‘ತಮ್ಮಲ್ಲಿರುವ ದಾಖಲೆ ಕೊಟ್ಟರೆ ನಾವೇ ಅದನ್ನು ರಾಜ್ಯಪಾಲರಿಗೆ ತಲುಪಿಸುತ್ತೇವೆ’ ಎಂದು ಕ್ಯಾಂಟರ್ ಟ್ರಕ್‌ನಲ್ಲಿ ಜೆಡಿಎಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಬೆಂಗಳೂರು : ‘ಸರ್ಕಾರದ ಅಕ್ರಮಗಳ ಟನ್ ಗಟ್ಟಲೆ ದಾಖಲೆಗಳಿವೆ. ನನ್ನನ್ನು ಕೆಣಕಬೇಡಿ’ ಎಂದು ಸವಾಲು ಹಾಕಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರತಿ ಸವಾಲು ಹಾಕಿ ‘ತಮ್ಮಲ್ಲಿರುವ ದಾಖಲೆ ಕೊಟ್ಟರೆ ನಾವೇ ಅದನ್ನು ರಾಜ್ಯಪಾಲರಿಗೆ ತಲುಪಿಸುತ್ತೇವೆ’ ಎಂದು ಕ್ಯಾಂಟರ್ ಟ್ರಕ್‌ನಲ್ಲಿ ಜೆಡಿಎಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಶನಿವಾರ ತಮ್ಮಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಕುರಿತು ಟನ್ ಗಟ್ಟಲೆ ದಾಖಲೆಗಳಿವೆ ಎಂಬ ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜೆಡಿಎಸ್ ಕಚೇರಿಗೆ ತೆರಳಿ ಕುಮಾರಸ್ವಾಮಿ ಬಳಿಯಿರುವ ದಾಖಲೆಗಳನ್ನು ಸಂಗ್ರಹಿಸಲು ಕ್ಯಾಂಟರ್ ಟ್ರಕ್‌ನಲ್ಲಿ ಹೊರಟ್ಟಿದ್ದ ಪ್ರತಿಭಟನಾಕಾರರನ್ನು ಪೊಲೀಸರು ರೇಸ್‌ಕೋರ್ಸ್ ರಸ್ತೆಯಲ್ಲಿ ತಡೆಯೊಡ್ಡಿ ವಶ ಪಡೆದು, ನಂತರ ಬಿಡುಗಡೆಗೊಳಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೇತಗಾನಹಳ್ಳಿ, ಗಂಗೇನಹಳ್ಳಿ, ಹಲಗೆ ವಡೇರಹಳ್ಳಿ ಹಾಗೂ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ನಲ್ಲಿ ನಡೆದಿರುವ ಅಕ್ರಮದ ಬಗ್ಗೆ ಮೊದಲು ಉತ್ತರ ಕೊಡಲಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ನೈತಿಕತೆ ಹೊಂದಿರುವ ವ್ಯಕ್ತಿ ಅಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಬೆಲೆ ಏರಿಕೆಯನ್ನು ಖಂಡಿಸುವುದನ್ನು ಹೊರತುಪಡಿಸಿ ಕೇವಲ ಭ್ರಷ್ಟಾಚಾರದ ವಿಷಯ ಪ್ರಸ್ತಾಪಿಸಿ ನನ್ನ ಬಳಿ ಸಿಡಿ ಇದೆ, ಪೆನ್ ಡ್ರೈವ್ ಇದೆ ಎಂದು ಸುಳ್ಳು ಹೇಳಿಕೆ ನೀಡಿ ಎಂದಿನಂತೆ ಹಿಟ್ ಆ್ಯಂಡ್ ರನ್ ಮಾಡಿದ್ದಾರೆ. ಹಾಲಿನ ದರ ಏರಿಕೆ ಖಂಡಿಸುವ ಮೂಲಕ ರೈತ ವಿರೋಧಿ ಹೇಳಿಕೆಯನ್ನು ಕುಮಾರಸ್ವಾಮಿ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಹಾಗೂ ಎಂಇಐ ಅಧ್ಯಕ್ಷರಾದ ಶ್ರೀ ಎಸ್.ಮನೋಹರ್, ಎ.ಆನಂದ್ , ಎಂ.ಎ ಸಲೀಂ , ಪ್ರಕಾಶ್ , ನವೀನ್ , ಚಂದ್ರಶೇಖರ್, ಉಮೇಶ್ , ರಂಜಿತ್ , ಓಬಳೇಶ್ , ಚಿನ್ನಿ ಪ್ರಕಾಶ್, ವಾಸು, ಸಂಜಯ್ ಸಶಿಮಠ ಸೇರಿ ಮತ್ತಿತರರು ಪಾಲ್ಗೊಂಡಿದ್ದರು.