ನಟ ದರ್ಶನ್‌ ಮತ್ತು ಗ್ಯಾಂಗ್‌ ವಿರುದ್ಧದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಖ್ಯ ವಿಚಾರಣೆ ಬುಧವಾರದಿಂದ ಆರಂಭವಾಗಿದ್ದು, ಮೃತನ ತಂದೆ ಮತ್ತು ತಾಯಿ ಮೊದಲ ಬಾರಿಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಸಾಕ್ಷ್ಯ ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಟ ದರ್ಶನ್‌ ಮತ್ತು ಗ್ಯಾಂಗ್‌ ವಿರುದ್ಧದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಖ್ಯ ವಿಚಾರಣೆ ಬುಧವಾರದಿಂದ ಆರಂಭವಾಗಿದ್ದು, ಮೃತನ ತಂದೆ ಮತ್ತು ತಾಯಿ ಮೊದಲ ಬಾರಿಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಸಾಕ್ಷ್ಯ ದಾಖಲಿಸಿದ್ದಾರೆ.

ನಗರದ 57ನೇ ಸಿಟಿ ಸಿವಿಲ್‌ ಸೆಷನ್ಸ್ ಕೋರ್ಟ್‌ ನ್ಯಾಯಾಧೀಶ ಐ.ಪಿ.ನಾಯ್ಕ್‌ ಅವರು ಪ್ರಕರಣ ಸಂಬಂಧ ಮುಖ್ಯ ವಿಚಾರಣೆ ಆರಂಭಿಸಿದ್ಧಾರೆ. ಬುಧವಾರ ಪ್ರಾಸಿಕ್ಯೂಷನ್‌ ಮೊದಲ ಸಾಕ್ಷಿಯಾಗಿ ರೇಣುಕಾಸ್ವಾಮಿ ತಾಯಿ ರತ್ನಪ್ರಭ ಮತ್ತು ಎರಡನೇ ಸಾಕ್ಷಿ ತಂದೆ ಕಾಶಿನಾಥಯ್ಯ ತಮ್ಮ ಸಾಕ್ಷ್ಯವನ್ನು ಸರ್ಕಾರಿ ವಿಶೇಷ ಅಭಿಯೋಜಕರ ಪಿ.ಪ್ರಸನ್ನ ಕುಮಾರ್‌ ಅವರ ಸಮ್ಮುಖದಲ್ಲಿ ನ್ಯಾಯಾಲಯದಲ್ಲಿ ದಾಖಲಿಸಿದರು.

ಇದೇ ವೇಳೆ ಪ್ರಕರಣದ ಮೊದಲ ಆರೋಪಿ ನಟಿಯಾದ ದರ್ಶನ್‌ ಆಪ್ತೆ ಪವಿತ್ರಾ ಗೌಡ ಪರ ವಕೀಲ ಬಾಲನ್‌, ರತ್ನಪ್ರಭ ಅವರನ್ನು ಪಾಟಿ ಸವಾಲಿಗೆ ಗುರಿಪಡಿಸಿದರು. ಈ ವೇಳೆ ಬಾಲನ್‌ ಕೇಳಿದ ಹಲವು ಪ್ರಶ್ನೆಗಳಿಗೆ ರತ್ನಪ್ರಭ ತಮಗಿದ್ದ ಮಾಹಿತಿ ಆಧರಿಸಿ ಉತ್ತರಿಸಿದರು. ಕೆಲ ಪ್ರಶ್ನೆಗಳಿಗೆ ‘ಗೊತ್ತಿಲ್ಲ’ ಎಂದು ತಿಳಿಸಿದರು. ಬಾಲನ್‌ ಅವರ ಪಾಟಿಸವಾಲು ಪ್ರಕ್ರಿಯೆ ಅಪೂರ್ಣಗೊಂಡ ಕಾರಣ ನ್ಯಾಯಾಲಯವು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ಗುರುವಾರವು ಬಾಲನ್‌ ಅವರ ರತ್ನಪ್ರಭ ಮತ್ತು ಕಾಶೀನಾಥಯ್ಯ ಅವರನ್ನು ಪಾಟಿ ಸವಾಲಿಗೆ ಗುರಿಪಡಿಸಲಿದ್ದಾರೆ. ಇದಾದ ನಂತರ ದರ್ಶನ್‌ ಸೇರಿ ಇತರ 15 ಆರೋಪಿಗಳು ಪರ ವಕೀಲರು ಈ ಇಬ್ಬರು ಸಾಕ್ಷಿಗಳ ಪಾಟಿಸವಾಲು ನಡೆಸಬಹುದು.

