ಕನ್ನಡಪ್ರಭ ವಾರ್ತೆ ಮಂಡ್ಯ

ನೀಟ್ ಪರೀಕ್ಷಾ ದಿನವೇ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆಸುವ ಮೂಲಕ ನಾಲ್ಕೈದು ಮಂದಿ ವಿದ್ಯಾರ್ಥಿಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ತಡವಾಗಿ ಬಂದು ಪರೀಕ್ಷೆ ಎದುರಿಸಲಾಗದೆ. ಕಾಂಗ್ರೆಸ್ ಪಕ್ಷ ಅವರ ಭವಿಷ್ಯವನ್ನೇ ಹಾಳು ಮಾಡಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರ ವಿರುದ್ಧ ಘೋಷಣೆ ಕೂಗಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾ.ಸಿ.ಸಿದ್ದರಾಜು ಮಾತನಾಡಿ, ಕಳೆದ ಒಂದು ತಿಂಗಳ ಹಿಂದೆಯೇ ನೀಟ್ ಪರೀಕ್ಷೆಗೆ ದಿನಾಂಕ ನಿಗದಿಪಡಿಸಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಅದೇ ದಿನ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭ ಮಾಡುವ ಮೂಲಕ ರಾಜ್ಯದ ವಿವಿಧ ಭಾಗಗಳಿಂದ ವಾಹನಗಳಲ್ಲಿ ಜನರನ್ನು ಕರೆಸಿಕೊಂಡಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಟ್ರಾಪಿಕ್ ಜಾಮ್ ಉಂಟಾಗಿ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ತಡವಾಗಿ ತೆರಳುವಂತಾಗಿದೆ. ಇಂತಹ ಘಟನೆಯಿಂದಾಗಿ ಹಲವಾರು ಮಂದಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೈತಪ್ಪಿದಂತಾಗಿದೆ. ಇದು ಕಾಂಗ್ರೆಸ್ ಪಕ್ಷ ಆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಮಾರಂಭಕ್ಕೆ ಅನುಮತಿ ನೀಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಕಿಡಿಕಾರಿದರು.


ಇಂತಹ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಸರ್ಕಾರ ಗ್ರೇಸ್ ಮಾರ್ಕ್ಸ್ ನೀಡಿ ನೇರ ಪ್ರವೇಶ ಕೊಡಿಸಿ ವಂಚಿತ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ವಿವೇಕ್, ನಗರಾಧ್ಯಕ್ಷ ಪ್ರಸನ್ನಕುಮಾರ್, ಮುಖಂಡರಾದ ನಿತ್ಯಾನಂದ, ಸಿ.ಟಿ. ಮಂಜುನಾಥ್, ಹೊಸಹಳ್ಳಿ ಶಿವು, ಶಿವಕುಮಾರ್ ಕೆಂಪಯ್ಯ, ವೈರಮುಡಿ, ಸುನೀಲ್, ಶಿವಲಿಂಗಯ್ಯ, ಮಾದರಾಜ ಅರಸು, ಧರಣೇಂದ್ರ, ಶಶಿಕುಮಾರ್ ಇತರರಿದ್ದರು.