ವಿಶ್ವಕರ್ಮರು ಕಡಿಮೆ ಇದ್ದೇವೆ ಎಂಬ ಭಾವನೆ ನಿಮಗೆ ಬೇಡ. ಎಲ್ಲರಿಗಿಂತ ಕಡಿಮೆ ಆದ್ಯತೆ ಇದೆ, ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ ಎಂಬ ಕೀಳರಿಮೆ ಬೇಡ, ನೀವು ದೇವರನ್ನೇ ಸೃಷ್ಟಿಸುವ ಉನ್ನತ ಸ್ಥಾನದಲ್ಲಿದ್ದೀರಿ ಎಂದು ವಿಶ್ವಕರ್ಮ ಜನಾಂಗದ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಶ್ವಕರ್ಮರು ಕಡಿಮೆ ಇದ್ದೇವೆ ಎಂಬ ಭಾವನೆ ನಿಮಗೆ ಬೇಡ. ಎಲ್ಲರಿಗಿಂತ ಕಡಿಮೆ ಆದ್ಯತೆ ಇದೆ, ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ ಎಂಬ ಕೀಳರಿಮೆ ಬೇಡ, ನೀವು ದೇವರನ್ನೇ ಸೃಷ್ಟಿಸುವ ಉನ್ನತ ಸ್ಥಾನದಲ್ಲಿದ್ದೀರಿ ಎಂದು ವಿಶ್ವಕರ್ಮ ಜನಾಂಗದ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದರು.ಕರ್ನಾಟಕ ವಿಶ್ವಕರ್ಮ ಮಹಾಸಭಾ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಮೂರನೇ ವರ್ಷದ ವಧು-ವರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಎಲ್ಲರೂ ನನ್ನನ್ನು ಕಲ್ಲು ಬಂಡೆ ಎನ್ನುತ್ತಾರೆ. ಈ ಕಲ್ಲುಬಂಡೆಗೆ ಆಕೃತಿ ಕೊಡುವವರು ನೀವು. ನೀವು ಆಕೃತಿ ಕೊಟ್ಟ ಮೇಲೆ ಅದಕ್ಕೊಂದು ಸಂಸ್ಕೃತಿ ಬರುತ್ತದೆ. ಇದರಿಂದಾಗಿ ನೀವು ಉನ್ನತ ಸ್ಥಾನದಲ್ಲಿದ್ದೀರಿ. ನೀವು ಕಡಿಮೆ ಎಂದುಕೊಂಡರೆ, ಒಂದೊಂದು ಹುಲ್ಲು ಕಡ್ಡಿಯನ್ನೂ ಲೆಕ್ಕಕ್ಕೆ ಸೇರಿಸಿದರೆ ಅದೊಂದು ಗುಡ್ಡೆಯಾಗಿ ಬೆಂಕಿ ಹೊತ್ತಿಕೊಳ್ಳಲು ಸಹಕಾರಿಯಾಗುತ್ತದೆ. ಹಾಗಾಗಿ ಯಾರೂ ಕಡಿಮೆ ಎಂದುಕೊಳ್ಳಬಾರದು ಎಂದರು.ವಧು-ವರರ ಸಮಾವೇಶ ಕಷ್ಟದ ಕೆಲಸ. ಅದನ್ನು 3ನೇ ವರ್ಷವೂ ಮಾಡುತ್ತಿರುವುದು ಶ್ಲಾಘನೀಯ. ಅಂತರ್ಜಾತಿ ವಿವಾಹಗಳು ಹೆಚ್ಚುತ್ತಿವೆ. ಆದರೆ ಅಂತರ್ಜಾತಿ ವಿವಾಹಗಳಲ್ಲಿ ಮಗು ಹುಟ್ಟಿದರೆ ಯಾವುದಾದರೂ ಒಂದು ಧರ್ಮ ಬೇಕೇ ಬೇಕು. ಆದ್ದರಿಂದ ಇಂತಹ ವಧು-ವರರ ಸಮಾವೇಶ ಉತ್ತಮ ಮಾರ್ಗ ಎಂದು ಹೇಳಿದರು.
