ಕೈ - ಬಿಜೆಪಿ ಬುಲ್ಡೋಜರ್‌ ಜಟಾಪಟಿ

KannadaprabhaNewsNetwork |  
Published : Dec 29, 2025, 02:15 AM ISTUpdated : Dec 29, 2025, 05:20 AM IST
bjp congress

ಸಾರಾಂಶ

 ಯಲಹಂಕದ ಅಕ್ರಮ ಶೆಡ್‌ ತೆರವುಗೊಳಿಸಿದ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ.   ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಕರೆ ಮಾಡಿ ಸಂತ್ರಸ್ತರಿಗೆ ಪುನರ್ ವಸತಿ ಹಾಗೂ ಪರಿಹಾರ ನೀಡುವಂತೆ ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಸೂಚಿಸಿರುವುದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ  

 ಬೆಂಗಳೂರು :  ರಾಜಧಾನಿ ಬೆಂಗಳೂರಿನ ಯಲಹಂಕದ ಕೋಗಿಲು ಬಡಾವಣೆಯ ಅಕ್ರಮ ಶೆಡ್‌ ತೆರವುಗೊಳಿಸಿದ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಪ್ರಕರಣ ಸಂಬಂಧ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಕರೆ ಮಾಡಿ ಸಂತ್ರಸ್ತರಿಗೆ ಪುನರ್ ವಸತಿ ಹಾಗೂ ಪರಿಹಾರ ನೀಡುವಂತೆ ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಸೂಚಿಸಿರುವುದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ವಿಷಯದಲ್ಲಿ ಮೂಗು ತೂರಿಸಲು ಕೆ.ಸಿ. ವೇಣುಗೋಪಾಲ್‌ ಯಾರು? ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು, ಪಕ್ಷದ ನಾಯಕರಾಗಿರುವುದರಿಂದ ವೇಣುಗೋಪಾಲ ಸಲಹೆ ನೀಡಬಹುದು ಎಂದಿದ್ದಾರೆ.

ಅಕ್ರಮ ಶೆಡ್‌ ತೆರವು ಮಾಡಿರುವುದು ಬುಲ್ಡೋಜರ್‌ ನ್ಯಾಯ ಎಂಬ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿಕೆಗೆ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೂ ಭಾನುವಾರ ಸಹ ಕೇರಳದ ಶಾಸಕ ಸೇರಿದಂತೆ ಕೇರಳದ ಕಮ್ಯುನಿಸ್ಟ್‌ ಪಕ್ಷಗಳ ಮುಖಂಡರು, ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರೂ ಕೋಗಿಲುಗೆ ಆಗಮಿಸಿದ್ದಾರೆ.

ಕೇರಳ ಶಾಸಕ ಜಲೀಲ್‌ ಅವರು ಸಂತ್ರಸ್ತರನ್ನು ಭೇಟಿ ಮಾಡಿ ಇಲ್ಲಿನ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಹಾಗೂ ದಲಿತ ವಿರೋಧಿ ಸರ್ಕಾರವಾಗಿದೆ. ಕಾಂಗ್ರೆಸ್ ಸರ್ಕಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀತಿಯನ್ನು ಅನುಸರಿಸುತ್ತಿದೆ. ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಬುಲ್ಡೋಜರ್ ನೀತಿ ಪ್ರಯೋಗಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಈ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದರೆ ಕೇರಳದ ಜನರು, ಸಂಘ-ಸಂಸ್ಥೆಗಳ ಮೂಲಕ ಜನರಿಗೆ ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದರ ನಡುವೆ ಡಿವೈಎಫ್‌ಐ ಸಂಘಟನೆಯ ಮುಖಂಡರು ಸ್ಥಳಕ್ಕೆ ಬಂದು ಸಂತ್ರಸ್ತರನ್ನು ಭೇಟಿ ಮಾಡಿ ನೆರವಿನ ಭರವಸೆ ನೀಡಿದ್ದಾರೆ. ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಸಹ ಭೇಟಿ ನೀಡಿ ಇದು ಸರ್ಕಾರಿ ಜಾಗವಾಗಿದ್ದು ಇದೇ ಸ್ಥಳದಲ್ಲಿ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು. ಒಂದೊಂದು ಮನೆಗೆ 5 ಲಕ್ಷ ರು. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸಿಹಿ ಸುದ್ದಿ ಸಿಗುವ ನಿರೀಕ್ಷೆ: ಜಮೀರ್‌

ಸೋಮವಾರ ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೋಗಿಲು ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಸಭೆ ಕರೆದಿದ್ದು, ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೋಗಿಲು ಮನೆ ತೆರವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ಸಮಸ್ಯೆಯ ಬಗ್ಗೆ ಸೋಮವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದರು.

ಸಿದ್ದು, ಡಿಕೆ ಪರಾಕ್ರಮ ಏನಾಯ್ತು

ಕೇರಳ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಂ ಓಲೈಸಲು ಮಾತನಾಡುತ್ತಿರುವ ಕೇರಳ ಸಿಎಂ ವಿಜಯನ್‌, ಕೆ.ಸಿ.ವೇಣುಗೋಪಾಲ್‌ಗೆ ಸರಿಯಾದ ತಿರುಗೇಟು ನೀಡದೆ ಹಿಂದೇಟು ಹಾಕಿದ್ದಾರೆ. ಎಲ್ಲಿ ಹೋಯಿತು ಸಿದ್ಧರಾಮಯ್ಯ ಅವರ ಗಡಸು ದನಿ? ಡಿ.ಕೆ.ಶಿವಕಮಾರ್‌ ಅವರ ಪರಾಕ್ರಮ ಅಡ್ರೆಸ್‌ಗೆ ಇಲ್ಲದಂತಾಗಿದೆ.

ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಮಾಜಿ ಡಿಸಿಎಂ

ವೇಣುಗೆ ಅಧಿಕಾರ ಇದೆ

ಕೆ.ಸಿ.ವೇಣುಗೋಪಾಲ್, ನಮ್ಮ ಆಡಳಿತದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ವೇಣುಗೋಪಾಲ್ ಅವರು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿದ್ದು, ನಮಗೆ ಸಲಹೆ ನೀಡಲು ಅವರಿಗೆ ಎಲ್ಲಾ ಅಧಿಕಾರ ಇದೆ. ಬಿಜೆಪಿ ರಾಷ್ಟ್ರೀಯ ನಾಯಕರು ಬಂದು ರಾಜ್ಯ ನಾಯಕರಿಗೆ ಸಲಹೆ ನೀಡುವುದಿಲ್ಲವೇ?

ಡಿ.ಕೆ.ಶಿವಕುಮಾರ್‌, ಡಿಸಿಎಂ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

36 ವರ್ಷದ ಬಳಿಕ ರಾಜ್ಯದಲ್ಲಿ ವಿದ್ಯಾರ್ಥಿ ಸಂಘಕ್ಕೆ ಎಲೆಕ್ಷನ್‌?
೨೦೨೮ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಕ್ರಾಂತಿ ಎಬ್ಬಿಸುತ್ತೆ: ಸಚಿವ ಚಲುವರಾಯಸ್ವಾಮಿ