ಗ್ಯಾಸ್ ಸಿಲಿಂಡರ್‌ಗೆ ಹಾರ ಹಾಕಿದ ಮುಖ್ಯಮಂತ್ರಿ , ಹೆಗಲ ಮೇಲೆ ಸಿಲಿಂಡರ್ ಹೊತ್ತ ಡಿ.ಕೆ.ಶಿವಕುಮಾರ್, ಪ್ಲೆಕಾರ್ಡ್ ಹಿಡಿದ ರಣದೀಪ್ ಸುರ್ಜೇವಾಲಾ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಮೊಳಗಿದ ಘೋಷಣೆಗಳು..
ಬೆಂಗಳೂರು : ಗ್ಯಾಸ್ ಸಿಲಿಂಡರ್‌ಗೆ ಹಾರ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಗಲ ಮೇಲೆ ಸಿಲಿಂಡರ್ ಹೊತ್ತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ಲೆಕಾರ್ಡ್ ಹಿಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಮೊಳಗಿದ ಘೋಷಣೆಗಳು...
ಇದು, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಸಿಡಿದೆದ್ದಿರುವ ರಾಜ್ಯ ಕಾಂಗ್ರೆಸ್ ನಾಯಕರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಿದ ಪ್ರತಿಭಟನಾ ಸ್ಥಳದಲ್ಲಿ ಕಂಡು ಬಂದ ದೃಶ್ಯಗಳು.
ಕರ್ನಾಟಕದಲ್ಲೀಗ ಎಲ್ಲವೂ ದುಬಾರಿಯಾಗಿದೆ ಎಂದು ಪ್ರಧಾನಿ ಮೋದಿ ಸೇರಿ ಕೇಂದ್ರ ಸರ್ಕಾರದ ಹಲವು ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡಿರುವ ಟೀಕೆಗಳಿಗೆ ಪ್ರತಿಯಾಗಿ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ನೀತಿಯೇ ಕಾರಣ ಎಂದು ತಿರುಗೇಟು ನೀಡುತ್ತಾ ಬಂದಿದ್ದ ರಾಜ್ಯ ಕಾಂಗ್ರೆಸ್ ನಾಯಕರು, ಗುರುವಾರ ಬೃಹತ್ ಪ್ರತಿಭಟನೆ ಮೂಲಕ ಆಕ್ರೋಶ ಹೊರ ಹಾಕಿದರು.
‘ಸಬ್ ಕಾ ಸಾಥ್- ಸಬ್ ಕಾ ವಿನಾಶ್’, ‘ಇಂಧನ ಬೆಲೆ ಏರಿಕೆ- ಅಚ್ಛೇ ದಿನ್ ಮರೀಚಿಕೆ’, ‘ಏರಿದ ಸಿಲಿಂಡರ್ ಬೆಲೆ- ವಾಪಸ್ ಬಂತು ಸೌದೆ ಒಲೆ’, ‘ಬೆಲೆ ಏರಿಕೆ ಬಿಸಿ-ಕಮ್ಮಿ ಮಾಡಿ ವಸಿ’, ‘ಪೆಟ್ರೋಲ್, ಡೀಸೆಲ್ ದುಬಾರಿ- ಸಾಮಾನ್ಯ ಜೇಬು ರಾಬರಿ’, ‘ಜಿಎಸ್‌ಟಿ ಹೊರೆ- ಜನರಿಗೆ ಬರೆ’ ಎಂಬ ಘೋಷಣೆಗಳನ್ನೊಳಗೊಂಡ ಪ್ಲೆಕಾರ್ಡ್‌ಗಳನ್ನು ಹಿಡಿದುಕೊಂಡಿದ್ದ ನಾಯಕರು ಪ್ರತಿಭಟನೆಯಲ್ಲಿ ಗಮನ ಸೆಳೆದರು. ಜತೆಗೆ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದರು. ಸಚಿವರು, ಶಾಸಕರು, ಮಹಿಳಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರ ಆರ್ಥಿಕ ನೀತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರದ ಜನರ ಪರವಾದ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿರುವ ಮೋದಿ ಮತ್ತು ಬಿಜೆಪಿ ನಾಯಕರು, ಇಂಧನ ಬೆಲೆ ಸೇರಿ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಸುಳ್ಳೇ ಬಿಜೆಪಿಯ ಮನೆ ದೇವ್ರು. ಸುಳ್ಳು ಆರೋಪಗಳನ್ನು ಮಾಡಿಕೊಂಡು ಜನಸಾಮಾನ್ಯರ ದಿಕ್ಕುತಪ್ಪಿಸುತ್ತಿರುವ ಬಿಜೆಪಿಗರು ಜನಾಕ್ರೋಶ ಯಾತ್ರೆ ಮಾಡುತ್ತಿರುವ ಉದ್ದೇಶವೇನು? ಎಂದು ಕಿಡಿಕಾರಿದರು.
