ಬೆಂಗಳೂರು : ‘ನಾಯಕತ್ವ ವಿಚಾರವಾಗಿ ಸಿದ್ದರಾಮಯ್ಯ-ನನ್ನ ನಡುವೆ ಕದ್ದುಮುಚ್ಚಿ ಗುಟ್ಟಿನ ವ್ಯವಹಾರ ನಡೆದಿಲ್ಲ. ಸಮಯ ಬಂದಾಗ ಸಿದ್ದರಾಮಯ್ಯ ಅವರೇ ನಮ್ಮ ತೀರ್ಮಾನದ ಬಗ್ಗೆ ಜನರಿಗೆ ಸಂದೇಶ ನೀಡುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
‘ಬಾಲವು ನಾಯಿಯನ್ನು ಅಲ್ಲಾಡಿಸಲು ಸಾಧ್ಯವೆ? ಅದೇ ರೀತಿ ನಾಯಕತ್ವ ಬದಲಾವಣೆ ಕೇಳುವ ಶಾಸಕರು ಹೈಕಮಾಂಡನ್ನು ಅಲ್ಲಾಡಿಸಲು ಸಾಧ್ಯವೆ?’ ಎಂಬ ಸಚಿವ ಎಚ್.ಸಿ.ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾಯಕರ ಹೇಳಿಕೆ ಕುರಿತು ಮುಖ್ಯಮಂತ್ರಿ ಮತ್ತು ಹೈಕಮಾಂಡ್ ಕ್ರಮ ಕೈಗೊಳ್ಳುತ್ತಾರೆ. ಮಹದೇವಪ್ಪ ಹಾಗೂ ಬೇರೆಯವರಿಗೆ ಉತ್ತರ ನೀಡಲು ನಾನು ತಯಾರಿಲ್ಲ. ನಾಯಕತ್ವ ವಿಚಾರವಾಗಿ ಈ ಹಿಂದೆ ಹೇಳಿರುವಂತೆ ನಾನು, ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಎಲ್ಲರೂ ಸೇರಿ ತೀರ್ಮಾನ ತೆಗೆದುಕೊಂಡಿದ್ದೇವೆ. ಆ ತೀರ್ಮಾನ ಏನೆಂಬುದು ಸಮಯ ಬಂದಾಗ ತಿಳಿಯುತ್ತೆ. ಅದು ಕದ್ದುಮುಚ್ಚಿ ಮಾಡಿಕೊಂಡಿರುವ ಗುಟ್ಟಿನ ವ್ಯವಹಾರವಲ್ಲ. ಸಿದ್ದರಾಮಯ್ಯ ಅವರೇ ಸಮಯ ಬಂದಾಗ ರಾಜ್ಯಕ್ಕೆ ಸಂದೇಶ ನೀಡುತ್ತಾರೆ’ ಎಂದು ಹೇಳಿದರು.
ಶಾಸಕರ ಪ್ರವಾಸ ಗೊತ್ತಿಲ್ಲ:
ಶಾಸಕರ ವಿದೇಶ ಪ್ರವಾಸದ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನನಗೆ ಯಾವ ಪ್ರವಾಸದ ಬಗ್ಗೆಯೂ ಮಾಹಿತಿಯಿಲ್ಲ. ಈ ಬಗ್ಗೆ ಮಾಧ್ಯಮಗಳಿಂದಷ್ಟೇ ತಿಳಿದಿದ್ದೇನೆ. ಅದು ಅವರ ವೈಯಕ್ತಿಕ ಪ್ರವಾಸವೋ, ಬೇರೆಯವರು ಅವರನ್ನು ಕಳುಹಿಸುತ್ತಿದ್ದಾರೋ ಗೊತ್ತಿಲ್ಲ. ಪಕ್ಷದ ಅಧ್ಯಕ್ಷನಾಗಿ ನಾನು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದಿಂದ ಆರ್‌ಎಸ್‌ಎಸ್ ಕಚೇರಿಗೆ ಭೂಮಿ:
ಕಾಂಗ್ರೆಸ್ ಭವನಗಳಿಗೆ ಸರ್ಕಾರಿ ಭೂಮಿ ಬಳಸಿಕೊಳ್ಳುತ್ತಿರುವ ಕುರಿತು ಬಿಜೆಪಿ ನಾಯಕರ ಆರೋಪದ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ಕಾಂಗ್ರೆಸ್ ಭವನಗಳಿಗೆ ಸರ್ಕಾರಿ ಭೂಮಿ ಬಳಸಿಕೊಳ್ಳುತ್ತಿದ್ದೇವೆ. ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕತೆ ವಹಿಸಿದ ಶತಮಾನೋತ್ಸವ ಹಿನ್ನೆಲೆಯಲ್ಲಿ 100 ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಮುಂದಾಗಿದ್ದೇವೆ. ನಾವು 5-10 ಸಾವಿರ ಚದರ ಅಡಿಗಳಷ್ಟು ಜಾಗ ಮಂಜೂರು ಮಾಡುತ್ತಿದ್ದೇವೆ. ಆದರೆ, ಬಿಜೆಪಿ ಆಡಳಿತದಲ್ಲಿದ್ದಾಗ ಬೆಂಗಳೂರು ನಗರದಲ್ಲಿ 100ಕ್ಕೂ ಹೆಚ್ಚಿನ ಕಡೆ ವಿವಿಧ ಟ್ರಸ್ಟ್‌ಗಳ ಹೆಸರಿನಲ್ಲಿ ಜಾಗ ಪಡೆದಿದ್ದಾರೆ. ಚಾಣಕ್ಯ ವಿವಿಗೆ ನೀಡಿರುವ ಜಾಗ ಪ್ರತಿ ಎಕರೆಗೆ 10 ಕೋಟಿ ರು. ಬೆಲೆಬಾಳುತ್ತದೆ. ಆದರೆ, ಬಿಜೆಪಿಯವರು ಪ್ರತಿ ಎಕರೆಗೆ 50 ಲಕ್ಷ ರು.ಗೆ 100 ಎಕರೆ ಜಾಗ ಮಂಜೂರು ಮಾಡಿದ್ದಾರೆ. ಸಿಎಸ್‌ಆರ್ ನಿಧಿ ಮೂಲಕ ಕೋಟ್ಯಂತರ ರು. ಸಂಗ್ರಹಿಸಿದ್ದಾರೆ. ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು ಎಂದು ಹೇಳಿದರು.
ಬಿಜೆಪಿ ಜಾಗ ಮಂಜೂರು ಮಾಡದೆ ಆರ್‌ಎಸ್‌ಎಸ್ ಕಚೇರಿ ಹೇಗೆ ನಿರ್ಮಾಣವಾಯಿತು? ಸದಾಶಿವನಗರದಲ್ಲಿ ನಮ್ಮ ಮನೆ ಪಕ್ಕದಲ್ಲಿರುವ ಉದ್ಯಾನವನ್ನು ವೆಲ್‌ನೆಸ್ ಸೆಂಟರ್‌ನ ಯೋಗಾ ಕಚೇರಿಗೆ ನೀಡಿದ್ದಾರೆ. ಇಂಥ ನೂರಾರು ಉದಾಹರಣೆ ನೀಡಬಲ್ಲೆ. ಅವರು ನಮಗೆ ಬೋದನೆ ಮಾಡುವ ಅಗತ್ಯವಿಲ್ಲ. ಅವರು ಏನಾದರೂ ಆರೋಪ ಮಾಡಿಕೊಳ್ಳಲಿ, ನಾವು ನಮ್ಮ ಪಕ್ಷದ ದೇವಾಲಯ ಕಟ್ಟಲು ತೀರ್ಮಾನ ಮಾಡಿದ್ದೇವೆ. ಇದು ನಮ್ಮ ಕರ್ತವ್ಯ. ನಾನು ಅದನ್ನು ಮಾಡಿಯೇ ಮಾಡುತ್ತೇನೆ. ಎಲ್ಲ ಮಾನದಂಡ, ಅರ್ಹತೆ ಆಧಾರದ ಮೇಲೆ ನಾವು ಜಾಗ ಮಂಜೂರು ಮಾಡುತ್ತಿದ್ದೇವೆ. ಈ ಬಗ್ಗೆ ಯಾರು ಬೇಕಾದರೂ ನ್ಯಾಯಾಲಯಕ್ಕೆ ಹೋಗಲಿ ಎಂದರು.
