ಕನ್ನಡಪ್ರಭ ವಾರ್ತೆ ಮಂಡ್ಯ

ವಿಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿ ಬಹಳ ವರ್ಷಗಳಾಗಿದೆ. ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವದಡಿ ನಾವು ಎರಡು ವರ್ಷಗಳಿಂದ ಪ್ರಶ್ನಿಸುತ್ತಲೇ ಬಂದಿದ್ದೇವೆ. ಪ್ರತಿಪಕ್ಷಗಳು ಹೊಂದಾಣಿಕೆ ರಾಜಕಾರಣ ಮಾಡಿದರೆ ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಟಾಂಗ್ ನೀಡಿದರು.

ಹೊಂದಾಣಿಕೆ ರಾಜಕಾರಣದಿಂದಲೇ ನಾವು ಲೋಕಸಭಾ ಚುನಾವಣೆ, ಉಪ ಚುನಾವಣೆಗಳಲ್ಲಿ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ. ಇದೀಗ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನವೂ ನಡೆದಿದೆ. ಇದರಿಂದ ಪಕ್ಷದೊಳಗೆ ಹಿಡಿತವಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿದೆ ಎಂದು ಶನಿವಾರ ಪತ್ರಕರ್ತರ ಸಂಘದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬೇಸರ ಹೊರಹಾಕಿದರು.

ಕರ್ನಾಟಕದಲ್ಲಿ ಬಿಜೆಪಿ ಇದುವರೆಗೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿಲ್ಲ. ೨೦೨೮ಕ್ಕೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಅದಕ್ಕಾಗಿ ಎಲ್ಲಾ ತಯಾರಿಯೂ ನಡೆದಿದೆ. ೧೦೪ ಸ್ಥಾನಗಳವರೆಗೆ ತಲುಪಿ ಮತ್ತೆ ಕೆಳಗೆ ಬಂದಿದ್ದೇವೆ. ಈ ಬಾರಿ ೨೦೨೮ಕ್ಕೆ ರಾಷ್ಟ್ರ ಹಾಗೂ ರಾಜ್ಯದಲ್ಲಿ ಒಂದೇ ಆಡಳಿತ ಇರಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರ ನಿಲುವುಗಳು, ವಾದಗಳು ಸರಿಯಾಗಿಲ್ಲ. ಜನ ಸಂಘಟನೆ, ಪಕ್ಷ ಸಂಘಟನೆ ಪೂರಕವಾಗಿಲ್ಲ. ಅದನ್ನು ಪ್ರಶ್ನಿಸುವ ಧ್ವನಿ ಇರುವುದರಿಂದಲೇ ಹೈಕಮಾಂಡ್ ಬಳಿ ವಾದ ಮಂಡಿಸುತ್ತಿದ್ದೇವೆ. ಅದನ್ನೆಲ್ಲವನ್ನೂ ಸರಿಪಡಿಸುವ ಕೆಲಸ ಹೈಕಮಾಂಡ್‌ನಿಂದ ನಡೆಯುತ್ತಿದೆ. ಯತ್ನಾಳ್ ನಮ್ಮ ಜೊತೆಗಿದ್ದಾರೆ. ನಾನೂ ಬಿಜೆಪಿ ಟೀಮ್‌ನಲ್ಲೇ ಇದ್ದೇನೆ. ರಾಷ್ಟ್ರೀಯ ನಾಯಕರು ಎಂದೂ ನಮ್ಮ ಮಾತನ್ನು ತಳ್ಳಿ ಹಾಕಿಲ್ಲ, ನಮ್ಮ ಧ್ವನಿಯನ್ನು ಅಡಗಿಸುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಕೇಳಿದಾಗ, ಹೈಕಮಾಂಡ್ ಮಟ್ಟದಲ್ಲಿ ಆ ಪ್ರಕ್ರಿಯೆ ನಡೆಯುತ್ತಿದೆ. ನವೆಂಬರ್‌ಗೆ ಅವರ ಅವಧಿ ಮುಗಿಯಲಿದೆ. ಇಲ್ಲಿಯವರೆಗೆ ಅಧಿಕೃತವಾಗಿ ನಾಮಿನೆಷನ್ ಹಾಕಿ ಎಂಬ ಮಾಹಿತಿಯನ್ನು ಹೈಕಮಾಂಡ್ ಕೊಟ್ಟಿಲ್ಲ ಎಂದು ಹೇಳಿದರು.

