ಅಶೋಕ್‌ ವಿರುದ್ಧ ಕಾಂಗ್ರೆಸ್‌ ಭೂಹಗರಣ ಆರೋಪ - ಅಕ್ರಮವಾಗಿ ಖರೀದಿಸಿ ಬಳಿಕ ಬಿಡಿಎಗೇ ಗಿಫ್ಟ್‌

Published : Oct 03, 2024, 09:44 AM ISTUpdated : Oct 03, 2024, 09:45 AM IST
R Ashok

ಸಾರಾಂಶ

‘ಬಿಡಿಎಗೆ ಸೇರಿದ ಕೋಟ್ಯಂತರ ರು. ಮೌಲ್ಯದ ಜಮೀನನ್ನು ಅಕ್ರಮವಾಗಿ ಖರೀದಿಸಿ, ಪ್ರಭಾವ ಬಳಸಿ ಡಿನೋಟಿಫಿಕೇಷನ್‌ ಮಾಡಿಕೊಂಡು ವಿವಾದವಾದಾಗ ಶಿಕ್ಷೆಯಿಂದ ಪಾರಾಗಲು ಬಿಡಿಎಗೆ ಗಿಫ್ಟ್‌ ಡೀಡ್‌ ಮೂಲಕ ಜಮೀನು ವಾಪಸು ನೀಡಿದ್ದರು’ ಎಂಬ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ವಿರುದ್ಧ ಗಂಭೀರ ಆರೋಪ 

ಬೆಂಗಳೂರು :‘ಬಿಡಿಎಗೆ ಸೇರಿದ ಕೋಟ್ಯಂತರ ರು. ಮೌಲ್ಯದ ಜಮೀನನ್ನು ಅಕ್ರಮವಾಗಿ ಖರೀದಿಸಿ, ಪ್ರಭಾವ ಬಳಸಿ ಡಿನೋಟಿಫಿಕೇಷನ್‌ ಮಾಡಿಕೊಂಡು ವಿವಾದವಾದಾಗ ಶಿಕ್ಷೆಯಿಂದ ಪಾರಾಗಲು ಬಿಡಿಎಗೆ ಗಿಫ್ಟ್‌ ಡೀಡ್‌ ಮೂಲಕ ಜಮೀನು ವಾಪಸು ನೀಡಿದ್ದರು’ ಎಂಬ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ವಿರುದ್ಧ ಗಂಭೀರ ಆರೋಪವನ್ನು ಕಾಂಗ್ರೆಸ್‌ ಸಚಿವರು ಮಾಡಿದ್ದಾರೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರಾದ ಕೃಷ್ಣ ಬೈರೇಗೌಡ, ಎಚ್‌.ಕೆ. ಪಾಟೀಲ್‌ ಹಾಗೂ ಸತೀಶ್‌ ಜಾರಕಿಹೊಳಿ ಅವರು ದಾಖಲೆ ಸಹಿತ ಈ ಆರೋಪ ಮಾಡಿದರು.

ತನ್ಮೂಲಕ ಮುಡಾ ಸೈಟು ವಾಪಸು ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪೊಪ್ಪಿಕೊಂಡಂತೆ ಎಂದು ಟೀಕಿಸಿದ್ದ ಅಶೋಕ್‌ಗೆ ಭಾರಿ ತಿರುಗೇಟು ನೀಡಿದ್ದು, ‘ಇಷ್ಟೆಲ್ಲಾ ಅಕ್ರಮ ಮಾಡಿರುವ ಆರ್.ಅಶೋಕ್ ಅವರು ವಿರೋಧ ಪಕ್ಷದ ನಾಯಕ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ?’ ಎಂದು ಪ್ರಶ್ನಿಸಿದರು.

