ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಐಎಎನ್‌ಎಸ್ ಮತದಾನ ಪೂರ್ವ ಸಮೀಕ್ಷೆ ನಡೆಸಿದೆ. ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಅಧಿಕಾರ ಕಳೆದುಕೊಳ್ಳಲಿದ್ದು ಅಣ್ಣಾಡಿಎಂಕೆ-ಬಿಜೆಪಿ ಕೂಟ ಗೆಲ್ಲಲಿದೆ. ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್, ಪ.ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಹಾಗೂ ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಪುನಃ ಅಧಿಕಾರಕ್ಕೆ ಬರಲಿವೆ ಎಂದು ಸಮೀಕ್ಷೆ ಹೇಳಿದೆ.
ಟಿಎಂಸಿ, ಬಿಜೆಪಿ ನೇರ ಸಮರ
ಟಿಎಂಸಿ
ಶಕ್ತಿ: ಸಿಎಂ ಮಮತಾ ಜನಪ್ರಿಯತೆ. ತಳಮಟ್ಟದವರೆಗೆ ಪಕ್ಷದ ಸಂಘಟನೆ ಬಲಿಷ್ಠ. ಅತಿದೊಡ್ಡ ಕಾರ್ಯಕರ್ತರ ಪಡೆಯನ್ನು ಪಕ್ಷ ಹೊಂದಿದೆ. ಪಂಚಾಯತಿ, ನಗರಸಭೆಯಂಥ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಅಧಿಕಾರ. ಸರ್ಕಾರದ ಜನಪರ ಕಾರ್ಯಕ್ರಮ. ಎಸ್‌ಐಆರ್ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಯಶಸ್ವಿ.
ದೌರ್ಬಲ್ಯ: ಅಧಿಕಾರ ವಿರೋಧಿ ಅಲೆ ಇದೆ. ಭ್ರಷ್ಟಾಚಾರದ ಆರೋಪ, ಸ್ಥಳೀಯ ನಾಯಕರ ವಿರುದ್ಧ ಜನಾಕ್ರೋಶವಿದೆ. ರಾಜ್ಯದ ಜನರ ನೈಜ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ವಿಫಲವಾದ ಆರೋಪ. ಪಕ್ಷದೊಳಗಿನ ಬಣ ಜಗಳ. ಎಸ್‌ಐಆರ್ ವೇಳೆ ಪಕ್ಷದ ಮತಬುಟ್ಟಿ ಕಳಚಿದ ಆತಂಕ
ಅವಕಾಶ: ಎಸ್‌ಐಆರ್ ವಿವಾದದ ಲಾಭ. ಕಲ್ಯಾಣ ಕಾರ್ಯಕ್ರಮಗಳಿಂದ ಅನುಕೂಲ ಪಡೆದ ದುರ್ಬಲ ವರ್ಗದವರು ಮಮತಾ ಆಡಳಿತ ಬೆಂಬಲಿಸಬಹುದು.
ಬಿಜೆಪಿ
ಶಕ್ತಿ: ಟಿಎಂಸಿಯ ಪ್ರಬಲ ಪ್ರತಿಸ್ಪರ್ಧಿ. ಪ್ರಧಾನಿ ಮೋದಿ ಜನಪ್ರಿಯತೆ. ರಾಜ್ಯದಲ್ಲಿ ಹಿಂದುತ್ವದ ಅಲೆ ಸೃಷ್ಟಿಸುವಲ್ಲಿ ಯಶಸ್ವಿ. ಸರ್ಕಾರದ ಭ್ರಷ್ಟಾಚಾರ ಕಾನೂನು ಸುವ್ಯವಸ್ಥೆ ವೈಫಲ್ಯ ವಿರುದ್ಧ ಧ್ವನಿ ಎತ್ತುವ ಮೂಲಕ ಗಟ್ಟಿ ಅಭಿಯಾನ. ಎಡಪಂಥೀಯ, ಕಾಂಗ್ರೆಸ್‌ನ ಮತಬುಟ್ಟಿಗೆ ಕೈಹಾಕುವಲ್ಲಿ ಯಶಸ್ವಿ.
ದೌರ್ಬಲ್ಯ: ಪ್ರಚಾರಕ್ಕಾಗಿ ಹೊರಗಿನವರನ್ನೇ ನೆಚ್ಚಿಕೊಂಡಿದೆ. ಮೋದಿ ಸೇರಿ ಕೇಂದ್ರದ ನಾಯಕರೇ ಬಿಜೆಪಿ ಪಾಲಿಗೆ ಸ್ಟಾರ್ ಪ್ರಚಾರಕರು. ಎಸ್‌ಐಆರ್ ಗೊಂದಲ ಬಿಜೆಪಿಗೆ ನಷ್ಟ ಮಾಡಬಹುದು. ಆಂತರಿಕ ಕಚ್ಚಾಟ. ತಳಮಟ್ಟದಲ್ಲಿ ಸಂಘಟನೆ ಗಟ್ಟಿ ಇಲ್ಲ. ಮಮತಾ ವರ್ಚಸ್ಸಿಗೆ ಸರಿಸಮಾನಾದ ನಾಯಕನ ಕೊರತೆ.
