ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆ ಸಂಬಂಧ ಬಾಧಿತ ಪ್ರದೇಶದ ರೈತರನ್ನೂ ಆಹ್ವಾನಿಸಿ ಜೂ.27ರಂದು ಬಿಡದಿ ಅಥವಾ ಬೈರಮಂಗಲದ ಸಾರ್ವಜನಿಕ ಸ್ಥಳದಲ್ಲಿ ಸಭೆ ನಡೆಸುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಪಕ್ಷದ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಕುಮಾರಸ್ವಾಮಿ, ಬಿಡದಿ ಟೌನ್‌ಶಿಪ್ ಸಂಬಂಧ ಬೀದಿಯಲ್ಲಿ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ನಿಮಗೆ ಧೈರ್ಯವಿದ್ದರೆ ಬೈರಮಂಗಲಕ್ಕೆ ಬನ್ನಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನೇರ ಪಂಥಾಹ್ವಾನ ನೀಡಿದ್ದರು.
ಈ ಪಂಥಾಹ್ವಾನ ಸ್ವೀಕರಿಸಿದ್ದ ಶಿವಕುಮಾರ್, ಈ ಯೋಜನೆ ಕುರಿತು ಚರ್ಚೆಗೆ ನಾನೂ ಸಿದ್ಧ. ಜೂ.26ರಂದು ಬೆಳಗ್ಗೆ 11 ಗಂಟೆಗೆ ನೀವು ಮತ್ತು ನಿಮ್ಮ ತಂಡದ ಐವರು ಪ್ರತಿನಿಧಿಗಳು ವಿಧಾನಸೌಧದ ನನ್ನ ಕಚೇರಿಗೆ ಬನ್ನಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದು ಆಹ್ವಾನಿಸಿದ್ದರು.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ, ನಿಮ್ಮ ಪತ್ರ ನನ್ನ ಕೈಸೇರಿದೆ. ಬಿಡದಿ ಸಮಗ್ರ ಉಪ ನಗರ ಯೋಜನೆ ಅನುಷ್ಠಾನದಿಂದ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಎಂಟು ಗ್ರಾಮಗಳು ಮತ್ತು ಹಾರೋಹಳ್ಳಿ ತಾಲ್ಲೂಕಿನ ಒಂದು ಗ್ರಾಮದ ರೈತರು, ಗ್ರಾಮಸ್ಥರು ಮತ್ತು ಪಾಲುದಾರರು ಹಲವಾರು ಸಮಸ್ಯೆ ಮತ್ತು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ, ಈ ಭಾಗದಲ್ಲಿರುವ ಅಪಾರ ಪರಿಸರ ಸಂಪತ್ತಿಗೆ ಹಾನಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಬಾಧಿತರಿಗೂ ಸಭೆಗೆ ಆಹ್ವಾನ ಕೊಡಿ:
ತಾವು ಪ್ರಸ್ತಾಪಿಸಿರುವ ಸಭೆಯನ್ನು ರಾಮನಗರ ಜಿಲ್ಲೆಯ ಬಿಡದಿ ಅಥವಾ ಬಾಧಿತ ಪ್ರದೇಶವಾದ ಬೈರಮಂಗಲದ ಯಾವುದಾದರೂ ಸಾರ್ವಜನಿಕ ಸ್ಥಳದಲ್ಲಿ ನಡೆಸುವುದು ಸಮಂಜಸ ಎನಿಸುತ್ತದೆ. ಹೀಗಾಗಿ ಯೋಜನೆಯಿಂದ ಬಾಧಿತರಾಗಿರುವ ರೈತರು, ಗ್ರಾಮಸ್ಥರು, ಕೃಷಿ ಕಾರ್ಮಿಕರು, ಹೈನುಗಾರಿಕೆ ಉದ್ಯಮದಲ್ಲಿರುವ ರೈತ ಮಹಿಳೆಯರು, ಸಣ್ಣ ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಬಾಧಿತ ಇತರೆ ಪಾಲುದಾರರಿಗೂ ಈ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಆಗ ಈ ಸಭೆಯಲ್ಲಿ ಮುಕ್ತ ಮನಸ್ಸಿನ ಚರ್ಚೆ ನಡೆಸಿ, ಬಾಧಿತ ವರ್ಗದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶವಾಗುತ್ತದೆ. ಈ ಯೋಜನೆಯ ರಚನೆ ಮತ್ತು ಅನುಷ್ಠಾನದಲ್ಲಿ ನನಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದಾರೆ.