ಆರೋಪ ಏನು?:

ಪರಮೇಶ್ವರ್‌ ಮಾತನಾಡಿ, ಲೊಟ್ಟೆಗೊಲ್ಲಹಳ್ಳಿಯಲ್ಲಿ ಅಶೋಕ್‌ ನೂರಾರು ಕೋಟಿ ರು. ಭೂ ಹಗರಣ ನಡೆಸಿದ್ದರು. 1977ರಲ್ಲಿ ಬಿಡಿಎ ಲೊಟ್ಟೆಗೊಲ್ಲಹಳ್ಳಿಯಲ್ಲಿ ರಾಮಸ್ವಾಮಿ ಎಂಬುವವರಿಗೆ ಸೇರಿದ 32 ಗುಂಟೆ ಜಮೀನು ನೋಟಿಫಿಕೇಶನ್ ಮಾಡುತ್ತದೆ. ಬಳಿಕ 1978ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಬಿಡಿಎ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ಹೀಗೆ ಬಿಡಿಎ ಸ್ವತ್ತಾಗಿರುವ ಜಮೀನನ್ನು ಅಶೋಕ್‌ ಅವರು ಕಾನೂನು ಬಾಹಿರವಾಗಿ 2003 ಹಾಗೂ 2007 ರಲ್ಲಿ ರಾಮಸ್ವಾಮಿ ಅವರಿಂದ ಖರೀದಿ ಮಾಡಿದ್ದಾರೆ.

ಅಲ್ಲದೆ, ಅಶೋಕ್‌ ಖರೀದಿ ಮಾಡಿದ ಬಳಿಕ 2009ರಲ್ಲಿ ರಾಮಸ್ವಾಮಿ ಅವರಿಂದ ಜಮೀನು ಡಿನೋಟಿಫಿಕೇಷನ್‌ ಮಾಡುವಂತೆ ಅರ್ಜಿ ಕೊಡಿಸುತ್ತಾರೆ. ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಈ ಅರ್ಜಿಯ ಮೇಲೆ ಕೂಡಲೇ ಮಂಡಿಸಿ ಎಂದು ಬರೆದು ಎರಡು ತಿಂಗಳಲ್ಲಿ ಡಿನೋಟಿಫಿಕೇಷನ್‌ ಮಾಡಿ ಭೂ ಸ್ವಾಧೀನದಿಂದ ಕೈಬಿಟ್ಟಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಅಕ್ರಮ ಡಿನೋಟಿಫಿಕೇಷನ್ ವಿರುದ್ಧ ನಿವೃತ್ತ ವಿಂಗ್ ಕಮಾಂಡರ್ ಜಿ.ವಿ ಅತ್ರಿ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡುತ್ತಾರೆ. ನಂತರ ಇದು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ತಪ್ಪು ಸಾಬೀತಾಗಿ ಶಿಕ್ಷೆಗೆ ಗುರಿಯಾಗುವ ಭೀತಿಯಿಂದ ಅಶೋಕ್ ಅವರು ಈ ಜಮೀನು ಹಿಂತಿರುಗಿಸಲು ತೀರ್ಮಾನಿಸುತ್ತಾರೆ. 2011ರ ಆಗಸ್ಟ್‌ನಲ್ಲಿ ಬಿಡಿಎಗೆ ಗಿಫ್ಟ್‌ ಡೀಡ್‌ ಮಾಡಿದ್ದಾರೆ. ಬಿಡಿಎಗೆ ಬಿಡಿಎ ಸ್ವತ್ತನ್ನೇ ಇವರು ಹೇಗೆ ಗಿಫ್ಟ್‌ ಡೀಡ್‌ ಮಾಡಿದರು? ಗಿಫ್ಟ್‌ ಡೀಡ್‌ ಮಾಡಿ ಜಾಗ ವಾಪಸು ನೀಡಿದರೆ ಅವರೇ ಹೇಳಿದಂತೆ ತಪ್ಪು ಒಪ್ಪಿಕೊಂಡಂತೆ ಅಲ್ಲವೇ? ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಕ್ರಿಮಿನಲ್‌ ಕೇಸು ಅಗತ್ಯವಿಲ್ಲ ಎಂದಿದ್ದ ಕೋರ್ಟ್:

ಹೈಕೋರ್ಟ್ ಮೆಟ್ಟಿಲೇರಿದಾಗ ನ್ಯಾ। ದಿನೇಶ್ ಮಹೇಶ್ವರಿ ಹಾಗೂ ನ್ಯಾ। ಅರವಿಂದ್ ಕುಮಾರ್ ಅವರು ವಿಚಾರಣೆ ಮಾಡಿ ತೀರ್ಪು ನೀಡುತ್ತಾರೆ. ಈ ತೀರ್ಪಿನಲ್ಲಿ ಈ ಭೂಮಿಯು ಬಿಡಿಎ ಅಧೀನಕ್ಕೆ ವಾಪಸು ಬಂದಿದ್ದು, ಬಿಡಿಎ ಅಧೀನದಲ್ಲೇ ಇರುವ ಕಾರಣ ಕ್ರಿಮಿನಲ್ ಮೊಕದ್ದಮೆ ಹೂಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಸಿದ್ದರಾಮಯ್ಯ ಅವರ ಪತ್ನಿ ತಮಗೆ ಪರಿಹಾರವಾಗಿ ಬಂದ ನಿವೇಶನ ವಾಪಸ್ ನೀಡಿರುವುದನ್ನು ಅಶೋಕ್‌ ಆಕ್ಷೇಪಿಸುತ್ತಿದ್ದಾರೆ. ಆದರೆ ಈ ತೀರ್ಪನ್ನು ನೀವು ಯಾವ ರೀತಿ ಅರ್ಥೈಸುತ್ತಾರೆ? ಇದರ ಬಗ್ಗೆ ಜನರಿಗೆ ಏನು ಹೇಳುತ್ತಾರೆ? ಎಂದು ಕಿಡಿ ಕಾರಿದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಬಿಡಿಎ ಸ್ವತ್ತನ್ನು ಅಶೋಕ್ ಅಕ್ರಮವಾಗಿ ಕಬಳಿಸಲು ಯತ್ನಿಸಿದ್ದಾರೆ. ಅರ್ಜಿ ನೀಡಿದ 12 ದಿನಗಳ ಅಂತರದಲ್ಲಿ ಡಿನೋಟಿಫಿಕೇಷನ್ ಆಗಿದೆ. ಸರ್ಕಾರಿ ಜಾಗವನ್ನು 23 ವರ್ಷಗಳ ನಂತರ ಡಿನೋಟಿಫಿಕೇಷನ್ ಮಾಡಿರುವುದು ಅಕ್ರಮ ಅಲ್ಲವೇ? ಮೂಲ ವಾರಸುದಾರರು ಡಿನೋಟಿಫಿಕೇಷನ್ ಗೆ ಅರ್ಜಿಯನ್ನೇ ಕೊಟ್ಟಿಲ್ಲ.ಇವರ ಹೆಸರಲ್ಲಿ ಬೇನಾಮಿ ರಾಮಸ್ವಾಮಿ ಎಂಬುವವರನ್ನು ಸೃಷ್ಟಿ ಮಾಡಲಾಗಿದೆ. ಇದು ಅಕ್ರಮವಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಹೀಗಾಗಿ ಇಷ್ಟೆಲ್ಲಾ ಅಕ್ರಮ ಮಾಡಿರುವ ಆರ್.ಅಶೋಕ್ ಅವರು ವಿರೋಧ ಪಕ್ಷದ ನಾಯಕ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಕಾನೂನು ಸಚಿವ ಎಚ್.ಕೆ. ಪಾಟೀಲ್‌ ಮಾತನಾಡಿ, ಅಶೋಕ್‌ ಹೇಳಿಕೆ ಗಮನಿಸಿದರೆ ಅಚ್ಚರಿಯಾಗುತ್ತಿದೆ. ಅಶೋಕ್‌ ಅವರೇ ನೀವು ಮಾಡಿದ್ದು ಸರಿಯಾದರೆ ಪಾರ್ವತಮ್ಮ ಅವರು ಮಾಡಿದ್ದು ತಪ್ಪು ಹೇಗಾಗುತ್ತದೆ? ಎಂದು ಕಿಡಿ ಕಾರಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು ಹಾಜರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪತ್ರಕರ್ತರು ಹೆದರದೆ ಕರ್ತವ್ಯ ನಿರ್ವಹಿಸಿ: ಬಸವರಾಜ ಹೊರಟ್ಟಿ
ಸಂವಿಧಾನದ ಕುರಿತು ಜಾಗೃತಿ ಮೂಡಿಸಿ: ಸತೀಶ್ ಜಾರಕಿಹೊಳಿ