ಇದಕ್ಕೂ ಮುನ್ನ ರಾಜ್ಯ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಮಾತನಾಡಿ, ವಿಶ್ವಕರ್ಮ ಜನಾಂಗಕ್ಕೆ ಮೀಸಲಾತಿ ಅಗತ್ಯ. ಹಿಂದುಳಿದ ವರ್ಗಗಳಲ್ಲಿರುವ ಮೀಸಲಾತಿಯಲ್ಲೂ ಒಳಮೀಸಲಾತಿ ಕಲ್ಪಿಸಬೇಕು ಎಂಬುದೂ ಸೇರಿ ಜನಾಂಗದ ಆರು ಮಠಗಳಿಗೆ ತಲಾ 25 ಲಕ್ಷ ರು. ಅನುದಾನ ನೀಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು.ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ಹಿಂದುಳಿದ ನಾಯಕರಲ್ಲಿ ಅತ್ಯಂತ ಬದ್ಧತೆ ಇರುವ, ತನ್ನ ಸಮಾಜಕ್ಕಾಗಿ ಹೋರಾಡುವ ನಾಯಕ ಕೆ.ಪಿ.ನಂಜುಂಡಿ, ಇತ್ತೀಚೆಗೆ ರಾಜ್ಯದಲ್ಲಿ ಹಿಂದುಳಿದ ವರ್ಗದ ಪ್ರತಿಷ್ಠಿತ ರಾಜಕೀಯ ಕುಟುಂಬದವರ ಮಕ್ಕಳು ಜನಾಂಗದ ಮಹಿಳೆ ಮೇಲೆ ಅತ್ಯಾಚಾರ ಮಾಡಿ ತಪ್ಪಿಸಿಕೊಳ್ಳುತ್ತಿರುವಾಗ ಕೆ.ಪಿ.ನಂಜುಂಡಿ ಬದ್ಧತೆಯಿಂದ ಹೋರಾಟ ಮಾಡಿ ಅವರಿಗೆ ಜೈಲು ಶಿಕ್ಷೆ ಹಾಗೂ ಹೈಕೋರ್ಟ್‌ನ ಮಹತ್ವದ ಆದೇಶ ಹೊರಬರುವಂತೆ ನೋಡಿಕೊಂಡರು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜನಾಂಗದ ಮದ್ದೂರು ಬಸವರಾಜ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಲೇಬಗಿರಿ ನಾಗಮೂರ್ತೀಂದ್ರ ಸ್ವಾಮೀಜಿ, ಮಧುಗಿರಿಯ ನಿಟ್ಟರಹಳ್ಳಿ ನೀಲಕಂಠಾಚಾರ್ಯ ಸ್ವಾಮೀಜಿ, ಚನ್ನಗಿರಿ ವಡ್ನಾಳ್ ಮಠದ ಶಂಕರಾತ್ಮಾನಂದ ಸ್ವಾಮೀಜಿ, ಹುಲಗೂರು ಮಠದ ಮೌನೇಶ್ವರ ಸ್ವಾಮೀಜಿ, ಗಂಗಾವತಿಯ ಗಣೇಶ್ವರಾನಂದ ಸ್ವಾಮೀಜಿ, ಯಾದಗಿರಿ ಕಾಳಬೆಳಗುಂದಿ ಉತ್ತಪ್ಪ ತಾತಯ್ಯ ಸ್ವಾಮೀಜಿ ಉಪಸ್ಥಿತರಿದ್ದರು.ಜನಿವಾರ ಗದ್ದಲ ಒಪ್ಪಲ್ಲ:ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಕಿತ್ತಿರುವುದನ್ನು ನಾನು ಒಪ್ಪುವುದಿಲ್ಲ. ನಾವು ಉಡುದಾರ ಹಾಕಿರುತ್ತೇವೆ ಅದನ್ನೂ ಕೀಳುತ್ತಾರೆಯೇ? ಜನಿವಾರ ಅವರವರ ಧರ್ಮ, ಸಂಪ್ರದಾಯ. ಅದಕ್ಕೆ ಧಕ್ಕೆಯಾಗಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.