ಅವಕಾಶ: ಆಡಳಿತ ವಿರೋಧಿ ಅಲೆ. ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಸಮಸ್ಯೆ, ಅಭಿವೃದ್ಧಿಯ ಕೊರತೆ. ಸಾಮೂಹಿಕ ನಾಯಕತ್ವದೊಂದಿಗೆ ಕಣಕ್ಕಿಳಿದು ಮಮತಾ ಬ್ಯಾನರ್ಜಿ ಅವರ ವರ್ಚಸ್ಸನ್ನು ಸಮರ್ಥವಾಗಿ ಎದುರಿಸಬಹುದು.
ಕಾಂಗ್ರೆಸ್
ಶಕ್ತಿ: 2021ರಲ್ಲಿ ಶೂನ್ಯ ಸುತ್ತಿದರೂ ಮಾಲ್ಡಾ, ಮುರ್ಷಿದಾಬಾದ್, ನಡಿಯಾ ಮತ್ತಿತರ ಉತ್ತರ ಮತ್ತು ಮಧ್ಯ ಬಂಗಾಳದಲ್ಲಿ ಕಾಂಗ್ರೆಸ್‌ನ ಪ್ರಭಾವ ಇನ್ನೂ ಇದೆ.
ದೌರ್ಬಲ್ಯ: ಪಕ್ಷವಿರೋಧಿ ಚಟುವಟಿಕೆ, ಭಿನ್ನಮತ ಹಾಗೂ ಸಂಘಟನಾ ಕೊರತೆಯ ಕಾರಣ ಹಲವು ಜಿಲ್ಲೆಗಳಲ್ಲಿ ಪಕ್ಷ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಸಾಲು ಸಾಲು ಸೋಲುಗಳ ಹೊರತಾಗಿಯೂ ಪಕ್ಷ ಇನ್ನೂ ಪಾಠ ಕಲಿತಿಲ್ಲ.
ಅವಕಾಶ: ಈ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಅನುಕೂಲ ಆಗಲಿದೆ. ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮೂರನೇ ಪರ್ಯಾಯಶಕ್ತಿಯಾಗಿ ಬಿಂಬಿಸಿಕೊಳ್ಳಲು ಅವಕಾಶ.
ಸಿಪಿಎಂ
ಶಕ್ತಿ: ಟಿಎಂಸಿ ವಿರುದ್ಧದ ಭ್ರಷ್ಟಾಚಾರದ ಆರೋಪ ಮತ್ತು ಧಾರ್ಮಿಕತೆಯ ಆಧಾರದ ಮೇಲಿನ ವಿಭಜನೆಯ ವಿರುದ್ಧ ಜನಾಭಿಪ್ರಾಯ ರೂಪಿಸಿದೆ. ಪಕ್ಷದ ಬಹುತೇಕ ನಾಯಕರು ಸರಳ ಜೀವನ ಶೈಲಿ, ಶುದ್ಧಹಸ್ತರೆಂಬ ಭಾವನೆ ಜನಸಾಮಾನ್ಯರಲ್ಲಿದೆ. ಶಾಲಾ ನೌಕರಿ ಹಗರಣ, ಆರ್.ಜಿ.ಕಾರ್ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಅತ್ಯಾ*ಚಾರ-ಕೊಲೆ ಪ್ರಕರಣದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ, ಧರಣಿಯಂಥ ಹೋರಾಟ ರೂಪಿಸಿದೆ.
ದೌರ್ಬಲ್ಯ: ಪ್ರತಿಭಟನೆಗಳು, ಧರಣಿಗಳು ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಪ್ರತಿಫಲ ನೀಡಿಲ್ಲ. 2011ರಲ್ಲಿ ಶೇ.39ರಷ್ಟಿದ್ದ ಮತಪ್ರಮಾಣ ಈಗ ಶೇ.4.73ರಷ್ಟಕ್ಕೆ ತಲುಪಿದೆ. ಪಕ್ಷದ ಸಂಘಟನೆ ದುರ್ಬಲ. ಜನಪ್ರಿಯ ನಾಯಕರ ಕೊರತೆ. ಯುವಕರ ಸೆಳೆಯಲು ವಿಫಲ.
ಅವಕಾಶ: 2024ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಶೇ.5.73ರಷ್ಟು ಮತಗಳಿಸಿದೆ. 2021ಕ್ಕೆ ಹೋಲಿಸಿದರೆ ಮತಪ್ರಮಾಣ ಹೆಚ್ಚಳವಾಗಿದೆ. ಇದು ಪಕ್ಷದಲ್ಲಿ ಭರವಸೆ ಮೂಡಿಸಿದೆ.