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಷ್ಠೆಯನ್ನು ಬಿಟ್ಟು ಹಸಿರು ವಲಯವನ್ನು ಉಳಿಸಿಕೊಳ್ಳಬೇಕು. ಈ ಯೋಜನೆಯ ಕುರಿತು ರಾಜ್ಯ ಸರ್ಕಾರ ಮರುಪರಿಶೀಲನೆ ಮಾಡುವುದು ಒಳ್ಳೆಯದು. ಬೆಂಗಳೂರಿನ ಮೇಲೆ ಈಗಲೇ ಒತ್ತಡ ಹೆಚ್ಚಿದೆ. ಇಲ್ಲಿ ಮಾಡಬೇಕಿರುವ ಟೌನ್‌ಶಿಪ್‌ನ್ನು ಬೆಂಗಳೂರಿನ ಹೊರಗೆ ಬರಡು ಭೂಮಿಯನ್ನು ಆಯ್ಕೆ ಮಾಡಿಕೊಂಡು ಮಾಡುವುದು ಒಳ್ಳೆಯದು. ಇದರಿಂದ ಆ ಭಾಗಗಳೂ ಬೆಳವಣಿಗೆ ಕಾಣುತ್ತವೆ. ಬೆಂಗಳೂರಿನ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಅಭಿವೃದ್ಧಿ ಒಂದೇ ಕಡೆ ಕೇಂದ್ರೀಕೃತವಾಗುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್ ಬಿಜೆಪಿಯ ಒಂದು ಭಾಗ ಅಂತ ನಮಗೆ ಎಲ್ಲೂ ಬೋಧನೆ ಮಾಡಿಲ್ಲ. ಆದರೆ, ರಾಜಕೀಯವಾಗಿ ಆರ್‌ಎಸ್‌ಎಸ್ ಬಿಜೆಪಿಯನ್ನು ನಿಯಂತ್ರಣ ಮಾಡುತ್ತಿರುವುದು ಸತ್ಯ ಎಂದು ಕುಮಾರ್ ಬಂಗಾರಪ್ಪ ಹೇಳಿದರು.

ಆರ್‌ಎಸ್‌ಎಸ್ ಎನ್ನುವುದು ಸ್ವಯಂ ಸೇವಕರ ಸಂಘಟನೆ. ಸೇವೆ ಮಾಡುವುದಕ್ಕಾಗಿ ಎಷ್ಟೋ ಸಂಘ-ಸಂಸ್ಥೆಗಳನ್ನು ಮಾಡುತ್ತೇವೆ. ಅವೆಲ್ಲವನ್ನೂ ನೋಂದಣಿ ಮಾಡಲಾಗುವುದೇ. ಅದಕ್ಕೆಲ್ಲಾ ಲೆಕ್ಕ-ಪತ್ರಗಳನ್ನಿಡುವುದಕ್ಕೆ ಸಾಧ್ಯವೇ. ರಾಜಕೀಯ ಕಾರಣಗಳಿಗಾಗಿ ಪ್ರಿಯಾಂಕ್ ಖರ್ಗೆ ಈ ವಿಷಯವನ್ನು ಎಳೆತಂದಿದ್ದಾರೆ. ಸರ್ಕಾರದಲ್ಲಿರುವವರು ಈಗ ಕೇಳುತ್ತಿದ್ದಾರೆ. ಅದಕ್ಕೆ ಅವರೇ ಉತ್ತರ ಕೊಡುತ್ತಾರೆ. ಏಕೆಂದರೆ, ನಾವು ಆರ್‌ಎಸ್‌ಎಸ್ ಸದಸ್ಯರಲ್ಲ. ಬಿಜೆಪಿ ಸದಸ್ಯರು ಎಂದು ಜಾರಿಕೊಂಡರು.