ಪಕ್ಷದ ರಾಜ್ಯ ಉಸ್ತುವಾರಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಎಲ್‌ಪಿಜಿಗಾಗಿ 52 ಸಾವಿರ ಕೋಟಿ ಸಹಾಯಧನ ನೀಡಿದ್ದರು. ಮೋದಿ ಅವರು ಅದನ್ನು 10,600 ಕೋಟಿ ರು.ಗೆ ಇಳಿಸಿದ್ದಾರೆ. ಈ ಕಾರಣದಿಂದಲೇ ಯುಪಿಎ ಅಧಿಕಾರದ ಅವಧಿಯಲ್ಲಿ 415 ಇದ್ದ ಸಿಲಿಂಡರ್ ಬೆಲೆ ಈಗ 850ಕ್ಕೆ ಏರಿಕೆಯಾಗಿದೆ ಎಂದರು.
ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿಭಟನೆ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರದ ಬೆಲೆ ಏರಿಕೆ ನೀತಿ ವಿರುದ್ಧ ರಾಜ್ಯಾದ್ಯಂತ ಹೋರಾಟಗಳು ನಡೆಯಬೇಕು. ನಾಡಿನ ಜನತೆಗೆ ಬಿಜೆಪಿಯ ಜನವಿರೋಧಿ ನೀತಿ ಏನು ಎಂದು ಗೊತ್ತಾಗಬೇಕು. ಹಾಗಾಗಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಕವಾಗಿ ಹಮ್ಮಿಕೊಳ್ಳಬೇಕು ಎಂದು ಸೂಚಿಸುವುದಾಗಿ ಘೋಷಿಸಿದರು.
ಸಚಿವ ಕೃಷ್ಣಬೈರೇಗೌಡ, ಬಿಜೆಪಿ ಸರ್ಕಾರ ಬಂದಾಗಿನಿಂದ ಜನರ ಸುಲಿಗೆ ಆಗುತ್ತಿದೆ. ನಮ್ಮ ಹಳ್ಳಿಯ ತಿಪ್ಪಣ್ಣ, ತಿಮ್ಮಕ್ಕ ಬಡವರಾಗಿದ್ದಾರೆ. ಅಂಬಾನಿ, ಅದಾನಿ ಮಾತ್ರ ಶ್ರೀಮಂತ ಆಗುತ್ತಿದ್ದಾರೆ. ಜಿಗಣೆ, ತಿಗಣೆ ರಕ್ತ ಹೀರಿದಂತೆ ಕೇಂದ್ರ ಸರ್ಕಾರ ಜನರನ್ನು ಸುಲಿಗೆ ಮಾಡುತ್ತಿದೆ. ಕಾರ್ಪೊರೆಟ್ ತೆರಿಗೆಯನ್ನು ಶೇ.22ಕ್ಕೆ ಇಳಿಸಲಾಗಿದೆ. ಬಡವರಿಂದ ಹೆಚ್ಚು ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದಲೇ ದೇಶದಲ್ಲಿ ಎಲ್ಲದರ ಬೆಲೆ ಹೆಚ್ಚಾಗಿದೆ. ಮೋದಿ ಬಂದ ಮೇಲೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಬಡವರು ಮತ್ತಷ್ಟು ಬಡವರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಜಾರ್ಜ್ ಮಾತನಾಡಿ, ದೇಶದಲ್ಲಿ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಸುಳ್ಳು ಭರವಸೆ ನೀಡುವ ಮೂಲಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮೋದಿ ಸರ್ಕಾರ ಬಂದಾಗಿನಿಂದ ಒಂದು ಒಳ್ಳೆಯ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಸಚಿವ ಎಂ.ಬಿ.ಪಾಟೀಲ್, ಕೇಂದ್ರದಲ್ಲಿ 10 ವರ್ಷ ಯುಪಿಎ ಸರ್ಕಾರ ಇದ್ದಾಗ ಕಚ್ಚಾ ತೈಲದ ಬೆಲೆ ಜಾಸ್ತಿ ಇದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ಕೇವಲ 60 ರು.ಇತ್ತು. ನಂತರ ಬಿಜೆಪಿ ಸರ್ಕಾರ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಇಂಧನ ಬೆಲೆ ಏರಿಕೆ ಮಾಡಿದೆ. ಗ್ಯಾಸ್ ಬೆಲೆ 400 ರು.ಇದ್ದದ್ದು ಈಗ ಸಾವಿರ ದಾಟಿದೆ. ಕೇಂದ್ರ ಶ್ರೀಮಂತರ ಪರ ಮತ್ತು ಬಡವರ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ, ಎಚ್.ಸಿ.ಮಹದೇವಪ್ಪ, ಚಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ, ಈಶ್ವರಖಂಡ್ರೆ, ಲಕ್ಷ್ಮಿ ಹೆಬ್ಬಾಳ್ಕರ್, ಬೋಸರಾಜು, ದರ್ಶನಾಪೂರ್, ಎಂ.ಸಿ.ಸುಧಾಕರ್, ಬೈರತಿ ಸುರೇಶ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ರಾಷ್ಟ್ರೀಯ ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಸೇರಿ ಮತ್ತಿತರರು ಇದ್ದರು.