ಸವಾಲು: ಈ ಬಾರಿ ಕಾಂಗ್ರೆಸ್ ಬೆಂಬಲವಿಲ್ಲದೆ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿ ಮಾದರಿಯ ಮಸೀದಿಗೆ ಅಡಿಗಲ್ಲು ಹಾಕಿ ವಿವಾದ ಸೃಷ್ಟಿಸಿದ್ದ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಜತೆಗಿನ ಸಖ್ಯ ಉಲ್ಟಾ ಹೊಡೆಯಬಹುದು.
ಕೇರಳ ತ್ರಿಕೋನ ಹೋರಾಟದ ಭೂಮಿ; ಯಾರ ಬಲ, ದೌರ್ಬಲ್ಯ, ಅವಕಾಶ, ಸವಾಲುಗಳು ಏನೇನು?
ಕೇರಳದ ತ್ರಿಕೋನ ಚುನಾವಣಾ ಹೋರಾಟದಲ್ಲಿ ಬಿಜೆಪಿ, ಯುಡಿಎಫ್ ಮತ್ತು ಎಲ್‌ಡಿಎಫ್ ಪಕ್ಷಗಳ ಬಲ, ದೌರ್ಬಲ್ಯ, ಅವಕಾಶಗಳು ಮತ್ತು ಸವಾಲುಗಳನ್ನು ಈ ಲೇಖನ ವಿಶ್ಲೇಷಿಸುತ್ತದೆ.
ಬಿಜೆಪಿ
ಬಲ: ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಚೊಚ್ಚಲ ಜಯದಿಂದ ಪಕ್ಷಕ್ಕೊಂದು ಬಲವಾದ ನೆಲೆ ಸೃಷ್ಟಿ. ಪ್ರಧಾನಿ ಮೋದಿ ವರ್ಚಸ್ಸು ಕೂಡ ಮತದಾನದ ಮೇಲೆ ಧನಾತ್ಮಕ ಪರಿಣಾಮ ಬೀರುವ ನಿರೀಕ್ಷೆ. ಭರ್ಜರಿ ಪ್ರಚಾರದ ಸಾಮರ್ಥ್ಯ.
ದೌರ್ಬಲ್ಯ: ರಾಜ್ಯಾಡಳಿತದ ಮೇಲೆ ದಶಕಗಳಿಂದ ಹಿಡಿತ ಹೊಂದಿರುವ ವಿಪಕ್ಷಗಳ ಎದುರು ಸೆಣಸುವ ದೊಡ್ಡ ಸವಾಲು. ಕೇಂದ್ರದ ಬಿಜೆಪಿ ಸರ್ಕಾರದಿಂದ ಕೇರಳಕ್ಕೆ ಅನ್ಯಾಯ ಎಂಬ ಆಕ್ರೋಶವೂ ದೊಡ್ಡ ಪೆಟ್ಟು.
ಅವಕಾಶ: ಯುವಕರು, ಕೆಲ ಸಮುದಾಯ ಒಗ್ಗೂಡಿಸಬಹುದು. ಇತ್ತೀಚೆಗೆ ಮಿತ್ರಕೂಟ ಸೇರಿದ ಟ್ವೆಂಟ್ 20 ಪಕ್ಷದಿಂದಾಗಿ ಇದು ಸಾಧ್ಯ. ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಮತದಾರರ ಮನವೊಲಿಸಬಹುದು.
ಸವಾಲು: ವಿವಿಧ ಸಮುದಾಯ ಒಗ್ಗೂಡಿಸುವುದು ಕಷ್ಟ. ಸಾಂಪ್ರದಾಯಿಕವಾಗಿ ತಮ್ಮ ಎದುರಾಳಿಗಳ ಪರವಾಗಿರುವವರ ಸೆಳೆವುದು ಸುಲಭವಲ್ಲ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕ್ರೈಸ್ತರ ಮೇಲಿನ ದಾಳಿಗಳ ವ್ಯತಿರಿಕ್ತ ಪರಿಣಾಮ ಇಲ್ಲಿ ಪ್ರತಿಫಲಿಸುವ ಸಾಧ್ಯತೆಯಿದೆ.
ಯುಡಿಎಫ್
ಬಲ: ಆಡಳಿತಾರೂಢ ಸರ್ಕಾರದ ವಿರುದ್ಧದ ಅಲೆಯ ಲಾಭ. ಉಪಚುನಾವಣೆಗಳಲ್ಲಿನ ಗೆಲುವು, 2024ರ ಲೋಕಸಭಾ ಚುನಾವಣೆಯ ಜಯ.ವಿವಾದ ಹಾಗೂ ಆಂತರಿಕ ಕಲಹ ರಹಿತವಾಗಿರುವ ಕಾರಣ ಬಲ ಇಮ್ಮಡಿ.
ದೌರ್ಬಲ್ಯ: ಮಿತ್ರಕೂಟದ ಭಾಗವಾಗಿರುವ ಕಾಂಗ್ರೆಸ್‌ನಲ್ಲಿ ಆಂತರಿಕ ಗುಂಪುಗಾರಿಕೆಯಿಂದ ಒಳಗೊಳಗೇ ಪೆಟ್ಟು. ಮುಖ್ಯಮಂತ್ರಿಯೆಂದು ಬಿಂಬಿಸಲು ಪ್ರಭಾವಿ ಮುಖದ ಕೊರತೆ.
ಅವಕಾಶ: ಮುಸಲ್ಮಾನ, ಕ್ರೈಸ್ತರಂತಹ ಅಲ್ಪಸಂಖ್ಯಾತರ ಮತಗಳನ್ನು ಆಕರ್ಷಿಸಬಹುದು. ರಾಜ್ಯದಲ್ಲಿ ಬಿಜೆಪಿ ಪ್ರಭಾವ ವೃದ್ಧಿಯಿಂದ ಹಿಂದೂ ಮತಗಳ ವಿಭಜನೆಯ ಲಾಭ. ಶಬರಿಮಲೆ ಚಿನ್ನ ಕಳವು ಪ್ರಕರಣ ಬಳಸಿ ಸರ್ಕಾರದ ವಿರುದ್ಧ ಪ್ರಚಾರಕ್ಕೆ ಅವಕಾಶ.
ಸವಾಲು: ಅಭಿವೃದ್ಧಿ ತೋರಿಸಿ ಎಲ್‌ಡಿಎಫ್ ಮಾಡುತ್ತಿರುವ ಪ್ರಚಾರದತ್ತ ಮತದಾರರು ಒಲಿಯುವ ಸಂಭವ. ಜಮಾತೆ ಇಸ್ಲಾಮಿ ಜತೆ ಕೈಜೋಡಿಸಿರುವುದರಿಂದ ಹಿಂದೂ ಮತಗಳು ಬೀಳದೇ ಇರಬಹುದು. ಹಿಂದುಳಿದ ವರ್ಗಗಳನ್ನು ಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ವಿಫಲ. ತಿರುವನಂತಪುರಂ, ಪಟ್ಟಣಂತಿಟ್ಟ, ಆಲಪ್ಪುಳದಲ್ಲಿ ಬಿಜೆಪಿ ಪ್ರಭಾವ ವೃದ್ಧಿಯೂ ಮಾರಕ. ಕಾಂಗ್ರೆಸ್‌ನ ಉಚ್ಛಾಟಿತ ಶಾಸಕ ರಾಹುಲ್ ಮಮಕೂಟತಿಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಕಪ್ಪುಚುಕ್ಕಿ.
ಎಲ್‌ಡಿಎಫ್
ಬಲ: ವಿವಿಧ ಅಭಿವೃದ್ಧಿ ಯೋಜನೆ ಮುಂದಿಟ್ಟು ಜನಪರ ಸರ್ಕಾರವೆಂದು ಬಿಂಬಿಸಿಕೊಳ್ಳಬಹುದು. ಈ ಬಾರಿಯ ಬಜೆಟ್ ಕೂಡ ಅನೇಕ ಕಲ್ಯಾಣ ಯೋಜನೆಗಳನ್ನು ಒಳಗೊಂಡಿದ್ದರಿಂದ ಮತ ಸೆಳೆಯಲು ಸುಲಭ.
ದೌರ್ಬಲ್ಯ: ಕಲ್ಯಾಣ ಯೋಜನೆಗಳ ಹೊರತಾಗಿಯೂ ಸ್ಥಳೀಯ ಚುನಾವಣೆಯಲ್ಲಿ ಗೆಲುವಿಲ್ಲ. ಶಬರಿಮಲೆ ದೇವಸ್ಥಾನದಿಂದ ಚಿನ್ನ ನಾಪತ್ತೆ ಪ್ರಕರಣದಲ್ಲಿ ಸಿಪಿಎಂ ನಾಯಕರ ಹೆಸರು ತಳುಕು ಹಾಕಿಕೊಂಡಿರುವುದು ಹಿನ್ನಡೆಗೆ ಕಾರಣವಾದೀತು. ಕೂಟದ ಒಳಗೇ ಒಡಕು.
ಅವಕಾಶ: ಶಬರಿಮಲೆ ಪ್ರಕರಣದ ಆರೋಪಿಗಳು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಜತೆ ಕಾಣಿಸಿಕೊಂಡದ್ದನ್ನು ದಾಳವಾಗಿ ಬಳಸಬಹುದು. ರಾಹುಲ್ ಮಮಕೂಟತಿಲ್ ವಿರುದ್ಧದ ಆರೋಪವೂ ಅಸ್ತ್ರವಾಗಿ ಬಳಕೆಯಾಗಬುದು.