ಜೂ.26 ಬೇಡ, ಜೂ.27ಕ್ಕೆ ಮಾಡಿ:
ವಿಧಾನಸೌಧದಲ್ಲಿ ನಡೆಸಲು ಉದ್ದೇಶಿಸಿರುವ ಸಭೆಗೆ ಬಾಧಿತ ರೈತ ವರ್ಗ, ಗ್ರಾಮಸ್ಥರು ಮತ್ತು ಪಾಲುದಾರರನ್ನು ಆಹ್ವಾನಿಸದೆ ಅವರನ್ನು ಹೊರಗಿಟ್ಟು ಸಭೆ ನಡೆಸುವುದರಿಂದ ಸಭೆ ಫಲಪ್ರದವಾಗುವುದಿಲ್ಲ. ತಾವು ನಿಗದಿಪಡಿಸಿದ ಜೂ.26ರಂದು ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳು ಇವೆ. ಹೀಗಾಗಿ ಉದ್ದೇಶಿತ ಸಭೆಯನ್ನು ಜೂ.27ರಂದು ಬಿಡದಿ ಅಥವಾ ಬೈರಮಂಗಲದ ಸೂಕ್ತ ಸ್ಥಳದಲ್ಲಿ ಆಯೋಜಿಸುವಂತೆ ಕುಮಾರಸ್ವಾಮಿ ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬೆಳಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದ ಎಚ್‌ಡಿಕೆ:
ಬಿಡದಿ ಟೌನ್‌ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ನಿಮ್ಮ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಎಸಿ ರೂಂನಲ್ಲಿ ಕೂತು ಚರ್ಚೆ ಮಾಡುವ ಜಾಯಮಾನ ನನ್ನದಲ್ಲ. ಬೀದಿಯಲ್ಲಿ ನಿಂತು ಬಹಿರಂಗ ಚರ್ಚೆಗೆ ತಯಾರಿಸಿದ್ದೇನೆ. ನಿಮಗೆ ಧೈರ್ಯವಿದ್ದರೆ ಬೈರಮಂಗಲಕ್ಕೆ ಬನ್ನಿ. ಅಲ್ಲೇ ಯೋಜನೆ ಬೇಕೋ ಬೇಡವೋ ಎಂಬುದು ಜನರ ಮುಂದೆ ತೀರ್ಮಾನ ಆಗಲಿ. 500 ದಿನಗಳಿಂದ ಪ್ರತಿಭಟನೆ ಮಾಡುತ್ತಿರುವವರು ಅಸಲಿ ರೈತರೋ ಅಥವಾ ನಕಲಿ ರೈತರೋ ಎಂಬುದು ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ನೇರ ಸವಾಲು ಹಾಕಿದ್ದರು.
ಕುಮಾರಸ್ವಾಮಿ ಪತ್ರದಲ್ಲೇನಿದೆ?
- ನೀವು ವಿಧಾನಸೌಧದಲ್ಲಿ 26ರಂದು ಸಭೆಗೆ ಆಹ್ವಾನ ನೀಡಿದ್ದೀರಿ
- ಆದರೆ ಬಾಧಿತ ರೈತರನ್ನು ಹೊರಗಿಟ್ಟು ಸಭೆ ನಡೆಸಿದರೆ ಫಲಿಸಲ್ಲ
- ನೀವು ಕರೆದಿರುವ ಜೂ.26ಕ್ಕೆ ನನಗೆ ಪೂರ್ವ ನಿಯೋಜಿತ ಸಭೆ ಇವೆ
- ಹೀಗಾಗಿ 26ರ ಬದಲು 27ಕ್ಕೆ ಬೈರಮಂಗಲ ಗ್ರಾಮದಲ್ಲೇ ಸಭೆ ನಡೆಸಿ
- ಬೈರಮಂಗಲದ ಯಾವುದಾದರೂ ಬಹಿರಂಗ ಸ್ಥಳದಲ್ಲಿ ಸಭೆ ಸಮಂಜಸ
- ಸಭೆಯಲ್ಲಿ ರೈತರೂ ಪಾಲ್ಗೊಂಡರೆ ಸಮಸ್ಯೆಗಳಿಗೆ ಪರಿಹಾರ ಸಾಧ್ಯ
- ಯೋಜನೆ ಕುರಿತಂತೆ ನನಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ
