ಬನ್ನಿಹಟ್ಟಿ ಗ್ರಾಮದ ಸ್ಮಶಾನ ಭೂಮಿ ಅಭಿವೃದ್ಧಿಗೆ ಕೆಲವರು ಅಡ್ಡಿ ಪಡಿಸುತ್ತಿದ್ದಾರೆ.
ಸಂಡೂರು: ತಾಲೂಕಿನ ಬನ್ನಿಹಟ್ಟಿ ಗ್ರಾಮದ ಸ್ಮಶಾನ ಭೂಮಿ ಅಭಿವೃದ್ಧಿಗೆ ಕೆಲವರು ಅಡ್ಡಿ ಪಡಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದ್ದಾರೆ. ಜೀವ ಬೆದರಿಕೆ ಹಾಕುವವರಿಂದ ತಮಗೆ ರಕ್ಷಣೆ ನೀಡಬೇಕೆಂದು ಕೋರಿ ಗ್ರಾಮದ ರೈತ ಮುಖಂಡ ವಿರುಪನಗೌಡ ಬುಧವಾರ ರೈತ ಸಂಘದ ನೇತೃತ್ವದಲ್ಲಿ ತಹಶೀಲ್ದಾರ್ ಜಿ ಅನಿಲ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ರೈತ ಮುಖಂಡ ವಿರುಪನಗೌಡ, ಗ್ರಾಮದ ಸ.ನಂ. ೬೯ರಲ್ಲಿ ೬.೫೪ ಎಕರೆ, ಸ.ನಂ.೬೬ರಲ್ಲಿ ೨.೦೨ ಎಕರೆ ಹಾಗೂ ಸ.ನಂ.೫೭ರಲ್ಲಿ ೦.೩೦ ಎಕರೆ ಜಮೀನುಗಳನ್ನು ರುದ್ರಭೂಮಿಗಳಿಗೆ ಕಾಯ್ದಿರಿಸಲಾಗಿದೆ. ಪಹಣಿ ಸಹ ಇದೆ. ಸದರಿ ಜಮೀನುಗಳಲ್ಲಿನ ರುದ್ರಭೂಮಿಗೆ ಕಂಪೌಂಡ್ ನಿರ್ಮಾಣ ಮಾಡಲು ಪಂಚಾಯ್ತಿ ಕಡೆಯಿಂದ ಆದೇಶವಿದ್ದರೂ ಬಸವನಗೌಡ, ಹನುಮಗೌಡ, ಚಂದ್ರಗೌಡ, ಜಗದೀಶ, ನಾಗನಗೌಡ, ಶಿವನಗೌಡ ಅವರು ಕಂಪೌಂಡ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಇವರ ವಿರೋಧದಿಂದಾಗಿ ರುದ್ರಭೂಮಿಯಲ್ಲಿ ಪಂಚಾಯ್ತಿಯವರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಈ ಕಾರಣದಿಂದ ಶವಗಳನ್ನು ಜನತೆ ಹಳ್ಳದ ಪಕ್ಕದಲ್ಲಿ ಹೂಳುತ್ತಿದ್ದಾರೆ ಎಂದು ದೂರಿದರು.
ಈ ಕುರಿತು ಪ್ರಶ್ನಿಸಿದ ನನ್ನ ಮೇಲೆಯೇ ಬಸವನಗೌಡ, ಶಿವನಗೌಡ ಮುಂತಾದವರು ಇಲ್ಲಸಲ್ಲದ ಆರೋಪ ಮಾಡುತ್ತಾ ಅವಮಾನಿಸುತ್ತಿರುವುದಲ್ಲದೆ, ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಮುಂದೆ ನನ್ನ ಜೀವಕ್ಕೆ ಆಪತ್ತು ಉಂಟಾದರೆ ಇವರೇ ಹೊಣೆಗಾರರು. ನನಗೆ ಜೀವ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.ರೈತ ಸಂಘದ ಕಲ್ಯಾಣ ಕರ್ನಾಟಕ ವಿಭಾಗೀಯ ಕಾರ್ಯದರ್ಶಿ ಎಂ.ಎಲ್.ಕೆ. ನಾಯ್ಡು, ಮುಖಂಡರಾದ ಷಣ್ಮುಖಪ್ಪ, ಟಿ. ರಮೇಶ ಮುಂತಾದವರು ಉಪಸ್ಥಿತರಿದ್ದರು.