ಸವಾಲು: ಸಿಪಿಐ(ಎಂ) ಮತ್ತು ಸಿಪಿಐ ನಡುವೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ. ಪ್ರತಿಪಕ್ಷಗಳು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲಿ ರಾಜ್ಯ ಸಾರಿಗೆ ಸಚಿವ ಕೆ. ಬಿ. ಗಣೇಶ್ ಕುಮಾರ್‌ರ ಪತ್ನಿ ಮಾಡಿರುವ ದಾಂಪತ್ಯ ದ್ರೋಹದ ಆರೋಪದಿಂದ ಪೆಟ್ಟು ಬೀಳಬಹುದು. ವಯನಾಡು, ಇಡುಕ್ಕಿಯಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಳದಿಂದ ಜನರಲ್ಲಿ ಅಸಮಾಧಾನ.
ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್ ಬಲಾಬಲದ ರಹಸ್ಯವೇನು? ವೋಟ್ ಬ್ಯಾಂಕ್ ಆಗುತ್ತಾ ಜುಬೀನ್ ಗರ್ಗ್ ಸಾವು?
ಬಿಜೆಪಿ
ಬಲ: ದಶಕಕ್ಕೂ ಹೆಚ್ಚು ಕಾಲ ಆಳ್ವಿಕೆ. ಅನೇಕ ಜನಕಲ್ಯಾಣ ಯೋಜನೆಯಿಂದ ಪಟ್ಟಭದ್ರ. ನಕ್ಸಲ್ ಶರಣಾಗತಿ ಬಹುದೊಡ್ಡ ಸಾಧನೆ. ಸಿಎಂ ಹಿಮಾಂತ ಬಿಸ್ವ ಶರ್ಮಾ ವರ್ಚಸ್ಸು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಪ್ರಚಾರದ ಬಲ.
ದೌರ್ಬಲ್ಯ: ಪ್ರಗತಿ ಕಾಣದ ಪ್ರದೇಶಗಳಲ್ಲಿ ಆಡಳಿತ ವಿರೋಧಿ ಅಲೆಯ ಆತಂಕ. ಮನೆ ತೆರವು ಕ್ರಮದಿಂದ ಬಂಗಾಳಿ ಮುಸಲ್ಮಾನರ ಮತ ನಷ್ಟ. ಸಿಎಂ ಶರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪದ ಕಳಂಕ.
ಅವಕಾಶ: ವಿಪಕ್ಷ ಛಿದ್ರಗೊಂಡಿರುವುದರ ಲಾಭ. ಸ್ತ್ರೀಯರು, ಮಕ್ಕಳು, ಹಿಂದುಳಿದವರ ಪರ ಯೋಜನೆಗಳು ಹಾಗೂ ಅಕ್ರಮ ವಲಸಿಗರ ವಿರುದ್ಧದ ಕಠಿಣ ಕ್ರಮದಿಂದ ಬೆಂಬಲದ ನಿರೀಕ್ಷೆ.
ಸವಾಲು: ಟಿಕೆಟ್ ಸಿಗದ ಆಕಾಕ್ಷಿಗಳ ಅಸಮಾಧಾನ ನಿಭಾಯಿಸಬೇಕು. ಮುಸಲ್ಮಾನರ ವಿರುದ್ಧದ ಸಿಎಂ ವಾಗ್ದಾಳಿಯಿಂದ ಆ ಸಮುದಾಯದ ಮತ ಕೈತಪ್ಪಬಹುದು.
ಕಾಂಗ್ರೆಸ್:
ಬಲ: ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಯಿಂದ ಲಾಭ. ಬಿಜೆಪಿ ವಿರುದ್ಧದ ಬಂಗಾಳಿ ಮುಸಲ್ಮಾನರ ಕೋಪವೂ ವರ. ಬಿಜೆಪಿ ವಿರುದ್ಧ ಜೋರ್ಹಾಟ್‌ನಿಂದ ಗೆದ್ದ ಗೌರವ್ ಗೊಗೋಯ್ ಸಿಎಂ ಮುಖವೆಂದು ಪ್ರಚಾರ. ಸಿಎಂ, ಪರಿವಾರದ ಭ್ರಷ್ಟಾಚಾರ ಆರೋಪದ ಅಸ್ತ್ರ.
ದೌರ್ಬಲ್ಯ: ಬಿಜೆಪಿಗೆ ಬಿಸ್ವಾ ವಲಸೆ ಬಳಿಕ ರಾಜ್ಯದಲ್ಲಿ ಕುಂದಿದ ಶಕ್ತಿ. ಒಳ-ಒಡಕುಗಳಿಂದ ಹಿನ್ನಡೆ ಸಂಭವ. ಗೊಗೋಯ್ ಪತ್ನಿಗೆ ಪಾಕಿಸ್ತಾನದ ನಂಟು ಆರೋಪ.
