ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಕುರಿತಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರೊಂದಿಗೆ ರಾಜ್ಯ ನಾಯಕರ ಸಭೆ ಮಂಗಳವಾರ ನಡೆಯಲಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ಸೋಮವಾರ ಸಂಜೆ ದೆಹಲಿಗೆ ತಲುಪಿದರು
ಬೆಂಗಳೂರು : ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಕುರಿತಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರೊಂದಿಗೆ ರಾಜ್ಯ ನಾಯಕರ ಸಭೆ ಮಂಗಳವಾರ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ವಿಧಾನಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ಸೋಮವಾರ ಸಂಜೆ ದೆಹಲಿಗೆ ತಲುಪಿದರು.
ಬಹುತೇಕ ಮಂಗಳವಾರ ಮಧ್ಯಾಹ್ನ ನಿತಿನ್ ನವೀನ್ ಅವರ ಭೇಟಿಗೆ ಸಮಯ ನಿಗದಿಯಾಗಿದ್ದು, ಅಡ್ಡಮತದಾನ ಕುರಿತಂತೆ ರಾಜ್ಯ ನಾಯಕರು ಸಮಗ್ರ ಮಾಹಿತಿ ನೀಡಲಿದ್ದಾರೆ. ಅಡ್ಡಮತದಾನ ಮಾಡಿದವರು ಎಂಬ ಶಂಕೆ ಇರುವ ಸುಮಾರು ಆರೇಳು ಶಾಸಕರ ಹೆಸರುಗಳನ್ನೂ ಪ್ರಸ್ತಾಪಿಸಲಿದ್ದಾರೆ. ಕ್ಷೇತ್ರದ ಅನುದಾನಕ್ಕಾಗಿ, ವೈಯಕ್ತಿಕ ಹಣದ ಆಸೆಗಾಗಿ ಅಡ್ಡಮತದಾನ ಮಾಡಿರಬಹುದು ಎಂಬ ಅಂಶಗಳನ್ನು ಮುಂದಿಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ವಿಜಯೇಂದ್ರ ಅವರು ಲಿಖಿತವಾಗಿಯೂ ವಿವರಣೆ ಸಿದ್ಧಪಡಿಸಿಕೊಂಡಿದ್ದು, ಅಡ್ಡಮತದಾನ ಕುರಿತಂತೆ ತಮ್ಮನ್ನು ಗುರಿಯಾಗಿಸಿ ಟೀಕೆ-ಟಿಪ್ಪಣೆ ಮಾಡುತ್ತಿರುವುದರ ಬಗ್ಗೆಯೂ ದೂರು ನೀಡಲಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದು ಆಣೆ ಪ್ರಮಾಣ ಮಾಡಿಸುವ ಮೂಲಕ ಸತ್ಯಾಸತ್ಯತೆಯನ್ನು ಜನರ ಮುಂದಿಡಬೇಕು ಎಂಬ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆ ಬಗ್ಗೆಯೂ ರಾಷ್ಟ್ರೀಯ ಅಧ್ಯಕ್ಷರ ಬಳಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಸಂಭವವಿದೆ ಎಂದು ತಿಳಿದು ಬಂದಿದೆ.
ಅಡ್ಡಮತದಾನ ಸಂಕಟ
- ಇತ್ತೀಚಿನ ವಿಧಾನಪರಿಷತ್ ಚುನಾವಣೆಯಲ್ಲಿ ಕೆಲ ಬಿಜೆಪಿ ಶಾಸಕರ ಅಡ್ಡಮತ
- ಈ ಬಗ್ಗೆ ಹೈಕಮಾಂಡ್ ಕೆಂಗಣ್ಣು. ರಾಜ್ಯ ನಾಯಕರಿಂದ ವರದಿಗೆ ಸೂಚನೆ
- ವರಿಷ್ಠರ ಸೂಚನೆಯಂತೆ ನಿನ್ನೆ ದೆಹಲಿಗೆ ವಿಜಯೇಂದ್ರ, ಅಶೋಕ್ ದೌಡು
- ಇಂದಿನ ಭೇಟಿ ವೇಳೆ ಅಡ್ಡಮತದಾನ ಮಾಡಿದ 6-7 ಶಾಸಕರ ಪಟ್ಟಿ ಸಲ್ಲಿಕೆ?
- ಪಕ್ಷದಲ್ಲಿರುವ ತಮ್ಮ ಟೀಕಾಕಾರರ ಮೇಲೂ ದೂರು ಸಲ್ಲಿಕೆ ಸಾಧ್ಯತೆ
