ಬೆಂಗಳೂರು : ‘ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸಮರ್ಥ್ ಮಲ್ಲಿಕಾರ್ಜುನ್, ಬಾಗಲಕೋಟೆ ಕ್ಷೇತ್ರದಿಂದ ಉಮೇಶ್ ಮೇಟಿ ಅವರಿಗೆ ಒಮ್ಮತದ ತೀರ್ಮಾನದಂತೆ ಟಿಕೆಟ್ ನೀಡಿದ್ದು, ಒಗ್ಗಟ್ಟಿನಿಂದ ಚುನಾವಣೆ ಮಾಡಿ ಎರಡೂ ಕ್ಷೇತ್ರ ಗೆಲ್ಲಿಸಿಕೊಂಡು ಬರುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತರು ಟಿಕೆಟ್ ಕೇಳಿದ್ದರು. ಜನಸಂಖ್ಯೆ ಆಧಾರದ ಮೇಲೆ ಕೇಳಿರುವುದರಲ್ಲಿ ತಪ್ಪಿಲ್ಲ. ನಾನು, ಮುಖ್ಯಮಂತ್ರಿ, ಜಮೀರ್ ಅಹಮದ್, ನಾಸೀರ್ ಹುಸೇನ್, ಸಲೀಂ ಅಹ್ಮದ್, ಹುಸೇನ್, ಹ್ಯಾರಿಸ್, ಜಬ್ಬಾರ್ ಅವರು ಎಲ್ಲ ಅಲ್ಪಸಂಖ್ಯಾತ ನಾಯಕರು, ಎಐಸಿಸಿ ಕಾರ್ಯದರ್ಶಿಗಳ ಜತೆ ಮಾತನಾಡಿ ಕೊನೆಗೆ ಒಮ್ಮತದ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಅಲ್ಪಸಂಖ್ಯಾತ ನಾಯಕರಿಂದ ಏನಾದರೂ ಬೇಡಿಕೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೇಳುತ್ತಾರೆ, ಪಕ್ಷ ಏನು ಹೇಳುತ್ತದೆಯೋ ಅದಕ್ಕೆ ಮಲ್ಲಿಕಾರ್ಜುನ್ ಅವರೂ ಬದ್ಧರಾಗಿದ್ದಾರೆ. ಕನಕಪುರದಲ್ಲಿ ನಿಲ್ಲಬೇಡ ಅಂದ್ರೆ ನಾನೂ ನಿಲ್ಲಲ್ಲ. ಆಸೆ ಪಡುವುದು ತಪ್ಪಲ್ಲ. ಮೇಟಿ ಕುಟುಂಬದಲ್ಲಿ ನನಗೆ ಮಲ್ಲಿಕಾರ್ಜುನ ಅವರಿಗೆ ನೀಡುವುದಕ್ಕೆ ಆಸೆಯಿತ್ತು. ಮೇಟಿ ಕುಟುಂಬದಲ್ಲಿಯೇ ಹಲವರಿಗೆ ಆಸೆ ಇರುವಾಗ ಬೇರೆ ಕ್ಷೇತ್ರದಲ್ಲೂ ಸಹಜವಲ್ಲವೇ ಎಂದರು.
ಬಿಜೆಪಿ, ಜೆಡಿಎಸ್‌ನಲ್ಲೇ ಒಮ್ಮತ ಇಲ್ಲ. ಇಬ್ಬರು ಗಲಾಟೆ ಮಾಡಿದ್ದಕ್ಕೆ ಮೂರನೆಯವರಿಗೆ ನೀಡಿದ್ದಾರೆ. ದಾವಣಗೆರೆಗೆ ಶಿವಶಂಕರಪ್ಪ ಅವರು ಮಾಡಿರುವ ಸೇವೆ, ಅಭಿವೃದ್ಧಿ ಅತ್ಯುತ್ತಮವಾಗಿದೆ. ಬೆಂಗಳೂರು ನಗರಕ್ಕಿಂತ ಚೆನ್ನಾಗಿ ದಾವಣಗೆರೆಯಿದೆ. ಹೀಗಾಗಿ ಎಲ್ಲವನ್ನೂ ಪರಿಗಣಿಸಿ ಟಿಕೆಟ್ ನೀಡಲಾಗಿದೆ ಎಂದು ಪ್ರತಿಪಾದಿಸಿದರು.
ಜಬ್ಬಾರ್ ಮೂರು ಬಾರಿ ಎಂಎಲ್‌ಸಿ:
ಶಿವಶಂಕರಪ್ಪ ಅವರೇ ನನ್ನ ನಂತರ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಎಂದಿದ್ದರಂತೆ ಎಂಬ ಪ್ರಶ್ನೆಗೆ, ಅದಕ್ಕೆ ನಾವು ಮೂರು ಬಾರಿ ಜಬ್ಬಾರ್ ಅವರನ್ನು ಎಂಎಲ್‌ಸಿ ಮಾಡಿರುವುದು. ಜಬ್ಬಾರ್ ಅವರನ್ನು ಇದೇ ಶಿವಶಂಕರಪ್ಪ ಅವರು ಎಸ್.ಎಂ.ಕೃಷ್ಣ ಅವರ ಕಾಲ, ಸಿದ್ದರಾಮಯ್ಯ ಅವರ ಕಾಲದಲ್ಲೂ ಎಂಎಲ್‌ಸಿ ಮಾಡಿದ್ದಾರೆ. ಪರಿಷತ್ ಸ್ಥಾನವನ್ನು ಮಾನೆ ಅವರ ಬದಲಿಗೆ ಧಾರವಾಡದಿಂದ ಸಲೀಂ ಅವರಿಗೆ ನೀಡಿದೆವು. ಆಗಾಗ್ಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಪ್ರತಿಪಕ್ಷಗಳು ಯಾವ ಚುನಾವಣೆ ಗೆದ್ದಿವೆ? ಅವರ ಸ್ಥಾನಗಳನ್ನು ನಾವು ಗೆದ್ದುಕೊಂಡು ಬಂದಿದ್ದೇವೆ. ಬಸವರಾಜ ಬೊಮ್ಮಾಯಿ ಅವರ ಸ್ಥಾನ, ಕುಮಾರಸ್ವಾಮಿ ಅವರ ಸ್ಥಾನ ಗೆದ್ದಿದ್ದೇವಲ್ಲವೇ ಎಂದು ಶಿವಕುಮಾರ್ ಪ್ರಶ್ನಿಸಿದರು.
ಬುಧವಾರ ಸಿಎಲ್‌ಪಿ ಸಭೆ
ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ನಿಗದಿ ಮಾಡಲಾಗಿದೆ. ಎಐಸಿಸಿ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ ಅವರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