ಅವಕಾಶ: ಸಿಎಂ ವಿರುದ್ಧದ ಭ್ರಷ್ಟಾಚಾರ ಆರೋಪ, ಅಲ್ಪಸಂಖ್ಯಾತರು ಎದುರಿಸಿಸ ಮಾನವೀಯ ಬಿಕ್ಕಟ್ಟು, 6 ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸ್ಥಾನ ನೀಡುವಲ್ಲಿ ಸರ್ಕಾರದ ವಿಫಲತೆಯ ಉಲ್ಲೇಖ. ಎನ್‌ಡಿಎ ಕೂಟದ ಅತೃಪ್ತರಿಗೆ ಗಾಳ.
ಸವಾಲು: ಅಸ್ಸಾಮಿಗರ ಕಡೆಗಣಿಸಿ ಬೆಂಗಾಲಿ ಮುಸಲ್ಮಾನರನ್ನೇ ಮತಬ್ಯಾಂಕ್ ಎಂದು ಪರಿಗಣಿಸಿದರೆ ಹೆಚ್ಚು ವೋಟ್ ಗಳಿಕೆ ಕಷ್ಟ. ಪ್ರಮುಖ ನಯಕರು ಪಕ್ಷ ತೊರೆಯುತ್ತಿರುವುದೂ ಸವಾಲು.
ಪುದುಚೇರಿ
ಎನ್‌ಡಿಎ, ಡಿಎಂಕೆ ಮೈತ್ರಿಕೂಟದ ಸೆಣಸು
ಎಐಎನ್‌ಆರ್‌ಸಿ - ಬಿಜೆಪಿ ಮೈತ್ರಿ
ಬಲ: ಮುಖ್ಯಮಂತ್ರಿ ರಂಗಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳು. ಸಿಎಂ ಕಳಂಕ ರಹಿತ ವ್ಯಕ್ತಿತ, ಸರ್ಕಾರದ ಜನಪ್ರಿಯತೆ.
ದೌರ್ಬಲ್ಯ: ಭ್ರಷ್ಟಾಚಾರ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲ, ಅಪರಾಧ ಪ್ರಕರಣಗಳ ಹೆಚ್ಚಳ. ನಕಲಿ ಔಷಧ ತಯಾರಿಕಾ ಘಟಕ ತಯಾರಿಕೆಯಲ್ಲಿ ರಾಜಕೀಯ ನಾಯಕರ ಕೈವಾಡ. ಎಐಎಡಿಂಕೆಯೂ ಸೀಟು ಹಂಚಿಕೆಗೆ ಕಾಯುತ್ತಿರುವುದು.
ಅವಕಾಶ: : ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಪಾಲುದಾರನಾಗಿರುವುದಿಂದ ಅಭಿವೃದ್ಧಿಗೆ ಕೇಂದ್ರದ ಅವಲಂಬನೆ
ಸವಾಲು: ರಾಜ್ಯ ಸ್ಥಾನಮಾನ ಸಿಗದಿರುವುದು. ಚುನಾಯಿತ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಅಧಿಕಾರದ ಕೊರತೆ. ಏಕೈಕ ಮಹಿಳಾ ಸಚಿವೆ ಚಂದ್ರಿರಾ ಪ್ರಿಯಂಗ ಅವರನ್ನು ತೆಗೆದು ಹಾಕಿರುವುದು. ಕೇಂದ್ರದ ನಿರಂತರ ಅವಲಂಬನೆಯೂ ಸವಾಲು. ಎನ್‌ಟಿಕೆ, ಎಲ್‌ಜೆಕೆ, ಟಿವಿಕೆ ಸ್ಪರ್ಧೆಯೊಡ್ಡಬಹುದು.
ಡಿಎಂಕೆ ಕೂಟ
ಬಲ: ಕಾಂಗ್ರೆಸ್ ಗಟ್ಟಿಯಾಗಿ ನೆಲೆಯೂರಿದ್ದೂ ತನ್ನ ಬಲ ವಿಸ್ತರಿಸಿಕೊಳ್ಳುತ್ತಿದೆ. ಡಿಎಂಕೆಯೂ ತಳಮಟ್ಟದಲ್ಲಿ ಬೆಳೆಯುತ್ತಿದೆ. ಪ್ರಚಾರದಲ್ಲಿಯೂ ಹಿಂದೆ ಬಿದ್ದಿಲ್ಲ.
ದೌರ್ಬಲ್ಯ: ಮೈತ್ರಿ ನೇತೃತ್ವ ಯಾರು ವಹಿಸಬೇಕು, ಸಿಎಂ ಅಭ್ಯರ್ಥಿ ಯಾರಾಗ್ತಾರೆ ಎನ್ನುವುದರಲ್ಲಿ ಕಾಂಗ್ರೆಸ್ ಡಿಎಂಕೆ ಒಮ್ಮತಕ್ಕೆ ಬಂದಿಲ್ಲ. ಸೀಟು ಹಂಚಿಕೆ ಕುರಿತು ಸ್ಪಷ್ಟತೆ ಇಲ್ಲ.
