ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎಲ್ಲರನ್ನೂ ವಿಶ್ವಾಸದಿಂದ ಕರೆದೊಯ್ಯುತ್ತಿಲ್ಲ ಎಂದು ಹಲವು ನಾಯಕರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಮುಖರ ಎದುರು ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎಲ್ಲರನ್ನೂ ವಿಶ್ವಾಸದಿಂದ ಕರೆದೊಯ್ಯುತ್ತಿಲ್ಲ ಎಂದು ಹಲವು ನಾಯಕರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಮುಖರ ಎದುರು ಅಸಮಾಧಾನ ಹೊರಹಾಕಿದ್ದಾರೆ.
ಗುರುವಾರ ನಡೆದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಹಲವು ನಾಯಕರ ಪೈಕಿ ಕೆಲವರು ನೇರವಾಗಿ, ಇನ್ನು ಹಲವರು ಪರೋಕ್ಷವಾಗಿ ವಿಜಯೇಂದ್ರ ಅವರ ಕಾರ್ಯವೈಖರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಪ್ರತಾಪ್ ಸಿಂಹ ಸೇರಿದಂತೆ ತಟಸ್ಥ ನಿಲುವು ತಳೆದ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ವಿಜಯೇಂದ್ರ ಅವರಿಗೆ ಅನುಭವ ಸಾಲದು. ಅವರು ಪಕ್ಷದ ಅನುಭವಿ ನಾಯಕರ ಮಾರ್ಗದರ್ಶನ ಪಡೆಯಬೇಕು. ಆದರೆ, ಅದು ಆಗುತ್ತಿಲ್ಲ. ಕೆಲವೇ ಕೆಲವು ಮುಖಂಡರನ್ನು ತಮ್ಮೊಂದಿಗೆ ಇಟ್ಟುಕೊಂಡು ಸಾಗುತ್ತಿದ್ದಾರೆ. ಪಕ್ಷದ ಪ್ರಮುಖ ತೀರ್ಮಾನಗಳನ್ನು ಆ ಕೆಲವು ಮುಖಂಡರೊಂದಿಗೆ ಚರ್ಚಿಸಿ ಕೈಗೊಳ್ಳುತ್ತಾರೆ. ಪರಿಣಾಮ ಹಿರಿಯ ನಾಯಕರಿದ್ದರೂ ಜವಾಬ್ದಾರಿಯಿಲ್ಲದಂತೆ ಇರಬೇಕಾಗಿದೆ ಎಂದು ಅಳಲು ತೋಡಿಕೊಂಡರು ಎನ್ನಲಾಗಿದೆ.
ಆರಂಭದಲ್ಲೇ ಮಾತನಾಡಿದ ಸಂಘದ ಪ್ರಮುಖರು, ಎಲ್ಲರಿಗೂ ಮಾತನಾಡಲು ಅವಕಾಶ ನೀಡಲಾಗುತ್ತದೆ. ಪಕ್ಷ ಬಲಪಡಿಸುವ ಸಂಬಂಧ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹೇಳಿ. ಆದರೆ, ಒಬ್ಬರು ಹೇಳಿದ್ದನ್ನು ಮತ್ತೊಬ್ಬರು ಪುನರಾವರ್ತಿಸುವುದು ಬೇಡ. ಜತೆಗೆ ಯಾರಿಗೂ ಮುಜುಗರ ಆಗದಂತೆ ಹೇಳಿ ಎಂದು ಸೂಚ್ಯವಾಗಿ ತಿಳಿಸಿದ್ದರಿಂದ ಎಲ್ಲರೂ ತುಸು ಮೃದುವಾಗಿಯೇ ತಮ್ಮ ಅನಿಸಿಕೆಗಳನ್ನು ಹೊರಹಾಕಿದರು ಎಂದು ಮೂಲಗಳು ತಿಳಿಸಿವೆ.
ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳ ಕಾರ್ಯವೈಖರಿ ಸರಿಯಿಲ್ಲ. ಹಲವೆಡೆ ಪದಾಧಿಕಾರಿಗಳನ್ನು ಬದಲಿಸಬೇಕಾದ ಅಗತ್ಯವಿದೆ. ಅಂಥವರಿಂದ ಪಕ್ಷ ಸಂಘಟನೆಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದು ಪದಾಧಿಕಾರಿಗಳನ್ನು ನೇಮಿಸಬೇಕಾಗಿತ್ತು. ಈಗಲಾದರೂ ಬದಲಾವಣೆ ಮಾಡಬೇಕು ಎಂಬ ಒತ್ತಾಯವನ್ನೂ ಮುಂದಿಟ್ಟರು ಎಂದು ತಿಳಿದು ಬಂದಿದೆ.
ಪಕ್ಷದ ಪ್ರಮುಖ ತೀರ್ಮಾನಗಳನ್ನು ಕೋರ್ ಕಮಿಟಿ ಸಭೆ ನಡೆಸಿ ಕೈಗೊಳ್ಳಬೇಕು. ಆದರೆ, ಹಾಗಾಗುತ್ತಿಲ್ಲ. ಕೋರ್ ಕಮಿಟಿ ಸಭೆ ನಡೆಸದೇ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಅವರ ತಂದೆಯಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಂದೆ ಬಿಟ್ಟು ಆಡಳಿತ ನಡೆಸುತ್ತಿದ್ದಾರೆ. ಪಕ್ಷದ ನಾಯಕರಿಗೆ ತಾವು ಮಾತನಾಡದೆ ಯಡಿಯೂರಪ್ಪ ಅವರಿಂದ ಮಾತನಾಡಿಸುತ್ತಾರೆ. ಇದು ಸರಿಯಲ್ಲ ಎಂದೂ ಹಲವರು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ನಡುವೆ ಹೊಂದಾಣಿಕೆ ಕೊರತೆಯಿಂದ ಮೂರ್ನಾಲ್ಕು ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ಇದು ಮುಂದಿನ ಚುನಾವಣೆಗಳಲ್ಲಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದೂ ಸಲಹೆ ನೀಡಿದರು.
ಇದಕ್ಕೆ ಸಭೆಯಲ್ಲೇ ಪ್ರತಿಕ್ರಿಯಿಸಿದ ವಿಜಯೇಂದ್ರ, ಪಕ್ಷಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ನಾನೊಬ್ಬನೆ ಕೈಗೊಳ್ಳುವುದಿಲ್ಲ. ಪಕ್ಷದ ವರಿಷ್ಠರು, ಸಂಘವನ್ನು ಸಂಪರ್ಕಿಸಿಯೇ ತೆಗೆದುಕೊಳ್ಳುತ್ತೇನೆ ಎಂದು ಸಮಜಾಯಿಷಿ ನೀಡಿದರು ಎನ್ನಲಾಗಿದೆ.