ಯಾವ ಮಾದರಿಯ ಆಧಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ನರೇಗಾ ಯೋಜನೆ ಹೆಸರನ್ನು ಬದಲಾಯಿಸಿದೆ ಎಂಬುದರ ಕುರಿತು ಸಮರ್ಪಕ ಉತ್ತರ ನೀಡಲಿ. ಮಹಾತ್ಮ ಗಾಂಧಿ ಹೆಸರನ್ನು ಬದಲಾಯಿಸಿದ್ದಾರೆ ಎಂದರೆ ಇವರಿಗೆ ದೇಶಭಕ್ತಿ ಇಲ್ಲವೆಂದೇ ಅರ್ಥ.

ಹುಬ್ಬಳ್ಳಿ:

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಾತ್ಮ ಗಾಂಧಿ ಹೆಸರು ಕೈ ಬಿಟ್ಟು ಜಿ ರಾಮ್ ಜಿ ಹೆಸರು ಇಟ್ಟಿರುವುದು ಖಂಡನೀಯ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವ ಮಾದರಿಯ ಆಧಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ನರೇಗಾ ಯೋಜನೆ ಹೆಸರನ್ನು ಬದಲಾಯಿಸಿದೆ ಎಂಬುದರ ಕುರಿತು ಸಮರ್ಪಕ ಉತ್ತರ ನೀಡಲಿ. ಮಹಾತ್ಮ ಗಾಂಧಿ ಹೆಸರನ್ನು ಬದಲಾಯಿಸಿದ್ದಾರೆ ಎಂದರೆ ಇವರಿಗೆ ದೇಶಭಕ್ತಿ ಇಲ್ಲವೆಂದೇ ಅರ್ಥ. ಈ ರೀತಿ ಘಟನೆಗಳು ಈ ಹಿಂದೆ ಆಗಿಲ್ಲ. ಮೊದಲು ಬಿಜೆಪಿಗರು ದೇಶಭಕ್ತಿ ಹೊಂದಲಿ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರಿಗೆ ಗೌರವ ಕಾಯ್ದುಕೊಳ್ಳಬೇಕು. ಇದು ಬಿಜೆಪಿಗರ ಪ್ರವೃತ್ತಿಯನ್ನು ತೋರ್ಪಡಿಸುತ್ತದೆ ಎಂದು ಕಿಡಿಕಾರಿದರು.

ನೀವು ಇಂದು ಅಧಿಕಾರದಲ್ಲಿ ಇರಬಹುದು. ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿ ಇದ್ದಷ್ಟು ದಿನ ನೀವು ಏನು ಮಾಡಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಗ್ರಾಮ ಸ್ವರಾಜ ಪರಿಕಲ್ಪನೆ ಮತ್ತು ರಾಮರಾಜ್ಯದ ಆದರ್ಶ ಎಂದಿಗೂ ಸ್ಪರ್ಧಾತ್ಮಕ ಶಕ್ತಿಯಾಗಿರಲಿಲ್ಲ. ಅವು ಮಹಾತ್ಮ ಗಾಂಧೀಜಿ ಅವರ ಪ್ರಜ್ಞೆಯ ಎರಡು ಸ್ತಂಭಗಳಾಗಿದ್ದವು. ಕೇಂದ್ರ ಸರ್ಕಾರ ಪ್ರಸ್ತಾವಿತ ಜಿ ರಾಮ್ ಜಿ ಮಸೂದೆಯಲ್ಲಿ ಮನರೇಗಾ ಹೆಸರು ಮರುನಾಮಕರಣ ಮಾಡುವುದು ದುರದೃಷ್ಟಕರ ಇದನ್ನು ನಾನು ವಿರೋಧಿಸುತ್ತೇನೆ ಎಂದರು.

ಕಾಂಗ್ರೆಸ್‌ ಗಾಂಧಿ ಹೆಸರು ಬದಲಾವಣೆಗೆ ಹೋರಾಟ ನಡೆಸಲಿ: ಬೆಲ್ಲದ

ಕಾಂಗ್ರೆಸ್‌ ಪುರಾತನ ಕಾಲದಿಂದ ಕೆಲ ಯೋಜನೆಗಳಿಗೆ ಇಂದಿರಾ ಗಾಂಧಿ, ರಾಜೀವ ಗಾಂಧಿ ಎಂದು ಹೆಸರುಗಳನ್ನು ನಾಮಕರಣ ಮಾಡಿದೆ. ಆ ಯೋಜನೆಗಳಿಗೆ ಇರಿಸಿದ ಹೆಸರುಗಳ ಬದಲಾವಣೆ ಮಾಡಬೇಕಿದೆ. ಇದರ ವಿರುದ್ಧ ಕಾಂಗ್ರೆಸ್‌ ನಾಯಕರು ಹೋರಾಡಲಿ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಈ ಹಿಂದೆ ಅನುಷ್ಠಾನಕ್ಕೆ ತಂದ ಯೋಜನೆಗಳಿಂದ ನಾವು ಯಾವುದೇ ಕ್ರೆಡಿಟ್‌ ತೆಗೆದುಕೊಳ್ಳಲಿಲ್ಲ. ಮನರೇಗಾ ಯೋಜನೆಯ ಹೆಸರು ಬದಲಾವಣೆಯಿಂದ ಯಾವ ಲಾಭವೂ ನಮಗಿಲ್ಲ ಎಂದು ಸ್ಪಷ್ಟಪಡಿಸಿದರು. "ಮನರೇಗಾ " ಬದಲು ಜಿ ರಾಮ್‌ ಜಿ ಮಸೂದೆ ಎಂದು ಬದಲಾವಣೆಯಿಂದ ಯೋಜನೆಯನ್ನು ಮತ್ತಷ್ಟು ಸುಧಾರಿಸಲು ಚಿಂತನೆ ನಡೆಸಲಾಗಿದೆ. ಕೆಲಸದ ದಿನಗಳ ಸಂಖ್ಯೆಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ತಿಳಿಸಿದೆ ಎಂದರು.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಸಮಗ್ರ ಚರ್ಚೆಯಾಗಬೇಕು. ಪ್ರಮುಖವಾಗಿ ಸರ್ಕಾರಿ ಶಾಲೆಗಳ ಕಟ್ಟಡಗಳ ದುರಸ್ತಿಗೆ ಆದ್ಯತೆ ನೀಡಬೇಕಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ₹ 5 ಸಾವಿರ ಕೋಟಿ ಅನುದಾನ ಮೀಸಲಿಡಬೇಕು ಎಂದು ಕೇಳಿದ್ದೇವೆ ಎಂದರು.ಜನವರಿ 14ರ ನಂತರ ಹೊಸ ಮುಖ್ಯಮಂತ್ರಿ ಬರುತ್ತಾರೆ ಎಂದು ಈ ಹಿಂದೆಯೇ ಹೇಳಿದ್ದೆ. ಸದನದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪರೋಕ್ಷವಾಗಿ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.