ಅವಕಾಶ: ಅತ್ಯುತ್ತಮ ಪುದುಚೇರಿ ಜಾರಿಗೆ ತರುವಲ್ಲಿನ ಆಡಳಿತ ಸರ್ಕಾರದ ವಿಫಲತೆ, ಆಡಳಿತ ವಿರೋಧಿ ಅಲೆ.
ಸವಾಲು: ಕೈ ಕೆಲವೇ ಕೆಲವು ನಾಯಕರನ್ನು ನೆಚ್ಚಿಕೊಂಡಿರುವುದು. ಮೈತ್ರಿ ಪಕ್ಷ ಡಿಎಂಕೆ ಜತೆಗಿನ ಒಳಜಗಳ. ಸೀಟು ಹಂಚಿಕೆ ಅಂತಿಮ ಹಂತಕ್ಕೆ ಬಾರದಿರುವುದು. ಎನ್‌ಟಿಕೆ, ಎಲ್‌ಜೆಕೆ, ಟಿವಿಕೆ ಸ್ಪರ್ಧೆ ನೀಡುವ ಸಾಧ್ಯತೆ.
ತಮಿಳುನಾಡು
ದ್ರಾವಿಡ ಪಕ್ಷಗಳ ತವರಲ್ಲಿ ಗೆಲ್ಲೋರ್‍ಯಾರು
ಡಿಎಂಕೆ
ಶಕ್ತಿ: ಮುಖ್ಯಮಂತ್ರಿ ಸ್ಟಾಲಿನ್ ವರ್ಚಸ್ಸು. ಹಲವು ಗ್ಯಾರಂಟಿ ಯೋಜನೆಗಳು. ಕಾಂಗ್ರೆಸ್, ಎಂಡಿಎಂಕೆ, ವಿಸಿಕೆ ಮತ್ತು ಎಡಪಕ್ಷಗಳ ಗಟ್ಟಿ ಬೆಂಬಲ. ಕೇಂದ್ರದ ಬಿಜೆಪಿ ವಿರುದ್ಧ ಸಡ್ಡು.
ದೌರ್ಬಲ್ಯ: ಕುಟುಂಬ ರಾಜಕಾರಣದ ಆರೋಪ. ಹಿಂದೂ ಧರ್ಮದ ಕುರಿತ ಡಿಸಿಎಂ ಉದಯನಿಧಿಯ ವಿವಾದಾತ್ಮಕ ಹೇಳಿಕೆ, ಸಚಿವರ ವಿರುದ್ಧದ ಭ್ರಷ್ಟಾಚಾರದ ಆರೋಪ.
ಅವಕಾಶ: ತಮಿಳುನಾಡಿಗೆ ಉದ್ಯಮಗಳನ್ನು ಸೆಳೆಯುವಲ್ಲಿ ಯಶಸ್ವಿ, ಉದ್ಯೋಗ ಸೃಷ್ಟಿಯ ಭರವಸೆ. ತಮಿಳು ಹೆಗ್ಗುರುತಿಗೆ ಆದ್ಯತೆ, ರಾಜ್ಯಗಳಿಗೆ ಸ್ವಾಯತ್ತೆಗೆ ಒತ್ತಾಯ
ಸವಾಲು: ರಾಜಕೀಯಕ್ಕೆ ವಿಜಯ್‌ರ ಪ್ರವೇಶ. ನೀಟ್ ಪರೀಕ್ಷೆ ರದ್ದು, ಪೆಟ್ರೋಲ್ ಸಬ್ಸಿಡಿಯಂತದ ಬೇಡಿಕೆ ಈಡೇರಿಕೆಯಲ್ಲಿ ವೈಫಲ್ಯ.
ಎಐಎಡಿಎಂಕೆ
ಶಕ್ತಿ: ಪನ್ನೀರ್‌ಸೆಲ್ವಂ ಡಿಎಂಕೆಗೆ ಸೇರ್ಪಡೆಯಾದ ಬಳಿಕ ಪಳನಿಸ್ವಾಮಿಯೇ ಈಗ ಪಕ್ಷದಲ್ಲಿ ಪ್ರಶ್ನಾತೀತ ನಾಯಕ. ಪಕ್ಷದ ಬಲಿಷ್ಠವಾದ ಸಂಘಟನಾ ಶಕ್ತಿ. ಬೂತ್‌ಮಟ್ಟದಲ್ಲೂ ಚಟುವಟಿಕೆಯಿಂದಿರುವ ಕಾರ್ಯಕರ್ತರು. ಹಲವು ಗ್ಯಾರಂಟಿ ಘೋಷಣೆ. ಬಿಜೆಪಿ, ಪಿಎಂಕೆ, ಎಎಂಎಂಕೆ ಪಕ್ಷದೊಂದಿಗಿನ ಮೈತ್ರಿಯಿಂದ ಬಲಹೆಚ್ಚಳ.
