;Resize=(412,232))
ಬೆಳಗಾವಿ : ಸಿಎಂ, ಡಿಸಿಎಂ ಹಾಗೂ ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಪಕ್ಷದಲ್ಲಿ ಗೊಂದಲ ಇರುವುದು 100% ನಿಜ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಅಲ್ಲದೆ, ಕಾಲ ಸನ್ನಿಹಿತವಾಗಿದ್ದು, ಶೀಘ್ರದಲ್ಲೇ ಗೊಂದಲ ನಿವಾರಣೆ ಆಗಲಿದೆ ಎಂದಿದ್ದಾರೆ.
ನಗರದಲ್ಲಿ ಶನಿವಾರ ಪಕ್ಷದಲ್ಲಿನ ಗೊಂದಲದ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಎಂ, ಡಿಸಿಎಂ ಹಾಗೂ ಸಚಿವ ಸಂಪುಟ ವಿಚಾರದಲ್ಲಿ ಗೊಂದಲ ಇದೆ, ಇದನ್ನು ಇತ್ಯರ್ಥ ಮಾಡಿ ಎಂದು ಹೈಕಮಾಂಡ್ ನಾಯಕರಿಗೆ ಹೇಳಿದ್ದೇನೆ. ನಮ್ಮ ಪಕ್ಷದ ವರಿಷ್ಠರು ಈ ಸಮಸ್ಯೆ ಬಗೆಹರಿಸುತ್ತಾರೆ. ಪಕ್ಷದ ಹೈಕಮಾಂಡ್ ಕಾಲಕಾಲಕ್ಕೆ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಿದೆ ಎಂದರು.
ಅಧಿಕಾರ ಹಸ್ತಾಂತರ ಆಗುತ್ತಾ ಎಂಬ ಪ್ರಶ್ನೆಗೆ ಅಧಿಕಾರ ಹಸ್ತಾಂತರ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಈ ಬಗ್ಗೆ ಗೊಂದಲವಿದೆ, ಬಗೆಹರಿಸಿ ಎಂದಷ್ಟೇ ಹೇಳಿದ್ದೇನೆ ಎಂದರು.
ಗೊಂದಲ ಬಗೆಹರಿಸಲು ಹೈಕಮಾಂಡ್ ಯಾಕೆ ವಿಳಂಬ ಮಾಡುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಲ ಸನ್ನಿಹಿತವಾಗಿದೆ, ಶೀಘ್ರದಲ್ಲೇ ಗೊಂದಲ ನಿವಾರಣೆ ಆಗಲಿದೆ ಎಂದರು. ಮುಂದುವರಿದು, ಗೊಂದಲ ನಮ್ಮ ಪಕ್ಷದಲ್ಲಿ ಮಾತ್ರವಲ್ಲ, ಬಿಜೆಪಿ, ಜೆಡಿಎಸ್ ಸೇರಿ ಎಲ್ಲ ಪಕ್ಷದಲ್ಲೂ ಗೊಂದಲ ಇದೆ. ಅದು ಸಹಜ ಎಂದರು.
ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸ ಕುರಿತು ಪ್ರತಿಕ್ರಿಯಿಸಿ, ದೆಹಲಿಗೆ ಹೋಗುವುದು ಹೊಸ ವಿಚಾರವಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಿದ್ದಾರೆ, ಸಚಿವರಿದ್ದಾರೆ. ಕೆಲಸ ಇರುತ್ತೆ, ಹೋಗ್ತಾರೆ ಎಂದರು.
ಪಕ್ಷಕ್ಕಾಗಿ ದುಡಿದಿದ್ದೇನೆ ಕೂಲಿ ಕೊಡಿ ಎಂಬ ಶಿವಕುಮಾರ್ ವಾದ ಕುರಿತು ಪ್ರತಿಕ್ರಿಯಿಸಿ, ಅದು ಸ್ವಾಭಾವಿಕ. ಎಲ್ಲರೂ ಅವಕಾಶವನ್ನು ಕೇಳಿಯೇ ಕೇಳುತ್ತಾರೆ. ಶಿವಕುಮಾರ್ ಕೇಳಿದ್ದರಲ್ಲಿ ತಪ್ಪಿಲ್ಲ ಎಂದರು.
ಸಿಎಂ, ಡಿಸಿಎಂ ಹಾಗೂ ಸಚಿವ ಸಂಪುಟ ವಿಚಾರದಲ್ಲಿ ಗೊಂದಲ ಇದೆ, ಇದನ್ನು ಇತ್ಯರ್ಥ ಮಾಡಿ ಎಂದು ಹೈಕಮಾಂಡ್ ನಾಯಕರಿಗೆ ಹೇಳಿದ್ದೇನೆ. ನಮ್ಮ ಪಕ್ಷದ ವರಿಷ್ಠರು ಈ ಸಮಸ್ಯೆ ಬಗೆಹರಿಸುತ್ತಾರೆ. ಪಕ್ಷದ ಹೈಕಮಾಂಡ್ ಕಾಲಕಾಲಕ್ಕೆ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಿದೆ.
- ಸತೀಶ್ ಜಾರಕಿಹೊಳಿ, ಸಚಿವ
ಒಡಂಬಡಿಕೆ ಆಗಿದೆ ಎಂಬ ಮಾತು ಇದೆ. ಹೀಗಾಗಿ ನಾವೆಲ್ಲಾ ದೆಹಲಿ ಕಡೆ ಮುಖ ಮಾಡಿ ನೋಡುತ್ತಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವಾಗುತ್ತದೆ. ಹೈಕಮಾಂಡ್ ಬಗೆಹರಿಸುತ್ತದೆ ಎಂಬ ಭಾವನೆಯಲ್ಲಿದ್ದೇವೆ. ಅವಶ್ಯಕತೆ ಬಂದರೆ ನಾವು ಕೂಡ ದೆಹಲಿಗೆ ತೆರಳುತ್ತೇವೆ.
- ಡಾ। ರಂಗನಾಥ್, ಕುಣಿಗಲ್ ಶಾಸಕ