ಸ್ನೇಹಿತರೊಂದಿಗೆ ಊಟ ತೆರಳುತ್ತೇನೆಂದ ಮಗ ಶವವಾದ:

2024ರ ಜೂ.8ರಂದು ಪುತ್ರ ರೇಣುಕಾಸ್ವಾಮಿ ಬೆಳಗ್ಗೆ ಫಾರ್ಮಸಿ ಕೆಲಸಕ್ಕೆ ಹೋಗಿದ್ದ. ಮಧ್ಯಾಹ್ನ ಕರೆ ಮಾಡಿ ಸ್ನೇಹಿತರ ಜತೆ ಊಟಕ್ಕೆ ಹೋಗುತ್ತೇನೆ, ಬರುವುದು ತಡವಾಗುತ್ತದೆ ಎಂದು ತಿಳಿಸಿದ್ದ. ಸಂಜೆ 7 ಗಂಟೆಯಾದರೂ ಮನೆಗೆ ಬರಲಿಲ್ಲ. ಆಗ ಕರೆ ಮಾಡಿದರೆ ಮಗನ ಮೊಬೈಲ್‌ ಸ್ವಿಚ್ಡ್‌ ಆಫ್ ಆಗಿತ್ತು. ನಾವು ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ನಂತರ ಜೂ.10ರಂದು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಮಗೆ ಕರೆ ಮಾಡಿ, ನಿಮ್ಮ ಮಗನ ವಿಚಾರವಾಗಿ ಬೆಂಗಳೂರಿಗೆ ಬರಬೇಕು ಎಂದು ಹೇಳಿದರು. ಇದರಿಂದ ಜೂ.11ರಂದು ಬೆಂಗಳೂರಿಗೆ ಬಂದೆವು. ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ಪುತ್ರನ ಮೃತದೇಹ ತೋರಿಸಿ, ದರ್ಶನ್‌ ಮತ್ತು ತಂಡ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.

ಮಗನ ಮೃತದೇಹ ನೋಡಿದಾಗ ಎಲ್ಲೆಡೆ ಗಂಭೀರ ಗಾಯಗಳಿದ್ದವು. ಕೆಲವೆಡೆ ಸುಟ್ಟ ಗಾಯಗಳಿದ್ದವು. ಕೆಲ ದಿನಗಳ ಬಳಿಕ ಚಿತ್ರದುರ್ಗದ ಮನೆಗೆ ಬಂದ ಪೊಲೀಸರು, ರಾಘವೇಂದ್ರ ನಿಮ್ಮ ಮಗನ ಮೈಮೇಲಿದ್ದ ಚಿನ್ನದ ಸರ ಮತ್ತು ಉಂಗುರ ಕಳವು ಮಾಡಿದ್ದರು ಎಂದು ಹೇಳಿ, ಅದನ್ನು ಗುರುತಿಸಲು ತೋರಿಸಿದರು. ಉಂಗುರದಲ್ಲಿ ಆರ್‌ಎಸ್‌ (ರೇಣುಕಾಸ್ವಾಮಿ ಮತ್ತು ಪತ್ನಿ ಸಹನಾ) ಅಂತ ಇತ್ತು ಎಂದು ಹೇಳಿದರು. ಈ ಎಲ್ಲಾ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿಕೊಂಡಿತು.

ಬಾಕ್ಸ್‌...

ಬಾಕ್ಸ್‌...

ಪೋಷಕರ ಗೌಪ್ಯ ವಿಚಾರಣೆ

ಬುಧವಾರ ಮಧ್ಯಾಹ್ನ 12 ಗಂಟೆಗೆ ರತ್ನಪ್ರಭ ಮತ್ತು ಕಾಶೀನಾಥಯ್ಯ ಕೋರ್ಟ್‌ಗೆ ಹಾಜರಾದರು. ಮಧ್ಯಾಹ್ನ 12.30ರಿಂದ 2.30ವರೆಗೆ ಅವರು ಸಾಕ್ಷ್ಯ ಹೇಳಿಕೆ ದಾಖಲಿಸಿದರು. ಈ ವೇಳೆ ವಿಶೇಷ ಸರ್ಕಾರಿ ಅಭಿಯೋಜಕರು, ಆರೋಪಿಗಳ ಪರ ಒಂದಿಬ್ಬರು ವಕೀಲರನ್ನು ಮಾತ್ರ ಕೋರ್ಟ್‌ ಒಳಗೆ ಇರಲು ನ್ಯಾಯಾಲಯವು ಹೇಳಿತು. ಉಳಿದ ಎಲ್ಲರನ್ನು ಕೋರ್ಟ್‌ ಹಾಲ್‌ನಿಂದ ಹೊರಗಡೆ ಕಳುಹಿಸಿ, ಗೌಪ್ಯ ವಿಚಾರಣೆ (ಇನ್‌-ಕ್ಯಾಮೆರಾ ಪ್ರೋಸಿಡಿಂಗ್‌) ನಡೆಸಿತು. ಮಧ್ಯಾಹ್ನ 3.30ರಿಂದ ಸಂಜೆಯ 5ರವರೆಗೂ ರತ್ನಪ್ರಭ ಪಾಟಿ ಸವಾಲು ನಡೆಯಿತು. ಆಗ ಎಲ್ಲರಿಗೂ ಕೋರ್ಟ್‌ ಹಾಲ್‌ ಪ್ರವೇಶ ಕಲ್ಪಿಸಲಾಯಿತು.ಶವದ ಮೇಲಿದ್ದ ಶರ್ಟ್‌ ಬೇರೆ:

ನಂತರ ಪಾಟಿ ಸವಾಲು ಪ್ರಕ್ರಿಯೆಯಲ್ಲಿ ಪವಿತ್ರಾ ಪರ ವಕೀಲ ಬಾಲನ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದ ರತ್ನಪ್ರಭ, ಜೂ.8ರಂದು ಮಧ್ಯಾಹ್ನ 2 ಗಂಟೆಗೆ ಪುತ್ರ ಕರೆ ಮಾಡಿದ್ದ. ಊಟಕ್ಕೆ ಹೊರಗಡೆ ಹೋಗುತ್ತೇನೆ ಎಂದು ಹೇಳಿದ್ದ. ಆದರೆ, ಎಲ್ಲಿಗೆ ಹೋಗುತ್ತೇನೆಂದು ಹೇಳಿರಲಿಲ್ಲ. ರಾತ್ರಿ 7 ಗಂಟೆ ಬಳಿಕ ಮಗನ ಫೋನ್ ಸ್ವಿಚ್ ಆಫ್ ಬರುತ್ತಿತ್ತು. ಮಗ ಎಲ್ಲಿ ಹೋಗಿದ್ದ ಎಂಬುದು ಗೊತ್ತಿರಲಿಲ್ಲ. ಆತ ಕೆಲಸ‌ ಮಾಡುತ್ತಿದ್ದ ಫಾರ್ಮಸಿಯಲ್ಲಿ ವಿಚಾರಿಸಿರಲಿಲ್ಲ. ರೇಣುಕಾಸ್ವಾಮಿ ಸ್ನೇಹಿತರೊಂದಿಗೆ ಬಾಲಾಜಿ ಬಾರ್‌ಗೆ ಊಟಕ್ಕೆ ಹೋಗಿಲ್ಲ. ಶವದ ಮೇಲಿದ್ದ ಟಿ ಶರ್ಟ್ ಗುರುತಿಸಿದ್ದೇನೆ. ಮಗ ಮನೆಯಿಂದ ಹೋಗುವಾಗ ಬೇರೆ ಶರ್ಟ್ ಹಾಕಿದ್ದ. ಚಿನ್ನದ ಸರ-ಉಂಗುರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಗ್ಗೆ ನನಗೆ ಗೊತ್ತಿಲ್ಲ ಎಂದರು.---ಜೈಲಿಂದಲೇ ದರ್ಶನ್ವಿಡಿಯೋ ಕಾನ್ಫೆರೆನ್ಸ್‌ಇದಕ್ಕೂ ಮುನ್ನ ದರ್ಶನ್‌, ಪವಿತ್ರಾ ಸೇರಿ 7 ಮಂದಿ ಆರೋಪಿಗಳು ಜೈಲಿನಿಂದಲೇ ವಿಡಿಯೋ ಕಾನ್ಫೆರೆನ್ಸ್ ವಿಚಾರಣೆಗೆ ಹಾಜರಾದರು. 17ನೇ ಆರೋಪಿ ನಿಖಿಲ್‌ ನಾರಾಯಣ ಹೊರತುಪಡಿಸಿ, ಜಾಮೀನು ಮೇಲಿರುವ ಉಳಿದ 9 ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಇದೇ ವೇಳೆ ಪವಿತ್ರಾಗೌಡ ಕೋರಿಗೆ ಮೇರೆಗೆ ಆಕೆಯ ಸೆಲ್‌ನಲ್ಲಿ ಟಿವಿ ಅಳವಡಿಸಬೇಕು. ಓದಲು ದಿನಪತ್ರಿಕೆ, ಗ್ರಂಥಾಲಯದ ಪುಸ್ತಕಗಳು ಲಭ್ಯವಿದ್ದರೆ ನೀಡಬೇಕು ಎಂದು ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿತು. ಹಾಗೆಯೇ, ದರ್ಶನ್‌, ಪವಿತ್ರಾ ಗೌಡ ಸೇರಿ ಏಳು ಮಂದಿ ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿತು.