ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಸಾಕ್ಷಿಯೂ ಆಗಿರುವ ಮೃತನ ತಾಯಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ಕೋರಿ ಕಾಮಾಕ್ಷಿಪಾಳ್ಯ ಠಾಣೆಯ ತನಿಧಿಕಾರಿಗಳು (ಪ್ರಾಸಿಕ್ಯೂಷನ್‌) ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್‌ ಕಾಯ್ದಿರಿಸಿದೆ.

ಬೆಂಗಳೂರು : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಸಾಕ್ಷಿಯೂ ಆಗಿರುವ ಮೃತನ ತಾಯಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ಕೋರಿ ಕಾಮಾಕ್ಷಿಪಾಳ್ಯ ಠಾಣೆಯ ತನಿಧಿಕಾರಿಗಳು (ಪ್ರಾಸಿಕ್ಯೂಷನ್‌) ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್‌ ಕಾಯ್ದಿರಿಸಿದೆ.

ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ

ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ಮತ್ತು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಲು ಕೋರಿ ತಾವು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ನಗರದ 59ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕಾಮಾಕ್ಷಿಪಾಳ್ಯ ಠಾಣೆಯ ತನಿಧಿಕಾರಿಗಳು ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ಕುರಿತು ಬುಧವಾರ ಸುದೀರ್ಘವಾಗಿ ಪ್ರಾಸಿಕ್ಯೂಷನ್‌ ಮತ್ತು ಆರೋಪಿಗಳ ಪರ ವಕೀಲರ ವಾದ–ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ತೀರ್ಪು ಕಾಯ್ದಿರಿಸಿದೆ.

ಇದಕ್ಕೂ ಮುನ್ನ ಪ್ರಾಸಿಕ್ಯೂಷನ್‌ ಪರ ಎಸ್‌ಪಿಪಿ ಪಿ.ಪ್ರಸನ್ನಕುಮಾರ್, ತನಿಖಾಧಿಕಾರಿ ಮುಂದೆ ರತ್ನಪ್ರಭಾ ನೀಡಿರುವ ಹೇಳಿಕೆ, ತನಿಖೆಯ ವೇಳೆ ಸಂಗ್ರಹಿಸಲಾದ ಸಾಕ್ಷ್ಯಗಳು ಹಾಗೂ ತಾಂತ್ರಿಕ ದಾಖಲೆಗಳಿಗೆ ಸಂಪೂರ್ಣ ತದ್ವಿರುದ್ಧಾಗಿವೆ. ತಾಯಿಯ ಮೊಬೈಲ್‌ಗೆ ರೇಣುಕಾಸ್ವಾಮಿ 2024ರ ಜೂ.8ರಂದು 27 ಸೆಕಂಡ್ ಹಾಗೂ 47 ಸೆಕಂಡ್‌ಗಳ 2 ಕರೆ ಮಾಡಿದ್ದರು.

ಪಟ್ಟಣಗೆರೆ ಶೆಡ್‌ನಿಂದ ರೇಣುಕಾಸ್ವಾಮಿ ಕರೆ ಮಾಡಿದ ದಾಖಲೆಗಳಿವೆ

ಪಟ್ಟಣಗೆರೆ ಶೆಡ್‌ನಿಂದ ರೇಣುಕಾಸ್ವಾಮಿ ಕರೆ ಮಾಡಿದ ದಾಖಲೆಗಳಿವೆ. ಆದರೆ, ಮಗನಿಂದ ತನಗೆ ಕರೆ ಬಂದಿಲ್ಲವೆಂದು ತಾಯಿ ಹೇಳಿಕೆ ನೀಡಿದ್ದಾರೆ. ದಾಖಲೆಗಳಿಗೆ ವಿರುದ್ಧವಾಗಿ ಹೇಳಿಕೆ ನೀಡಿರುವುದರಿಂದ ಆಕೆಯನ್ನು ಪ್ರತಿಕೂಲ ಸಾಕ್ಷಿಯನ್ನಾಗಿಸಬೇಕೆಂಬ ಪ್ರಾಸಿಕ್ಯೂಷನ್ ಮನವಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ. ಆದ್ದರಿಂದ ರತ್ನಪ್ರಭಾ ಅವರನ್ನು ಪ್ರತಿಕೂಲ ಸಾಕ್ಷಿಯಾಗಿಸಲು ಮತ್ತು ಪ್ರಾಸಿಕ್ಯೂಷನ್‌ನಿಂದ ಪಾಟಿ ಸವಾಲಿಗೆ ಗುರಿಪಡಿಸಲು ಕೋರಿರುವ ಅರ್ಜಿಯನ್ನು ಪರಿಗಣಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.

ದರ್ಶನ್ ಪರ ಹಿರಿಯ ವಕೀಲ ಹಸ್ಮತ್‌ ಪಾಷ, ತನ್ನ ಮೂಗಿನ ನೇರಕ್ಕೆ ಸಾಕ್ಷಿಯು ಹೇಳಿಕೆ ದಾಖಲಿಸಬೇಕೆಂಬ ಪ್ರಾಸಿಕ್ಯೂಷನ್‌ ಒತ್ತಾಯಿಸುವುದು ಸರಿಯಲ್ಲ. ರತ್ನಪ್ರಭಾ ಅವರು ಮೃತ ವ್ಯಕ್ತಿಯ ತಾಯಿ. ಅವರು ಪ್ರತಿಕೂಲ ಸಾಕ್ಷಿಯಾಗಿಲ್ಲ. ಮುಖ್ಯ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ಪರ ಹೇಳಿಕೆ ನೀಡಿದ್ದಾರೆ. ಪಾಟಿ ಸವಾಲಿನಲ್ಲಿ ಆರೋಪಿಗಳ ವಕೀಲರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮರು ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಯಾವುದೇ ಸ್ಪಷ್ಟನೆ ಕೇಳಿಲ್ಲ. ಹಾಗಾಗಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಬಾರದು ಎಂದು ಬಲವಾಗಿ ಕೋರಿದರು.

ವಿಚಾರಣೆ ವೇಳೆ ಆರೋಪಿ ದರ್ಶನ್‌ ಜೈಲಿನಿಂದಲೇ ವಿಡಿಯೋ ಸಂವಾದದ ಮೂಲಕ ಹಾಜರಾಗಿದ್ದರು.