ಇಂದಿನಿಂದ ರಾಹುಲ್‌ ಗಾಂಧಿ 2ನೇ ಯಾತ್ರೆ ಆರಂಭ

KannadaprabhaNewsNetwork | Updated : Jan 14 2024, 11:36 AM IST

ಸಾರಾಂಶ

ಭಾರತ್‌ ಜೋಡೋ ಯಾತ್ರೆಯಂತೆ ಮತ್ತೊಂದು ಯಾತ್ರೆಗೆ ಕೈಹಾಕಿರುವ ರಾಹುಲ್‌ ಗಾಂಧಿ ಅವರು, ಭಾರತ್‌ ನ್ಯಾಯ್‌ ಯಾತ್ರೆಯನ್ನು ಇಂದಿನಿಂದ ಮಣಿಪುರದಿಂದ ಆರಂಭಿಸಲಿದ್ದಾರೆ.

ಪಿಟಿಐ ಇಂಫಾಲ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವಿನ ಹಾದಿ ತೋರಿಸಲು ಕಾಂಗ್ರೆಸ್‌ ಆಯೋಜಿಸಿರುವ ಭಾರತ್‌ ಜೋಡೋ ನ್ಯಾಯ್ ಯಾತ್ರೆ ಭಾನುವಾರ ಮಣಿಪುರದಿಂದ ಆರಂಭಗೊಳ್ಳಲಿದೆ. 

ಪಕ್ಷದ ಹಿರಿಯ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಈ ಹೈಬ್ರಿಡ್‌ ಮಾದರಿಯ ಬಸ್‌ ಹಾಗೂ ಕಾಲ್ನಡಿಗೆ ಯಾತ್ರೆ ಇಂಫಾಲದಲ್ಲಿ ಆರಂಭವಾಗಿ ಮುಂಬೈನಲ್ಲಿ ಅಂತ್ಯಗೊಳ್ಳಲಿದೆ.

ಬೇಸಿಗೆಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪುನಶ್ಚೇತನ ನೀಡಿ ಮತ್ತೆ ಕೇಂದ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶವನ್ನು ಯಾತ್ರೆ ಹೊಂದಿದೆ. 

ಜೊತೆಗೆ ನಿರುದ್ಯೋಗ, ಬೆಲೆ ಏರಿಕೆ ಮತ್ತು ಸಾಮಾಜಿಕ ನ್ಯಾಯದಂತಹ ವಿಷಯಗಳ ಬಗ್ಗೆ ಗಮನ ಸೆಳೆಯಲಿದೆ. ಇದೇ ಕಾರಣಕ್ಕಾಗಿಯೇ ಹಿಂಸಾಚಾರ ಪೀಡಿತ ಮಣಿಪುರವನ್ನು ಯಾತ್ರೆಯ ಆರಂಭದ ಸ್ಥಳವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.ಭಾರತ್ ಜೋಡೋ ನ್ಯಾಯ್ ಯಾತ್ರೆಯು 15 ರಾಜ್ಯಗಳಲ್ಲಿ 100 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.

 ಥೌಬಾಲ್‌ನಿಂದ ಯಾತ್ರೆ ಆರಂಭ: ಮೊದಲು ಹಿಂಸಾಪೀಡಿತ ಮಣಿಪುರದ ರಾಜಧಾನಿ ಇಂಫಾಲ್‌ನಿಂದ ಯಾತ್ರೆ ಆರಂಭಕ್ಕೆ ನಿರ್ಧರಿಸಲಾಗಿತ್ತು. ಆದರೆ ಹಿಂಸಾಪೀಡಿತ ಸ್ಥಳವಾದ ಕಾರಣ ಸೀಮಿತ ಸಂಖ್ಯೆಯಲ್ಲಿ ಜನ ಸೇರಬೇಕು ಎಂದು ಸರ್ಕಾರ ಷರತ್ತು ವಿಧಿಸಿತ್ತು. 

ಹೀಗಾಗಿ ಈಗ ಸ್ಥಳ ಬದಲಿಸಿದ್ದು, ಮಣಿಪುರದ ಥೌಬಾಲ್ ಜಿಲ್ಲೆಯ ಖಾಸಗಿ ಮೈದಾನದಿಂದ ಯಾತ್ರೆ ಆರಂಭವಾಗಲಿದೆ.ಮಣಿಪುರವು ಕಳೆದ ವರ್ಷ ಮೇ ತಿಂಗಳಿನಿಂದ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿದೆ. 

ಇದು 180ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ.ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಎಲ್ಲಾ ಪ್ರಮುಖ ನಾಯಕರು ಯಾತ್ರೆಗೆ ಧ್ವಜಾರೋಹಣ ಮಾಡಲು ಥೌಬಾಲ್‌ಗೆ ಭಾನುವಾರ ಆಗಮಿಸಲಿದ್ದಾರೆ.

ಪಾದಯಾತ್ರೆ-ಬಸ್‌ ಯಾತ್ರೆಯ ಮಿಶ್ರಣ: ಭಾರತ್ ಜೋಡೋ ನ್ಯಾಯ್ ಯಾತ್ರೆಯು ಮಣಿಪುರದಿಂದ ಮುಂಬೈಗೆ 6,713 ಕಿ.ಮೀ. ಕ್ರಮಿಸಲಿದೆ. ಇದು ಹೆಚ್ಚಾಗಿ ಬಸ್‌ನಲ್ಲಿ ಸಾಗಲಿದ್ದು, ಮಧ್ಯೆ ಮಧ್ಯೆ ಕಾಲ್ನಡಿಗೆಯಲ್ಲಿ ಕ್ರಮಿಸುತ್ತದೆ. 

ಯಾತ್ರೆಯು 67 ದಿನಗಳಲ್ಲಿ 110 ಜಿಲ್ಲೆಗಳು, 100 ಲೋಕಸಭಾ ಸ್ಥಾನಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳನ್ನು ಹಾದು ಹೋಗಲಿದ್ದು, ಮಾರ್ಚ್ 20 ಅಥವಾ 21ರಂದು ಮುಂಬೈನಲ್ಲಿ ಅಂತ್ಯಗೊಳ್ಳಲಿದೆ.

ಯಾತ್ರೆಯು ಅತಿ ಹೆಚ್ಚು ಎಂದರೆ, ಉತ್ತರ ಪ್ರದೇಶದಲ್ಲಿ 11 ದಿನಗಳಲ್ಲಿ 1,074 ಕಿ.ಮೀ. ಕ್ರಮಿಸಲಿದೆ. ಇದು ಅಮೇಠಿ, ಗಾಂಧಿ ಕುಟುಂಬದ ಭದ್ರಕೋಟೆ ರಾಯ್ ಬರೇಲಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಾಣಸಿ ಮೂಲಕ ಹಾದುಹೋಗುತ್ತದೆ.

ಡರೋ ಮತ್‌ ಸಹೋ ಮತ್‌: ಕಳೆದ 10 ವರ್ಷಗಳ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ‘ಸಹೋ ಮತ್, ಡರೋ ಮತ್’ (ಅನ್ಯಾಯ ಸಹಿಸಬೇಡಿ, ಭಯಪಡಬೇಡಿ) ಎಂಬ ಅಡಿಬರಹದೊಂದಿಗೆ ‘ನ್ಯಾಯ ಗೀತೆ’ ಬಿಡುಗಡೆ ಮಾಡಿದೆ.

ಈ ಹಿಂದೆ 2022ರಲ್ಲಿ ನಡೆದಿದ್ದ ಭಾರತ್ ಜೋಡೋ ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 75 ಜಿಲ್ಲೆಗಳು ಮತ್ತು 76 ಲೋಕಸಭಾ ಕ್ಷೇತ್ರಗಳನ್ನು ಕ್ರಮಿಸಿತ್ತು.

ರಾಹುಲ್‌ ಗಾಂಧಿ 2ನೇ ಯಾತ್ರೆಯೂ  15 ರಾಜ್ಯಗಳಲ್ಲಿ ಯಾತ್ರೆ ಸಂಚಾರ, 100 ಲೋಕಸಭಾ ಕ್ಷೇತ್ರ ಮತ್ತು 337 ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, 67 ದಿನಗಳ ಕಾಲ ಈ ಯಾತ್ರೆ ನಡೆಯಲಿದೆ. ಒಟ್ಟು 6713 ಕಿಮೀ ದೂರದಷ್ಟು ಸಂಚಾರ ಮಾಡಲಿದ್ದು,  ಉತ್ತರ ಪ್ರದೇಶದಲ್ಲೇ  1074 ಕಿಮೀ ಸಂಚಾರ ಮಾಡಲಿದ್ದಾರೆ. ಭಾರತ್‌ ಜೋಡೋ-1 12 ರಾಜ್ಯಗಳಲ್ಲಿ ನಡೆದಿತ್ತು.

Share this article