂಬಂಧ ಉಪವಾಸ ಸತ್ಯಾಗ್ರಹ, 5 ಕಿ.ಮೀ. ಪಾದಯಾತ್ರೆ ಮಾಡಬೇಕಾಗಿದೆ. ಇಂತಹ ಕಾನೂನು ಬಾಹಿರವಾದ ಜಿ ರಾಮ್‌ ಜಿ ಯೋಜನೆಯನ್ನು ಹೋಗಲಾಡಿಸಲು ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯ

ಹರಪನಹಳ್ಳಿ: ಜಿ ರಾಮ್‌ ಜಿ ದುಷ್ಪರಿಣಾಮಗಳನ್ನು ಹೋಗಲಾಡಿಸಲು, ನರೇಗಾ ಯೋಜನೆಯ ಉಳಿವಿಗಾಗಿ ಹೋರಾಟಕ್ಕೆ ಸಿದ್ಧರಾಗಿ ಎಂದು ಕಾಂಗ್ರೆಸ್‌ ಕಾರ್ಯಕರ್ತೆಯರಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಿಳಿಸಿದರು.

ಅವರು ನಗರದ ಕಾಶಿ ಬಡಾವಣೆಯಲ್ಲಿರುವ ಕಾಂಗ್ರೆಸ್‌ ಭವನದಲ್ಲಿ ನರೇಗಾ ಜಿ ರಾಮ್‌ ಜಿ ಯೋಜನೆ ಹೋರಾಟದ ಪೂರ್ವಭಾವಿ ಸಭೆಯಲ್ಲಿ ತಾಲೂಕಿನ ಗ್ರಾಪಂ ಸದಸ್ಯರನ್ನು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂಬಂಧ ಉಪವಾಸ ಸತ್ಯಾಗ್ರಹ, 5 ಕಿ.ಮೀ. ಪಾದಯಾತ್ರೆ ಮಾಡಬೇಕಾಗಿದೆ. ಇಂತಹ ಕಾನೂನು ಬಾಹಿರವಾದ ಜಿ ರಾಮ್‌ ಜಿ ಯೋಜನೆಯನ್ನು ಹೋಗಲಾಡಿಸಲು ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದು ಅವರು ಹೇಳಿದರು.

ತಾಲೂಕಿನಲ್ಲಿ 30 ಗ್ರಾಮ ಪಂಚಾಯ್ತಿಗಳಲ್ಲಿ 16 ಗ್ರಾಮ ಪಂಚಾಯತಿಗಳು ಕಾಂಗ್ರೆಸ್ ಪಕ್ಷದ ಅಧಿಕಾರದ ಚುಕ್ಕಾಣಿಯಲ್ಲಿವೆ.. ಆ ಗ್ರಾಮ ಪಂಚಾಯತಿಗಳಲ್ಲಿ ಕೇಂದ್ರ ಸರ್ಕಾರದ ಜನ ವಿರೋಧಿ ಜಿ ರಾಮ್‌ ಜಿ ಯೋಜನೆಯ ವಿರುದ್ಧ ಹೋರಾಟ ಮಾಡಲು ಸಿದ್ಧರಾಗಬೇಕಾಗಿದೆ ಎಂದು ತಿಳಿಸಿದರು.

ಜಿ ರಾಮ್‌ ಜಿ ಯೋಜನೆಯಿಂದ ಎಸ್ಸಿ ಎಸ್ಟಿ ಸಮುದಾಯಗಳಿಗೆ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮುದಾಯಗಳಿಗೆ ಇನ್ನಷ್ಟು ಆರ್ಥಿಕ ಹಿನ್ನಡೆ ಆಗಲಿದೆ ಎಂದು ನುಡಿದರು.

ರಾಜ್ಯದಲ್ಲಿ ಮುಂಬರುವ ಏಪ್ರಿಲ್ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿವೆ. ಈ ಸ್ಥಳೀಯ ಸಂಸ್ಥೆ ಚುನಾವಣೆಗೆ ರಾಷ್ಟ್ರ ಮತ್ತು ರಾಜ್ಯ ನಾಯಕರು ಆಗಮಿಸಲಿದ್ದಾರೆ. ಗ್ರಾಮೀಣ ಪ್ರದೇಶದ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಬೇಕೆಂದು ಸಲಹೆ ನೀಡಿದರು.

ಜಿ ರಾಮ್‌ ಜಿ ಯೋಜನೆಯನ್ನು ಕೆಂದ್ರ ದ ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಮೋದಿ ಜೀ ಎಂದು ನಾಮಕರಣ ಮಾಡುವುದರಲ್ಲಿ ಅನುಮಾನವಿಲ್ಲ. ಕೇಂದ್ರ ಸರ್ಕಾರವು ಮಹಾತ್ಮ ಗಾಂಧೀಜಿ ಹೆಸರನ್ನು ಅಳಿಸಿ ಹಾಕಲು ಜನ ವಿರೋಧಿ ಯೋಜನೆಯನ್ನು ಜಾರಿಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದರು.

ಕೇಂದ್ರ ಸರ್ಕಾರವು ಹಂತ ಹಂತವಾಗಿ ಮಹಾತ್ಮ ಗಾಂಧೀಜಿ ಅವರ ಕನಸಿನ ಯೋಜನೆಗಳನ್ನು ಹಂತ ಹಂತವಾಗಿ ಕೊಲ್ಲುವ ಸತತ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನ ಆಧಾರದಲ್ಲಿ ಅಧಿಕಾರ ನಡೆಯುತ್ತಿದೆ. ಆದರೆ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಆರ್ಥಿಕ ತಜ್ಞರಾಗಿದ್ದರು. ಅವರು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಇಂತಹ ನರೇಗಾ ಯೋಜನೆಯನ್ನು ಜಾರಿಗೆ ತಂದಿದ್ದರು. ಅಂತಹ ಜನಪರ ನರೇಗಾ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ರದ್ದು ಪಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಬೇರಗೌಡ್ರು, ನಗರಸಭೆ ಸದಸ್ಯ, ಅಬ್ಬುಲ್ ರಹಮಾನ್, ಹುಲಿಕಟ್ಟಿ ಚಂದ್ರಪ್ಪ ಮಾತನಾಡಿದರು. ವಕೀಲ ವೆಂಕಟೇಶ್, ಲಾಟಿ ದಾದಾಪೀರ್, ಜಾಕೀರ್ ಹುಸೇನ್, ಗ್ಯಾರಂಟಿ ಅನುಷ್ಟಾನ ಸಮಿತಿಯ ಅಧ್ಯಕ್ಷ ಉದಯ ಶಂಕರ್, ಪ್ರಚಾರ ಸಮಿತಿ ಮುಖಂಡರಾದ ಕೃಷ್ಣನಾಯ್ಕ, ಮೈದೂರು ರಾಮಣ್ಣ, ಕಂಚಿಕೇರಿ ಜಯಲಕ್ಷೀ, ಆರ್.ಶಶಿಕುಮಾರ್ ನಾಯ್ಕ ಇದ್ದರು.