ದೌರ್ಬಲ್ಯ: ಪನ್ನೀರ್‌ಸ್ವಾಮಿ ಡಿಎಂಕೆ ಸೇರ್ಪಡೆಯಾಗಿದ್ದರಿಂದ ಥೇನೈ ಜಿಲ್ಲೆ ಮತ್ತು ಮುಕ್ಕಾಲತ್ತೋರ್ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿರುವ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹೊಡೆತ. ಪ್ರೇಮಲತಾ ವಿಜಯಕಾಂತ್ ನೇತೃತ್ವದ ಡಿಎಂಡಿಕೆ ಪಕ್ಷವು ಡಿಎಂಕೆ ಕೂಟಕ್ಕೆ ಸೇರ್ಪಡೆಯಿಂದ ಹಿನ್ನಡೆ ಸಾಧ್ಯತೆ.
ಅವಕಾಶ: ಬಿಜೆಪಿ ಸೇರಿದಂತೆ ಇತರೆ ಕೆಲ ಪಕ್ಷಗಳೊಂದಿಗಿನ ಮೈತ್ರಿಯಿಂದ ಹಲವು ಸಮುದಾಯಗಳ ಮತ ಖಚಿತ. ಪಳನಿಸ್ವಾಮಿಯವರ ಉತ್ತಮ ನಾಯಕತ್ವ. ಕಾವೇರಿ ಸಮಸ್ಯೆಯಲ್ಲಿ ರಾಜ್ಯದ ಪರ. ಮೋದಿ, ಶಾ ಪ್ರಚಾರ.
ಸವಾಲು: ಹೂಡಿಕೆ ಸೆಳೆವಲ್ಲಿ ಡಿಎಂಕೆ ಮೇಲುಗೈ ಹಾಗೂ ಸಿಎಂ ಸ್ಟಾಲಿನ್ ವರ್ಚಸ್ಸು. ಪಕ್ಷದ ಹಲವರು ಡಿಎಂಕೆಗೆ. ಯುವ ಮತದಾರರಿಗೆ ವಿಜಯ್‌ರ ಟಿವಿಕೆಯತ್ತ ಸೆಳೆತ.
ಟಿವಿಕೆ
ಶಕ್ತಿ: ನಟ ವಿಜಯ್ ಅವರ ಚರಿಷ್ಮಾ, ಬಾರೀ ಅಭಿಮಾನಿ ಬಳಗ, ಯುವಮತದಾರರಿಂದ ಸಿಗುತ್ತಿರುವ ಬೆಂಬಲ. ಸಾಮಾಜಿಕ ನ್ಯಾಯ, ದ್ವಿಭಾಷಾ ನೀತಿಯಂಥ ಸಿದ್ಧಾಂತ. ಹಲವು ಗ್ಯಾರಂಟಿ ಘೋಷಣೆ.
ದೌರ್ಬಲ್ಯ: ರಾಜಕೀಯದ ಜ್ಞಾನದ ಕೊರತೆ, ಸಿನಿಮಾ ಮಾದರಿಯಲ್ಲಿ ಮಾಡುವ ಭಾಷಣ ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳು. ಏಕವ್ಯಕ್ತಿ ಪಕ್ಷ, ಪಕ್ಷಕ್ಕೆ ನಟ ವಿಜಯ್ ಅವರೊಬ್ಬರೇ ಸ್ಟಾರ್ ಪ್ರಚಾರಕ. ರ್‍ಯಾಲಿ ವೇಳೆ ಅಭಿಮಾನಿಗಳಿಂದ ಕಿರಿಕಿರಿ. ಕಣ್ಣೂರು ಕಾಲ್ತುಳಿತದಂಥ ಘಟನೆ. ಅವಕಾಶ: ರಾಜ್ಯದಲ್ಲಿ ಡಿಎಂಕೆ, ಯುವ ಮತದಾರರು, ಟೆಕ್ಕಿ ಸಮುದಾಯದವರನ್ನು ಸೆಳೆಯುವಲ್ಲಿ ಪಕ್ಷಕ್ಕೆ ಯಶಸ್ಸು ಸಿಗುತ್ತಿದೆ.
ಅವಕಾಶ: ದ್ರಾವಿಡೇತರ ಪಕ್ಷದ ಅನುಪಸ್ಥಿತಿಯ ನಿರ್ವಾತವನ್ನು ತುಂಬಬಹುದು. ಯುವಕರನ್ನು ಸೆಳೆಯಲು ಶಕ್ತ.
ಸವಾಲು: ಪ್ರಚಾರದ ವೇಳೆ ಕರೂರು ಕಾಲ್ತುಳಿತ ಪ್ರಕರಣ ಕಪ್ಪುಚುಕ್ಕಿ. ಏಕಾಂಗಿ ಸ್ಪರ್ಧೆಯಿಂದಾಗಿ ಅಧಿಕಾರ ದೂರ. ಸ್ಥಾಪಿತ ಪಕ್ಷಗಳಾದ ಡಿಎಂಕೆ, ಎಐಎಡಿಎಂಕೆಯಿಂದ ಪ್ರಬಲ ಸ್ಪರ್ಧೆ.


